ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಿಸಲು ನಿರ್ಧಾರ: ಕೆ.ಎಸ್‌. ಈಶ್ವರಪ್ಪ

6 ತಿಂಗಳ ಅವಧಿಗೆ ಆಡಳಿತ ಸಮಿತಿ
Last Updated 17 ಮೇ 2020, 13:32 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾದಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ‘ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

‘ಹಾಲಿ ಇರುವ ಸಮಿತಿಯನ್ನೇ ಮುಂದುವರಿಸಬೇಕೇ, ಆಡಳಿತಾಧಿಕಾರಿ ನೇಮಕ ಸೂಕ್ತವೇ ಅಥವಾ ಆಡಳಿತ ಸಮಿತಿ ನೇಮಿಸುವುದೇ ಎಂಬ ಮೂರು ಆಯ್ಕೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಂತಿಮವಾಗಿ ಆಡಳಿತ ಸಮಿತಿ ನೇಮಿಸಲು ಕಾನೂನುಬದ್ಧವಾಗಿ ಅವಕಾಶ ಇರುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

‘ರಾಜ್ಯದ 6,018 ಗ್ರಾಮ ಪಂಚಾಯಿತಿಯಲ್ಲಿ 96 ಸಾವಿರ ಸದಸ್ಯರಿದ್ದಾರೆ. ಗ್ರಾಮ ಪಂಚಾಯಿತಿಗೆ ಸದಸ್ಯರಾಗಲು ಎಲ್ಲ ಅರ್ಹತೆ ಇರುವವರನ್ನು ಆಯಾ ಜಿಲ್ಲಾಧಿಕಾರಿಗಳು ಆಡಳಿತ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಿದ್ದಾರೆ. ಈ ಸಮಿತಿ 6 ತಿಂಗಳವರೆಗೆ ಅಸ್ವಿತ್ವದಲ್ಲಿ ಇರಲಿದ್ದು, ಆರು ತಿಂಗಳು ಪೂರ್ಣಗೊಳ್ಳುವ ಮೊದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಅವರು ಹೇಳಿದರು.

‘ಆಡಳಿತ ಸಮಿತಿಗೆ ಅಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ರೋಸ್ಟರ್‌ ಪ್ರಕಾರವೇ ಸಮಿತಿ ಇರಲಿದೆ. ಈ ಸಮಿತಿಗೆ ಗ್ರೂಪ್ ‘ಎ’ ಅಥವಾ ಗ್ರೂಪ್‌ ‘ಬಿ’ ಶ್ರೇಣಿಯ ಅಧಿಕಾರಿಯನ್ನು ಅಧ್ಯಕ್ಷರಾಗಿ ನೇಮಿಸಿ, ಆರ್ಥಿಕ ಪ್ರತ್ಯೋಜನೆಯ ಅಧಿಕಾರ ನೀಡಲಾಗುತ್ತದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ತೀರ್ಮಾನಗಳನ್ನು ಸಮಿತಿ ತೆಗೆದುಕೊಳ್ಳಲಿದೆ. ಸಮಿತಿಯ ಸಲಹೆಗಳನ್ನು ಕಾನೂನಡಿ ಅವಕಾಶವಿದೆಯೇ ಎಂದು ಪರಿಶೀಲಿಸಿ ಅನುಷ್ಠಾನಗೊಳಿಸಲು ಅಧಿಕಾರಿ ಒಪ್ಪಿಗೆ ನೀಡಲಿದ್ದಾರೆ’ ಎಂದೂ ಈಶ್ವರಪ್ಪ ವಿವರಿಸಿದರು.

ಕಾನೂನು ಇಲಾಖೆ ಕಾರ್ಯದರ್ಶಿ, ಅಡ್ವೊಕೇಟ್‌ ಜನರಲ್‌ ಅವರು ನೀಡಿದ ಅಭಿಪ್ರಾಯದಂತೆ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT