ಮಂಗಳವಾರ, ಆಗಸ್ಟ್ 3, 2021
26 °C
ಉಡುಪಿಯಲ್ಲಿ 215 ಸೇರಿ 387 ಮಂದಿ ಗುಣಮುಖ

ಕೋವಿಡ್–19 | ರಾಜ್ಯದಲ್ಲಿ 308 ಹೊಸ ಪ್ರಕರಣ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕಿತ್ಸೆಗೆ ಸ್ಪಂದಿಸದೆ ನಗರದಲ್ಲಿ ಮೂವರು ಕೋವಿಡ್‌–19 ಗೆ ಮೃತಪಟ್ಟಿದ್ದು, ರಾಜ್ಯದಲ್ಲಿ ಹೊಸದಾಗಿ 308 ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 5,760ಕ್ಕೆ ಹೆಚ್ಚಿದೆ.

ನಗರದ 67 ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆಗೆ ಶೀತಜ್ವರ ಮಾದರಿಯ (ಐಎಲ್‌ಐ) ಲಕ್ಷಣಗಳಿದ್ದವು. ಇಬ್ಬರೂ ಇದೇ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಇದೇ 5ರಂದು ಮೃತಪಟ್ಟಿದ್ದರೆ, ಪುರುಷ ಸೋಮವಾರ ಮೃತಪಟ್ಟರು. ನಗರದ 65 ವರ್ಷದ ಇನ್ನೊಬ್ಬ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಇದೇ 4ರಂದು ಖಾಸಗಿ ಆಸ್ಪತ್ರೆಯೊಂದಕ್ಕೆ ಹಾಗೂ ಮರುದಿನ ಇನ್ನೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅದೇ ದಿನ ಮೃತಪಟ್ಟರು. ಈ ಮೂವರ ಸಾವಿನೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 64ಕ್ಕೆ ತಲುಪಿದೆ.

ಸೋಮವಾರ ಒಂದೇ ದಿನ 387 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಡುಪಿ ಜಿಲ್ಲೆಯಲ್ಲೇ 215 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿತರ ಪೈಕಿ 277 ಮಂದಿ ಹೊರ ರಾಜ್ಯದಿಂದ ಬಂದವರಾಗಿದ್ದು, ಅದರಲ್ಲಿ ಹೆಚ್ಚಿನವರು ಮಹಾರಾಷ್ಟ್ರದಿಂದ ಹಿಂದಿರುಗಿದವರು. ಕಲಬುರ್ಗಿಯಲ್ಲಿ 99 ಪ್ರಕರಣಗಳು ದಾಖಲಾಗಿದ್ದರೆ, ಯಾದಗಿರಿಯಲ್ಲಿ 66, ಬೀದರ್‌ನಲ್ಲಿ 48, ಉಡುಪಿಯಲ್ಲಿ 45, ಬೆಂಗಳೂರು ನಗರದಲ್ಲಿ 18, ಬಳ್ಳಾರಿಯಲ್ಲಿ 8, ಗದಗದಲ್ಲಿ 6, ಶಿವಮೊಗ್ಗ, ಧಾರವಾಡದಲ್ಲಿ ತಲಾ 4, ಹಾಸನ, ದಕ್ಷಿಣ ಕನ್ನಡದಲ್ಲಿ ತಲಾ 3,  ಬಾಗಲಕೋಟೆಯಲ್ಲಿ 2 ಹಾಗೂ ಕೊಪ್ಪಳ, ರಾಮನಗರಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ.

ಮನೆ ಮನೆ ಸಮೀಕ್ಷೆಗೆ ಸೂಚನೆ
ನವದೆಹಲಿ:
ಕೋವಿಡ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಮನೆ–ಮನೆ ಸಮೀಕ್ಷೆ ಮಾಡಿ, ತಪಾಸಣೆ ನಡೆಸಿ ಮತ್ತು ಸಕ್ರಿಯ ಪ್ರಕರಣಗಳ ಮೇಲೆ ನಿಗಾ ಇಡಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಿವಿಧ ರಾಜ್ಯಗಳ 45 ಜಿಲ್ಲೆಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಕರ್ನಾಟಕದ ಮಂಡ್ಯ ಮತ್ತು ಯಾದಗಿರಿ ಕೂಡ ಈ ಪಟ್ಟಿಯಲ್ಲಿ ಸೇರಿವೆ.

ಸಾವಿನ ಸಂಖ್ಯೆ 7,200ಕ್ಕೆ ಏರಿಕೆ
ಕೋವಿಡ್‌ ಬಾಧೆಯಿಂದ ಸೋಮವಾರ 271 ಮಂದಿ ಮೃತಪ‍ಟ್ಟಿದ್ದಾರೆ. ಈ ರೋಗದಿಂದ ಈವರೆಗೆ ಸತ್ತವರ ಸಂಖ್ಯೆ 7,200ಕ್ಕೆ ಏರಿದೆ. 9,983 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ದೆಹಲಿಯಲ್ಲಿ ವರದಿಯಾದ 1,282 ಹೊಸ ಪ್ರಕರಣಗಳನ್ನು ಇಲಾಖೆಯು ಗಣನೆಗೆ ತೆಗೆದುಕೊಂಡಿಲ್ಲ. ಇದನ್ನು ಸೇರಿಸಿದರೆ ಒಂದು ದಿನದ ಏರಿಕೆಯು 11,265 ಆಗುತ್ತದೆ.

ದೇಶದಲ್ಲಿ ದಿನವೊಂದಕ್ಕೆ 9,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆ ಆಗುತ್ತಿರುವುದು ಇದು ಸತತ ಐದನೇ ದಿನ. 

ಔಷಧಕ್ಕೆ ಅವಕಾಶ: ಇನ್ನೂ ಪ್ರಯೋಗದ ಹಂತದಲ್ಲಿರುವ ಔಷಧಗಳನ್ನು ಕೋವಿಡ್ ಪೀಡಿತರಿಗೆ ನೀಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಔಷಧ ನಿಯಮಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿ ಜಾರಿಯಾದರೆ, ಪ್ರಯೋಗದ ಹಂತದಲ್ಲಿರುವ ಔಷಧಗಳನ್ನು ಆಮದು ಮಾಡಿಕೊಳ್ಳಲು ಮತ್ತು ಸ್ಥಳೀಯವಾಗಿ ಉತ್ಪಾದಿಸಲು ಅನುಮತಿ ದೊರೆಯುತ್ತದೆ.

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಇರುವ ಔಷಧಗಳನ್ನು ಕೋವಿಡ್‌ನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ನೀಡಲು ತಿದ್ದುಪಡಿ ನಿಯಮಗಳು ಅವಕಾಶ ಮಾಡಿಕೊಡುತ್ತದೆ. ತಿದ್ದುಪಡಿಗೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಅವಕಾಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು