ಗುರುವಾರ , ಮಾರ್ಚ್ 4, 2021
29 °C

ರಾತ್ರಿಯಿಡೀ ಮಳೆಯಲ್ಲಿ ತೊಯ್ದ ಕಾರ್ಮಿಕರು: ‘ಮಕ್ಕಳಿಗೆ ಎದೆಹಾಲೂ ಇಲ್ಲ’

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಒಂದೂವರಿ ತಿಂಗಳಾತು. ಒಂದು... ಹೊತ್ತು ಊಟ. ಎಂಟ್‌ ತಿಂಗಳ ಕೂಸಿಗೆ ಉಣಸಾಕೂ ಎದ್ಯಾಗ ಹಾಲಿಲ್ಲ. ಅಂಗಡಿಯಿಂದ ಹಾಲು, ಬ್ರೆಡ್ಡು, ಔಷಧ ತಂದೇನಂದ್ರ ಕೈಯಾಗ ರೊಕ್ಕ ಇಲ್ಲ...’

ಹೀಗೆಂದು ಅಲವತ್ತುಕೊಂಡ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ದ್ಯಾವಮ್ಮ, ಮಡಿಲಲ್ಲಿ ಅಳುತ್ತಿದ್ದ ಮಗುವನ್ನು ಸುಮ್ಮನಿರಿಸುತ್ತಲೇ ಕಣ್ಣೀರು ತುಂಬಿಕೊಂಡರು.

ಮೂರು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಬಂದಿದ್ದ ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ 27 ಕಾರ್ಮಿಕರ ಕುಟುಂಬಗಳು ಮೈಸೂರಿನ ರಾಜೀವನಗರದ ಶೆಡ್‌ವೊಂದರಲ್ಲಿ ವಾಸಿಸುತ್ತಿದ್ದವು. ಅವರಲ್ಲಿ 11 ಪುಟಾಣಿಗಳು ಹಾಗೂ 11 ಜನ ಮಹಿಳೆಯರು ಇದ್ದಾರೆ. ಲಾಕ್‌ಡೌನ್‌ ಕಾರಣ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ.

ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಇವರು ವಾಸವಿದ್ದ ಶೆಡ್‌ ನೆಲಸಮವಾಗಿದೆ. ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೇ ಬೆಳಿಗ್ಗೆಯರೆಗೂ ಮರದ ಕೆಳಗೆ ಕಾಲ ಕಳೆದಿದ್ದು, ಮಳೆಯಲ್ಲಿ ತೊಯ್ದು ಹೋಗಿದ್ದಾರೆ.

ಸೋಮವಾರ ಗಂಟುಮೂಟೆ ಕಟ್ಟಿಕೊಂಡು, ಮಕ್ಕಳನ್ನು ಎತ್ತಿಕೊಂಡು ಏಳು ಕಿ.ಮೀ ನಡೆದು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಧಾವಿಸಿದ್ದಾರೆ. ಇಲ್ಲೂ ಅವರನ್ನು ಯಾರೂ ಕೇಳುವರಿಲ್ಲದೆ ಉದ್ಯಾನದೊಳಗೆ ಕುಳಿತಿದ್ದರು. ಬೆಳಿಗ್ಗೆಯಿಂದ ಸರಿಯಾಗಿ ಆಹಾರವು ಇಲ್ಲದೆ ಮಕ್ಕಳು ಕಂಗೆಟ್ಟಿದ್ದವು.

‘ಊರಿಂದ ತಂದಿದ್ದ ದವಸ–ಧಾನ್ಯ ಖಾಲಿಯಾಯಿತು. ದುಡಿದಿದ್ದ ಹಣದಲ್ಲೇ ಊಟಕ್ಕೆ ವ್ಯವಸ್ಥೆ ಮಾಡಿಕೊಂಡೆವು. ಒಂದಿಷ್ಟು ದಿನ ಕೆಲವರು ಆಹಾರ ಪೊಟ್ಟಣ ಕೊಟ್ಟರು. ಆಮೇಲೆ ದಿನಕ್ಕೆ ಒಮ್ಮೆ ಮಾತ್ರ ಊಟ ಸಿಗುತ್ತಿತ್ತು’ ಎಂದು ಗಂಗಾವತಿಯ ಜ್ಯೋತಿ ಅಳಲು ತೋಡಿಕೊಂಡರು.

‘ಊರಿಗೆ ಹೋಗಿ ಹೊಲದಲ್ಲಿ ಕೆಲಸ ಮಾಡಿ ಹೇಗೋ ಬದುಕು ಕಟ್ಟಿಕೊಳ್ಳುತ್ತೇವೆ. ಮೊದಲು ನಮ್ಮನ್ನು ಊರಿಗೆ ಕಳಿಸಿಕೊಡಲು ವ್ಯವಸ್ಥೆ ಮಾಡಿ’ ಎಂದು ಹನುಮೇಶ್‌ ಗೋಗರೆದರು.

ವ್ಯವಸ್ಥೆ ಮಾಡುತ್ತೇವೆ: ‘ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ. ಒಂದೆರಡು ದಿನಗಳಲ್ಲಿ ಅವರ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಳುಹಿಸಿಕೊಡುತ್ತೇವೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ತಮ್ಮಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಈ ಕಾರ್ಮಿಕರು ಎಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದೇ ನಮಗೆ ಮಾಹಿತಿ ಇರಲಿಲ್ಲ. ಕರೆ ಮಾಡಿ ದೂರು ನೀಡಿದ್ದರೆ ಸಹಾಯ ಕಲ್ಪಿಸಬಹುದಿತ್ತು.
-ತಮ್ಮಣ್ಣ, ಸಹಾಯಕ ಆಯುಕ್ತ, ಕಾರ್ಮಿಕ ಇಲಾಖೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು