ಭಾನುವಾರ, ಆಗಸ್ಟ್ 1, 2021
27 °C

ಕೋವಿಡ್: ಆರೈಕೆ ಬಳಿಕ ಪರೀಕ್ಷೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆ ಆರೈಕೆಗೆ ಒಳಗಾದವರಿಗೆ ಕೊರೊನಾ ಸೋಂಕು ಲಕ್ಷಣಗಳು 17 ದಿನಗಳವರೆಗೆ ಗೋಚರಿಸದಿದ್ದಲ್ಲಿ ಹಾಗೂ 10 ದಿನಗಳಿಂದ ಜ್ವರ ರಹಿತರಾಗಿದ್ದಲ್ಲಿ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಿ, ಆರೈಕೆಯನ್ನು ಮುಕ್ತಾಯಗೊಳಿಸಬಹುದು. ಈ ರೀತಿ ಆರೈಕೆಗೆ ಒಳಗಾದವರಿಗೆ ಕೋವಿಡ್ ಪರೀಕ್ಷೆಯ ಅಗತ್ಯ ಇಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ‌

ರೋಗ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳು ಕಾಣಿಸಿಕೊಂಡ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಒದಗಿಸಲು ನಿರ್ಧರಿಸಿರುವ ಸರ್ಕಾರ, ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಇದರಿಂದಾಗಿ ಗಂಭೀರವಾಗಿ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರಲಿದೆ ಎಂಬ ಕಾರಣಕ್ಕೆ ತಜ್ಞರ ಸೂಚನೆ ಅನುಸಾರ ಮನೆಯ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಮನೆಯ ಆರೈಕೆ ಅವಧಿಯಲ್ಲಿ ನಿಯಮಾವಳಿಯನ್ನು ವ್ಯಕ್ತಿ ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಕ್ತಿಯ ಆರೋಗ್ಯ ಮೊದಲಿನ ಸ್ಥಿತಿಗೆ ಬಂದಲ್ಲಿ ಪರೀಕ್ಷೆ ಇಲ್ಲದೆಯೇ ದೈನಂದಿನ ಕಾರ್ಯದಲ್ಲಿ ತೊಡಗಿಕೊಳ್ಳಬಹುದಾಗಿದೆ. 

ಈ ಮಾದರಿಯ ಆರೈಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುಮೋದನೆ ನೀಡಿದೆ. 50 ವರ್ಷ ಮೇಲ್ಪಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‌ಐವಿ, ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮನೆಯ ಆರೈಕೆಗೆ ಅವಕಾಶವಿಲ್ಲ. ಮನೆಯ ಆರೈಕೆಗೆ ಒಳಗಾದ ವ್ಯಕ್ತಿಯ ಕೈಗೆ ಟ್ಯಾಗ್ ಅಳವಡಿಕೆ ಮಾಡಲಾಗುತ್ತದೆ. ಅವರ ಮನೆಯ ಪ್ರವೇಶ ದ್ವಾರಕ್ಕೆ ಭಿತ್ತಿ ಪತ್ರ ಅಂಟಿಸಲಾಗುತ್ತದೆ. ವ್ಯಕ್ತಿ ನಿಗದಿತ ಅವಧಿಯವರೆಗೂ ಕೊಠಡಿಯಲ್ಲಿಯೇ ವಾಸ ಮಾಡಬೇಕು. ಮನೆಯ ಸದಸ್ಯರು ಅವರಿಂದ ಅಂತರ ಕಾಯ್ದುಕೊಳ್ಳಬೇಕು. 

ಮನೆ ಕ್ವಾರಂಟೈನ್‌ ಅವಧಿ ಮೊದಲಿನಂತೆಯೇ 14 ದಿನಗಳಿದ್ದು, ಸರ್ಕಾರ ಈ ನಿಯಮವನ್ನು ಬದಲಾಯಿಸಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು