ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಢೀಕೃತ ಕೋವಿಡ್‌ ಪ್ರಕರಣ: ಚೀನಾವನ್ನು ಹಿಂದಿಕ್ಕಿದ ಭಾರತ

Last Updated 16 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್‌ನಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಭಾರತದಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ನಿಯಂತ್ರಣದಲ್ಲಿದ್ದರೂ ದೃಢೀಕೃತ ಪ್ರಕರಣಗಳ ಸಂಖ್ಯೆಯಲ್ಲಿ ಇದೀಗ ಚೀನಾವನ್ನೂ ಹಿಂದಿಕ್ಕಿದೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉದ್ಯಮಿಗಳು ಹಾಗೂ ದೇಶದ ದುಡಿಯುವ ವರ್ಗದ ಜನ ಆರ್ಥಿಕ ಚಟುವಟಿಕೆಗಳನ್ನು ಪೂರ್ಣಪ್ರಮಾಣದ ಪುನರಾರಂಭಿಸಲು ಅವಕಾಶ ನೀಡುವಂತೆ ಕೇಂದ್ರವನ್ನು ಆಗ್ರಹಿಸುತ್ತಿದ್ದಾರೆ. ಆದರೆ, ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ ಮಾಡಿ, ಲಾಕ್‌ಡೌನ್‌ ನಾಲ್ಕನೇ ಹಂತ ಜಾರಿಗೊಳಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಕೊರೊನಾ ಸೋಂಕಿನ ‘ಜನಕ’ ಎನಿಸಿದ ಚೀನಾಕ್ಕಿಂತಲೂ ಪ್ರಕರಣಗಳ ಸಂಖ್ಯೆಯು ಭಾರತದಲ್ಲಿ ಹೆಚ್ಚಿದ್ದರೂ ಮರಣದ ಪ್ರಮಾಣ ಕಡಿಮೆ ಇದೆ. ಚೀನಾದಲ್ಲಿ 4,600 ಸಾವುಗಳು ಸಂಭವಿಸಿದರೆ, ಭಾರತದಲ್ಲಿ 2,752 ಸಾವುಗಳು ವರದಿಯಾಗಿವೆ. ಅದೇ ಅಮೆರಿಕ, ಇಂಗ್ಲೆಂಡ್‌ ಹಾಗೂ ಇಟಲಿಯಲ್ಲಿ ಸಾವಿನ ಪ್ರಮಾಣ ತುಂಬಾ ಹೆಚ್ಚಿದೆ.

‘ದೇಶದಲ್ಲಿ ಸೋಂಕು ಹರಡುವ ಪ್ರಮಾಣವು ಇಳಿಮುಖವಾಗಿದ್ದು, ಸದ್ಯ ಪ್ರತಿ 11 ದಿನಗಳಿಗೊಮ್ಮೆ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಲಾಕ್‌ಡೌನ್‌ ಪೂರ್ವದಲ್ಲಿ ಪ್ರತಿ ಮೂರೂವರೆ ದಿನಗಳಿಗೊಮ್ಮೆ ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದವು. ಲಾಕ್‌ಡೌನ್‌ ಜಾರಿಯಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳುತ್ತಾರೆ.

‘ದೇಶದಲ್ಲಿ ಕೊರೊನಾ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸದಿರಲು ಬಹುತೇಕ ಸೋಂಕಿತರು ಆರಂಭಿಕ ಲಕ್ಷಣ ಕಾಣಿಸಿಕೊಂಡಾಗಲೇ ಪತ್ತೆಯಾಗಿದ್ದು ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ಬಹುಬೇಗ ನಿರ್ಬಂಧ ಹೇರಿ, ಜನರ ಓಡಾಟಕ್ಕೆ ತಡೆಹಾಕಿದ್ದು ಕಾರಣ’ ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಾರೆ.

ದೇಶದಲ್ಲಿ ಮಹಾರಾಷ್ಟ್ರವು ಸೋಂಕಿನಿಂದ ತೀವ್ರ ಬಾಧೆಗೆ ಒಳಗಾಗಿದೆ. ಅದರಲ್ಲೂ ಮುಂಬೈ ಸೋಂಕಿನ ಕೇಂದ್ರವೇ ಆಗಿಬಿಟ್ಟಿದೆ. ತಮಿಳುನಾಡು, ಗುಜರಾತ್‌ ಮತ್ತು ದೆಹಲಿಯಲ್ಲೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ತಪಾಸಣೆ ವಿಷಯದಲ್ಲಿ ಭಾರತ ಬೇರೆ ದೇಶಗಳಿಗಿಂತ ಹಿಂದೆ ಬಿದ್ದಿದೆ. 130 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ನಿತ್ಯ ಒಂದು ಲಕ್ಷ ತಪಾಸಣೆಗಳು ಮಾತ್ರ ನಡೆಯುತ್ತಿದ್ದು, ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಎಂಬ ಕಳವಳ ಕೂಡ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT