ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19| ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ಅಸ್ತಿತ್ವಕ್ಕೆ: ಶ್ರೀರಾಮುಲು

Last Updated 17 ಮಾರ್ಚ್ 2020, 7:41 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಇದುವರೆಗೆ 10 ಕೋವಿಡ್ -19 ಪ್ರಕರಣ ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ‌ ಶ್ರೀರಾಮುಲು ತಿಳಿಸಿದರು.

ರಾಜ್ಯದಲ್ಲಿ 1.75 ಲಕ್ಷ ಜನರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ. 75 ಸಾವಿರ‌ ಜನರಿಗೆ‌ ಕ್ವಾರಂಟೇನ್ ಮಾಡಲಾಗಿದೆ. ಕಲಬುರ್ಗಿಯಲ್ಲಿ ಮೃತ ವ್ಯಕ್ತಿಯ ನಾಲ್ವರು ಸಂಬಂಧಿಕರ ಗಂಟಲು ದ್ರವ ಪರೀಕ್ಷಿಸಿದ್ದು, ಮೂವರಲ್ಲಿ ಸೋಂಕು ಇಲ್ಲ. ಒಬ್ಬರಲ್ಲಿ ಕೋವಿಡ್-19 ದೃಢಪಟ್ಟಿದೆ. ಕಲಬುರ್ಗಿಯಲ್ಲಿಯೇ ಇನ್ನೊಂದು‌ ಪ್ರಕರಣವೂ ಇದೀಗ ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.

ದೇವಸ್ಥಾನಗಳಲ್ಲಿ ಸೇವೆಗಳಿಗೆ ನಿರ್ಬಂಧ

ಜಿಲ್ಲೆಯ ಎಲ್ಲ‌‌ ದೇವಸ್ಥಾನಗಳಲ್ಲಿ‌ ದೇವರ ಸೇವೆಗಳನ್ನು ರದ್ದುಪಡಿಸಲಾಗಿದೆ. ಭಕ್ತರು ದೇವರ ದರ್ಶನ ಮಾಡಬಹುದಾಗಿದ್ದು, ದೇವಸ್ಥಾನದ ಸಿಬ್ಬಂದಿ ಮಾತ್ರ ದೇವಸ್ಥಾನಗಳ‌ ಉತ್ಸವಾದಿ ಕಾರ್ಯಕ್ರಮಗಳಲ್ಲಿ‌ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಬೀಚ್ಗಳಲ್ಲೂ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.‌ ಜನರು‌ ಹೆಚ್ಚಾಗಿ ಸೇರುವುದನ್ನು ನಿರ್ಬಂಧಿಸುವ ಮೂಲಕ ಕೊರೊನಾ ಸೋಂಕು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳದ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನಲ್ಲಿ ಶೀಘ್ರದಲ್ಲಿ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಹೇಳಿದರು.

ಇದೇ 14 ರಂದು ದುಬೈನಿಂದ ಬಂದಿದ್ದ ಕೇರಳದ ವ್ಯಕ್ತಿಯಲ್ಲಿ ಕೋವಿಡ್ -19 ದೃಢಪಟ್ಟಿದೆ. ಈ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ‌ ಇಳಿದು, ಕೇರಳಕ್ಕೆ ತೆರಳಿರುವುದು ತಿಳಿದುಬಂದಿದೆ. ಹೀಗಾಗಿ ಎರಡೂ ರಾಜ್ಯಗಳ‌ ಸರ್ವಲೆನ್ಸ್ ತಂಡಗಳು ಆ ವ್ಯಕ್ತಿಯ ಚಲನವಲನ ಹಾಗೂ ಆತ ಯಾರನ್ನು ಭೇಟಿ ಮಾಡಿದ್ದ, ಎಲ್ಲೆಲ್ಲಿ ಭೇಟಿ ನೀಡಿದ್ದ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ರಜೆ ಮುಂದುವರಿಕೆ ಕುರಿತು ಶೀಘ್ರ ನಿರ್ಧಾರ

ಕೊರೊನಾ ವೈರಸ್ ಸೋಂಕು ತಡೆಗಾಗಿ ಶಾಲಾ, ಕಾಲೇಜುಗಳು, ಮಾಲ್ ಗಳಿಗೆ ಘೋಷಿಸಿರುವ ರಜೆ ವಿಸ್ತರಣೆ ಕುರಿತು ಶೀಘ್ರದಲ್ಲಿ ನಿರ್ಧಾರಕ್ಕೆ ಬರಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಇಲ್ಲಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಭೇಟಿನೀಡಿ ಕೊರೊನಾ ವೈರಸ್ ಸೋಂಕು ತಗುಲಿದವರು ಮತ್ತು ಶಂಕಿತ ರೋಗಿಗಳ ಚಿಕಿತ್ಸೆಗಾಗಿ ಮಾಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಸೋಂಕು ಹರಡದಂತೆ ತಡೆಯಲು ಜನರು ಮನೆಯಲ್ಲೇ ಉಳಿಯುವುದು ಅಗತ್ಯ. ಈ ಕಾರಣದಿಂದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲ್ ಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ಕಂಡುಬಂದಲ್ಲಿ ರಜೆ ಮತ್ತು ಬಂದ್ ಮುಂದುವರಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದರು.

ಮಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದವರು ಮತ್ತು ಶಂಕಿತ ರೋಗಿಗಳ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ‌. ಸೋಂಕಿನ ಲಕ್ಷಣಗಳು ಕಂಡುಬಂದರೆ ಜನರು ತಕ್ಷಣವೇ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು‌ ಎಂದು ಮನವಿ ಮಾಡಿದರು.

ಸಂಪರ್ಕದಲ್ಲಿದ್ದವರ ಪತ್ತೆಗೆ ಪ್ರಯತ್ನ

ದುಬೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಸರಗೋಡು ತಲುಪಿದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್- 19 ಸೋಂಕು ಇರುವುದು ಖಚಿತವಾಗಿದೆ. ಆ ವ್ಯಕ್ತಿಯ ಜೊತೆ ವಿಮಾನದಲ್ಲಿ ಬಂದವರು ಮತ್ತು ನಂತರ ಸಂಪರ್ಕದಲ್ಲಿ ಇದ್ದವರ ಪತ್ತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.

ಜನರು ಭಯಪಡುವ ಅಗತ್ಯ ಇಲ್ಲ. ಕೊರೊನಾ ವೈರಸ್ ತಗಿಲಿದ ಎಲ್ಲರಿಗೂ ಪ್ರಾಣಕ್ಕೆ ತೊಂದರೆ ಆಗುವುದಿಲ್ಲ. ಈ ರೋಗದಿಂದ ಮೃತರಾಗುವವರ ಪ್ರಮಾಣ ತೀರಾ ಕಡಿಮೆ ಇದೆ. ಜನರು ಭಯಪಡುವ ಬದಲಿಗೆ ಆರೋಗ್ಯ ಇಲಾಖೆಯ ಸಲಹೆ, ಸೂಚನೆಗಳನ್ನು ಪಾಲಿಸಬೇಕು ಎಂದು ವಿನಂತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT