ಮಂಗಳವಾರ, ಆಗಸ್ಟ್ 3, 2021
21 °C

ಬೌರಿಂಗ್ ಆಸ್ಪತ್ರೆ ನಿರ್ದೇಶಕರನ್ನು ರಜೆ ಮೇಲೆ ಕಳಿಸಿದ್ದು ಯಾಕೆ: ಖಂಡ್ರೆ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್-19 ಚಿಕೆತ್ಸೆಗೆ ಮೀಸಲಾಗಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಿರುವ ವಿಚಾರವೀಗ ಕಾಂಗ್ರೆಸ್‌ ನಾಯಕರ ಟೀಕೆಗೆ ಗುರಿಯಾಗಿದೆ.

ಕೋವಿಡ್‌-19 ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅಕ್ರಮ ಎಸಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಆಸ್ಪತ್ರೆ ವೈದ್ಯರನ್ನು ರಜೆ ಮೇಲೆ ಕಳುಹಿಸಿದ್ದಕ್ಕೆ ಮಾಜಿ ಸಚಿವ ಈಶ್ವರ್‌ ಖಂಡ್ರೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ. 

'ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಅಕ್ರಮ ಎಸೆಗಿದ ಭ್ರಷ್ಟ ಬಿಜೆಪಿ ಸರ್ಕಾರ ಈಗ ಆಸ್ಪತ್ರೆ ವೈದ್ಯರನ್ನ ಧಿಡೀರ್ ರಜೆ ಮೇಲೆ ಕಳುಹಿಸಿದೆ. ರಾಜ್ಯದ ಪ್ರಮುಖ ಕೋವಿಡ್ ಆಸ್ಪತ್ರೆಯಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್ ಅವರನ್ನು ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಲಾಗಿದೆ' ಎಂದು ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ. 

 
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿರುವ ಖಂಡ್ರೆ, 'ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನು ನಿರ್ದೇಶಕರನ್ನಾಗಿಸುವ ಪ್ರಯತ್ನ ನಡೆದಿದೆ. ಸ್ವತಃ ಬೌರಿಂಗ್ ಆಸ್ಪತ್ರೆ ವೈದ್ಯರೇ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನ್ಯ ಸುಧಾಕರ್ ಅವರೇ ನಿಮ್ಮ ಮೂಗಿನ ಕೆಳಗೆ ಎಲ್ಲಾ ನಡಿಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ?' ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ಅವರನ್ನು ಪ್ರಶ್ನಿಸಿದ್ದಾರೆ.

'ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನು ರಜೆಗೆ ಕಳುಹಿಸಿದ್ದು ಯಾಕೆ ? ಏಕಾಏಕಿ ನಿರ್ದೇಶಕರನ್ನು ಬದಲಾಯಿಸೋದು ಯಾಕೆ? ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಸ್ವಾಮಿ? ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ ಉತ್ತರಿಸಿ...' ಎಂದು ಈಶ್ವರ್‌ ಖಂಡ್ರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಕೆ.ಸುಧಾಕರ್‌ ಅವರನ್ನು ಕೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು