ಶುಕ್ರವಾರ, ಜೂಲೈ 10, 2020
24 °C

ವಲಸೆ ಕಾರ್ಮಿಕರ ಬದುಕು-ಬವಣೆ| ಮಕ್ಳು ಹಸದ್ದಾವು ತಿನ್ಲಾಕ್ ಏನರೆ ಕೋಡ್ರಿಯಪ್ಪ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: 'ನಿನ್ನೆ ರಾತ್ರಿಯಿಂದ ಏನು ಕೊಟ್ಟಿಲ್ಲ. ದೊಡ್ಡವರು ಸಾಯ್ಲಿ; ನಡೀತದ. ಸಣ್ಣಸಣ್ಣ ಮಕ್ಳ್ ಹಸದ್ದಾವು ತಿನ್ಲಾಕ್ ಏನರ ಕೋಡ್ರಿಯಪ್ಪ...'

ಪುಟ್ಟ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡಿದ್ದ 'ಪಟ್ಟಣ' ಎಂಬ ಹಳ್ಳಿಯ ಆ ಹೆಣ್ಣುಮಗಳು ಮಾಧ್ಯಮದವರ ಮುಂದೆ ಪದೇಪದೇ ಬೇಡಿಕೊಳ್ಳುತ್ತಲೇ ಇದ್ದರು. ಕೆಲಸ ಅರಸಿ ಹುಬ್ಬಳ್ಳಿ- ಧಾರವಾಡಕ್ಕೆ ವಲಸೆ ಹೋಗಿದ್ದ ಅವರು, ಈಗ ತಮ್ಮೂರಿಗೆ ಮರಳುವ ಹಾದಿಯಲ್ಲಿದ್ದಾರೆ. ಇನ್ನೇನು ಊರು ಸೇರಲು ಹತ್ತಿರ ಬಂದಿದ್ದೇವೆ ಎಂಬ ಸಮಾಧಾನ ಇದ್ದರೂ, ನಿನ್ನೆ ರಾತ್ರಿಯಿಂದ ಹಸಿದ ಹೊಟ್ಟೆ ಅವರನ್ನು ಬಾಧಿಸುತ್ತಿದೆ.

ಆರು ತಿಂಗಳ ಹಿಂದೆಯೇ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡ ಕಾಮಗಾರಿಗಾಗಿ ಹುಬ್ಬಳ್ಳಿ- ಧಾರವಾಡಕ್ಕೆ ಹೋಗಿದ್ದರು. ಧಾರವಾಡ ಜಿಲ್ಲಾಡಳಿತ ಮೊದಲ ಹಂತದಲ್ಲಿ 120 ಮಂದಿಯನ್ನು ಮರಳಿ ಜಿಲ್ಲೆಗೆ ಕಳುಹಿಸಿದೆ. ಒಂದು ಸರ್ಕಾರಿ ಬಸ್ಸಿನಲ್ಲಿ 20 ಮಂದಿಯಂತೆ ಆರು ಬಸ್ಸಿನಲ್ಲಿ ಇವರು ಬಂದಿದ್ದಾರೆ. ಆರೋಗ್ಯ ತಪಾಸಣೆಗಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಲ್ಲರನ್ನೂ ತಡೆಯಲಾಗಿದೆ.

ಇದನ್ನೂ ಓದಿ: ಮತ್ತೆ ಬೆಂಗಳೂರಿಗೆ ಬರಲ್ಲ: ಊರಿಗೆ ಹೊರಟ ವಲಸೆ ಕಾರ್ಮಿಕ

ಶುಕ್ರವಾರ ತಡರಾತ್ರಿ 1 ಗಂಟೆಗೆ ಇವರೆಲ್ಲ ಗಂಟುಮೂಟೆ ಕಟ್ಟಿಕೊಂಡು ಬಸ್ ಹತ್ತಿದ್ದಾರೆ. ಶನಿವಾರ ಬೆಳಿಗ್ಗೆ 9ಕ್ಕೆ ಕಲಬುರ್ಗಿ ತಲುಪಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಯಾರಿಗೂ ಏನನ್ನೂ ತಿನ್ನಲು ಕೂಟ್ಟಿಲ್ಲ. 

ಎಲ್ಲರೂ ಬಸ್ಸಿನಲ್ಲೇ ಕಾಯಬೇಕು ಎಂದು ಪೊಲೀಸರು ಕಾವಲು ನಿಂತಿದ್ದಾರೆ. 44 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಬಸ್ಸಿನಲ್ಲಿ ಕುಳಿತುಕೊಳ್ಳಲು ಮಹಿಳೆಯರು, ಮಕ್ಕಳು ಸಂಕಟ ಪಡಬೇಕಾಯಿತು.

ಇದನ್ನೂ ಓದಿ: ಬೆಂಗಳೂರು: ಊರಿಗೆ ಮರಳಲು ವಲಸೆ ಕಾರ್ಮಿಕರ ಕಾತರ, ಮೆಜೆಸ್ಟಿಕ್‌ನಲ್ಲಿ ಜನಸಂದಣಿ

ಧಾರವಾಡ ಗಡಿಯಲ್ಲಿ ಸ್ಕ್ರೀನಿಂಗ್ ಮಾಡಿ ಕಳಿಸಲಾಗಿದೆ. ನಿಯಮದ ಪ್ರಕಾರ ಕಲಬುರ್ಗಿಯಲ್ಲೂ ಆರೋಗ್ಯ ತಪಾಸಣೆ ಮಾಡಬೇಕು. ದಾಖಲೆ ಪರಿಶೀಲಿಸಬೇಕು. ಇದಕ್ಕಾಗಿ ಎಲ್ಲರನ್ನು ತಡೆತಲಾಗಿದೆ.

ಇದನ್ನೂ ಓದಿ: ಊರಿಗೆ ಕಳುಹಿಸಿಕೊಡಿ ಎಂದು ಮೆಟ್ರೊ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ

'ದೊಡ್ಡವರು ಹೇಗೋ ತಾಳಿಕೊಳ್ಳುತ್ತೇವೆ. ಮಕ್ಕಳ ಮುಖ ನೋಡಲು ಆಗುತ್ತಿಲ್ಲ. ಬೆನ್ನಿಗೆ ಕಟ್ಟಿಕೊಂಡ ಬಂದ ಬುತ್ತಿ ಖಾಲಿ ಆಗಿದೆ. ಒಂದೂವರೆ ತಿಂಗಳಿಂದ ಹೆಣಭಾರ  ಬದುಕಿದ್ದೇವೆ. ಇಲ್ಲಿ ಇನ್ನಷ್ಟು ಕಾಯಲು ನಮಗೇನೂ ಕಷ್ಟವಿಲ್ಲ. ಕೂಸುಗಳು, ಬಾಲಕರು, ಬಾಣಂತಿಯರು, ಗರ್ಭಿಣಿಯರೂ ಇದ್ದಾರೆ. ಅವರಿಗೆ ಅನ್ನ ನೀರು ಕೊಟ್ಟರೆ ಸಾಕು' ಎಂದು ಹಲವರು ಗೋಗರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು