ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ₹62 ಕೋಟಿ ವೆಚ್ಚ ಸಂದೇಹಾಸ್ಪದ, ಪಿಎಸಿ ಸಭೆಯಲ್ಲಿ ಆಕ್ಷೇಪ

ಕಾರ್ಮಿಕರಿಗೆ ₹5 ಸಾವಿರ ಪರಿಹಾರ ನೀಡಿದ್ದಕ್ಕೆ ದಾಖಲೆಗಳೇ ಇಲ್ಲ
Last Updated 17 ಜೂನ್ 2020, 1:33 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಸಂದರ್ಭ ಕಾರ್ಮಿಕರಿಗೆ ಆಹಾರದ ಕಿಟ್‌, ಊಟ ಮತ್ತು ಪರಿಹಾರ ಧನ ವಿತರಿಸಲು ಮಾಡಿರುವ ಖರ್ಚಿನಲ್ಲಿ ₹62 ಕೋಟಿ ಅನುಮಾನಕ್ಕೆಡೆ ಮಾಡಿದ್ದು, 15 ದಿನಗಳಲ್ಲಿ ನಿಖರ ಲೆಕ್ಕಗಳನ್ನು ಒಪ್ಪಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಅಧ್ಯಕ್ಷ ಎಚ್‌.ಕೆ.ಪಾಟೀಲ‌ ಕಟ್ಟಪ್ಪಣೆ ಮಾಡಿದ್ದಾರೆ.

ಮಂಗಳವಾರ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಅವರು ಒಪ್ಪಿಸಿದ ಲೆಕ್ಕಪತ್ರದ ಬಗ್ಗೆ ಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರಿಂದಲೂ ಅಸಮಾಧಾನ ವ್ಯಕ್ತವಾಯಿತು.

ಕಳೆದ ಸಭೆಯಲ್ಲಿ ಕಾರ್ಮಿಕರಿಗಾಗಿ ಮಾಡಿದ ಖರ್ಚುವೆಚ್ಚಗಳ ಬಗ್ಗೆ 10 ಪ್ರಶ್ನೆಗಳನ್ನು ಕಾರ್ಮಿಕ ಇಲಾಖೆಗೆ ಕೇಳಲಾಗಿತ್ತು. ಊಟ, ಆಹಾರ ಕಿಟ್‌ಗಳ ವಿತರಣೆ, ₹5,000ರ ಪರಿಹಾರ ಎಷ್ಟು ಕಾರ್ಮಿಕರಿಗೆ ಪಾವತಿಸಲಾಗಿದೆ ಎಂಬ ಪ್ರಶ್ನೆಗಳೂ ಇದ್ದವು.

‘ಒಟ್ಟು14 ಲಕ್ಷ ಕಾರ್ಮಿಕರಿದ್ದಾರೆ. ಕಿಟ್‌ಗಳಿಗೆ ₹69 ಕೋಟಿ, ಊಟ ಮತ್ತಿತರ ವ್ಯವಸ್ಥೆಗೆ ₹39 ಕೋಟಿ ಸೇರಿದಂತೆ ಒಟ್ಟು ₹ 900 ಕೋಟಿ ಖರ್ಚು ಮಾಡಲಾಗಿದೆ’ ಎಂದು ಮಹೇಶ್ವರರಾವ್‌ ತಿಳಿಸಿದರು.

ಇದರಲ್ಲಿ ₹62 ಕೋಟಿ ಖರ್ಚು ಸಂದೇಹಾಸ್ಪದವಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರಲ್ಲದೆ, ಲೆಕ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.

‘ಕಿಟ್‌ಗಳು ಯಾರಿಗೆ ಕೊಟ್ಟಿದ್ದೀರಿ? ಅವರಲ್ಲಿ ಸಂಘಟಿತರು ಎಷ್ಟು ಮತ್ತು ಅಸಂಘಟಿತ ಕಾರ್ಮಿಕರು ಎಷ್ಟು ಎಂಬ ಮಾಹಿತಿ ನೀಡಿ. ಒಟ್ಟು ಖರ್ಚು ಮಾಡಿದ ಹಣದ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಪಡೆದುಕೊಂಡು 15 ದಿನಗಳಲ್ಲಿ ನೀಡಬೇಕು’ ಎಂದು ಅಧ್ಯಕ್ಷ
ಎಚ್‌.ಕೆ.ಪಾಟೀಲ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸದಸ್ಯರಾದ ಉಮೇಶ ಕತ್ತಿ, ರವಿಸುಬ್ರಹ್ಮಣ್ಯ, ವೈ.ಎ.ನಾರಾಯಣಸ್ವಾಮಿ, ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅಧಿಕಾರಿಗಳು ನೀಡಿದ ಲೆಕ್ಕದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಉಮೇಶ ಕತ್ತಿ ಮಾತನಾಡಿ, ‘ನಮ್ಮಕ್ಷೇತ್ರಕ್ಕೆ ಒಂದೇ ಒಂದೂ ಕಿಟ್‌ ಬಂದಿಲ್ಲ’ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ರವಿ
ಸುಬ್ರಹ್ಮಣ್ಯ, ‘ನಮ್ಮ ಕ್ಷೇತ್ರಕ್ಕೆ ನಾಲ್ಕು ಸಾವಿರ ಕಿಟ್‌ ಪಡೆಯಲು ಹರಸಾಹಸಪಡಬೇಕಾಯಿತು’ ಎಂದು ಹೇಳಿದರು.
‘ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ₹5,000 ಪರಿಹಾರ ಧನವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ದಾಖಲೆಗಳೇ ಇಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT