ಸೋಮವಾರ, ಮೇ 17, 2021
28 °C

ಬೆಳೆ, ತರಕಾರಿ ಸಾಗಣೆ ಕಷ್ಟ: ಹೊಲದಲ್ಲೇ ಕೊಳೆಯುತ್ತಿವೆ ಕೃಷಿ ಉತ್ಪನ್ನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯದಲ್ಲಿ ಸದ್ಯ ವಿಧಿಸಿರುವ ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಗಡಿ ದಾಟಲು ನಿರ್ಬಂಧ ಇ‌ರುವ ಕಾರಣ ಮೈಸೂರು ಭಾಗದಲ್ಲಿ ಬೆಳೆದ ತರಕಾರಿ, ಹಣ್ಣು, ಹೂವುಗಳು ಹೆಚ್ಚಾಗಿ ಬರುತ್ತಿದ್ದ ಕೇರಳ, ತಮಿಳುನಾಡಿನ ಖರೀದಿದಾರರು ಬರುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಈಗ 10 ಸಾವಿರ ಹೆಕ್ಟೇರ್‌ನಲ್ಲಿ ತರಕಾರಿ ಬಂಪರ್ ಫಸಲು ಬಂದಿದೆ. ಕೊಯ್ಲು ಮಾಡುವ ಹೊತ್ತಿಗೆ ಈ ಸಂಕಟ ಶುರುವಾಗಿದೆ. 

‘ಕೇರಳ, ತಮಿಳುನಾಡು ಕಡೆ  ನಿತ್ಯ 100ಕ್ಕೂ ಹೆಚ್ಚು ಲಾರಿಗಳಲ್ಲಿ ತರಕಾರಿ, ಹಣ್ಣು ಹೋಗುತ್ತಿತ್ತು. ಈಗ 10–15 ಲಾರಿಗಳಷ್ಟೇ ಹೋಗುತ್ತಿದೆ’ ಎನ್ನುತ್ತಾರೆ ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್‌.

ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ ಫಸಲು ಸಾಗಿಸಲು ಕಷ್ಟವಾಗಿದೆ. ಪುಷ್ಪೋದ್ಯಮ ಕುಸಿದಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ನಾಗಮಂಗಲ ಕಡೆ ಬೆಳೆದ ಕಲ್ಲಂಗಡಿ ಹಣ್ಣು ಮಾರಲಾಗುತ್ತಿಲ್ಲ. ಕೊಳೆತು ತಿಪ್ಪೆಗೆ ಸುರಿಯವಂತಾಗಿದೆ. 

ಹಾಸನದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ತರಕಾರಿ ಸರಬರಾಜು ಮಾಡಲು ಲಾರಿ ಮಾಲೀಕರು ಮುಂದೆ ಬರುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಾಫಿ, ಶುಂಠಿ ಹಾಗೂ ಕಾಳು ಮೆಣಸು ಖರೀದಿದಾರರಿಂದ ಉತ್ಸಾಹ ಕಾಣುತ್ತಿಲ್ಲ. ಸಾಗಣೆಗೆ ಸಿಗದ ಸೌಲಭ್ಯ: ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತರಕಾರಿ, ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲು ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೈತರೇ ಬಾಡಿಗೆ ವಾಹನಗಳಲ್ಲಿ ಎಪಿಎಂಸಿಗಳಿಗೆ ತರುತ್ತಿದ್ದಾರೆ. ಇಂತಹ ವಾಹನಗಳಿಗೆ ಚೆಕ್‌ಪೋಸ್ಟ್‌ಗಳಲ್ಲಿ ಮುಕ್ತ ಪ್ರವೇಶವಿದೆ.

ರೈತರು ಎಪಿಎಂಸಿಗಳಿಗೆ ತರುವ ತರಕಾರಿ ಮತ್ತು ಹಣ್ಣುಗಳನ್ನು ಬೀದರ್, ರಾಯಚೂರು ಮತ್ತು ಕೊಪ್ಪಳ ನಗರಗಳಲ್ಲಿ ಬಡಾವಣೆಗಳಿಗೆ ತಲುಪಿಸಲು ಆಯಾ ಜಿಲ್ಲಾ ಆಡಳಿತಗಳು ವಾಹನ ವ್ಯವಸ್ಥೆ ಮಾಡಿವೆ. 

ಮಾರುಕಟ್ಟೆಗೆ ಬಾರದ ರೈತರು

ದಾವಣೆಗೆರೆ ಜಿಲ್ಲೆಯಲ್ಲಿ ತರಕಾರಿ, ಹಣ್ಣು, ಹೂವು ಸಾಗಣೆ ವಾಹನಗಳಿಗೆ  ನಿರ್ಬಂಧ ಇಲ್ಲ. ಆದರೆ, ಯೋಗ್ಯ ಬೆಲೆ ಸಿಗದ ಕಾರಣ ರೈತರೇ ಮಾರುಕಟ್ಟೆಗೆ ಬೆಳೆ ತರಲು ಹಿಂದೇಟು ಹಾಕುತ್ತಿದ್ದಾರೆ. ದಾವಣಗೆರೆಯಲ್ಲಿ ಬೆಲೆ ಸಿಗದೇ ರೈತರೇ ಅಲ್ಲಲ್ಲಿ ಹೂವು ಬೆಳೆ ನಾಶ ಮಾಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಾರಾಟಕ್ಕೆ ಸಮಸ್ಯೆ ಇಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ರೈತರಿಗೆ ತೊಂದರೆ ಇಲ್ಲ. ಆದರೆ ಉತ್ತಮ ಬೆಲೆ ಸಿಗುತ್ತಿಲ್ಲ.

ಹೂವು, ಹಣ್ಣು ಸಾಗಣೆಗೂ ಸಮಸ್ಯೆ

ಹುಬ್ಬಳ್ಳಿ: ತರಕಾರಿಯ ಸಗಟು, ಚಿಲ್ಲರೆ  ಮಾರಾಟ ಹಾಗೂ ಸಾಗಾಟ ಸುಗಮವಾಗಿದೆ. ಆದರೆ, ಹೂ, ಹಣ್ಣುಗಳ ಸಾಗಾಟ ಹಾಗೂ ಮಾರಾಟ ಸುಗಮವಾಗದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಲಾಕ್‌ಡೌನ್‌ ಆರಂಭದಲ್ಲಿ ಸಾಗಾಟ ಸಮಸ್ಯೆಯಿಂದಾಗಿ ರೈತರು ಹೊಲಗಳಲ್ಲಿಯೇ ತರಕಾರಿ ನಾಶ ಮಾಡತೊಡಗಿದ್ದರು. ಬಳಿಕ ತರಕಾರಿ ತರಲು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಗದಗ, ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪುಷ್ಪ ಕೃಷಿಕರಿಗೆ ಸಂಕಷ್ಟವಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ ಹಣ್ಣುಗಳ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ.

ಇಲಾಖೆಯಿಂದ ಸೀಮಿತ ಖರೀದಿ

ತುಮಕೂರು ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಎರಡು ದಿನಗಳಿಗೊಮ್ಮೆ 100 ಟನ್ ಟೊಮೆಟೊ ಖರೀದಿಸಿ ಅಗತ್ಯವಿರುವ ಕಡೆಗಳಿಗೆ ಸಾಗಣೆಗೆ ನೆರವಾಗುತ್ತಿದೆ. ಆಸಕ್ತರು ಇಲಾಖೆ ಜಿಲ್ಲಾ ಉಪನಿರ್ದೇಶಕ ರಘು ಅವರನ್ನು 9448999217 ಸಂಪರ್ಕಿಸಬಹುದು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವಹಿವಾಟಿಗೆ ಅಡೆತಡೆ ಎದುರಾಗಿಲ್ಲ. ಸಾಗಣೆ ವೆಚ್ಚದ ಹಿನ್ನೆಲೆಯಲ್ಲಿ ತರಕಾರಿ ಮಂಡಿ ಮಾಲೀಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೂವುಗಳು ಹೊಲಗಳಲ್ಲೇ ಕೊಳೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು