ಶುಕ್ರವಾರ, ಜೂಲೈ 10, 2020
24 °C

ಐವರು ಗುಣಮುಖ: ಕೋವಿಡ್‌ 19 ಜಿಲ್ಲಾಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಾದ ಪರಿಣಾಮ ನಾನು ಕೊರೊನಾ ರೋಗದಿಂದ ಗುಣಮುಖವಾಗಿ ಹೊರಬಂದಿದ್ದೇನೆ’ ಎಂದು 36 ವರ್ಷ ವಯೋಮಾನದ ರೋಗಿ (ಪಿ308) ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಕೋವಿಡ್‌ 19 ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾದ ಬಳಿಕ ಅವರು ಮಾತನಾಡಿದರು.

‘ಕೋವಿಡ್-19 ತಗುಲಿದ ತಕ್ಷಣ ಅತ್ಯಂತ ವಿಚಲಿತ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರ್ಪಡೆಯಾದೆ. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಎಲ್ಲ ವೈದ್ಯರ, ಸಿಬ್ಬಂದಿಯ ಅಪಾರ ನೆರವಿನ ಫಲವಾಗಿ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಯಿತು’ ಎಂದರು.

ಸರ್ಕಾರದ ‘ಆಪ್ತಮಿತ್ರ’ ಆ್ಯಪ್ ಕೂಡಾ ಅವಶ್ಯಕ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ. ಮಾನಸಿಕವಾಗಿ ಸದೃಢಗೊಳಿಸಲು ವೈದ್ಯರು ಅಪಾರವಾಗಿ ನೆರವಾಗಿದ್ದು, ಮನೆ ಸ್ಯಾನಿಟೈಸ್ ಮಾಡಲು ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ನೆರವಾಗಿದಕ್ಕೆ ಅಭಿನಂದನೆ ಸಲ್ಲಿಸಿದರು.

ಕೋವಿಡ್‌ನಿಂದ ಮುಕ್ತರಾಗಲು ಪ್ರತಿಯೊಬ್ಬ ರೋಗಿ ತಪ್ಪದೇ ಪ್ರಾಮಾಣಿಕವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪ್ರಯಾಣ ವಿವರ ನೀಡಬೇಕು. ಯಾವುದೇ ಮಾಹಿತಿಯನ್ನು ಮುಚ್ಚಿಡದೇ ವೈದ್ಯರಿಗೆ ಸಹಕರಿಸಿ, ಈ ರೋಗದಿಂದ ಮುಕ್ತವಾಗುವಂತೆ ಮನವಿ ಮಾಡಿದರು.
ಕೋವಿಡ್ ರೋಗದಿಂದ ಗುಣಮುಖ ಪಡಿಸುವಲ್ಲಿ ನೆರವಾಗಿರುವ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಐವರು ಬಿಡುಗಡೆ: ಕೋವಿಡ್-19 ಸೋಂಕಿನಿಂದ ಗುಣಮುಖರಾದ ಐವರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಒಂದೂವರೆ ವರ್ಷದ ಹೆಣ್ಣುಮಗು (ಪಿ310), 65(ಪಿ306), 62(ಪಿ307) ಮತ್ತು 60 ವರ್ಷ ವಯಸ್ಸಿನ(ಪಿ362) ಮೂವರು ವೃದ್ದರು ಹಾಗೂ 36 ವರ್ಷ ವಯೋಮಾನದ (ಪಿ308) ಮತ್ತೊಬ್ಬರು ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದರು.

ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ, ಡ್ರೈಫ್ರೂಟ್ಸ್ ನೀಡಿ ಸ್ವಾಗತಿಸಿದರು.
ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಆಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜೆ. ಬಿರಾದಾರ, ಡಾ. ಶೈಲಶ್ರೀ ಎಂ, ಮೇಲ್ವಿಚಾರಕ ಅಜೀತ, ಪಿಎಸ್‍ಐ ಶಿವಕುಮಾರ, ನರ್ಸ್‌  ಶಾಂತಾ, ಸುಜಾತಾ ಮತ್ತು ಮೋಮಿನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು