ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲೇ ದಲಿತ ವ್ಯಕ್ತಿಯ ಶವ ಸಂಸ್ಕಾರ

ಗಾಂಧಿ ಪುರಸ್ಕೃತ ಕಲ್ಲಮುಂಡ್ಕೂರು ಪಂಚಾಯಿತಿಗೆ ರುದ್ರಭೂಮಿ ಇಲ್ಲ
Last Updated 24 ನವೆಂಬರ್ 2019, 13:30 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಲ್ಲಮುಂಡ್ಕೂರಿನಲ್ಲಿ ಶವ ಸಂಸ್ಕಾರಕ್ಕೆ ಜಾಗ (ಸ್ಮಶಾನ) ಇಲ್ಲದೆ ದಲಿತ ವ್ಯಕ್ತಿಯೊಬ್ಬರ ಶವ ಸಂಸ್ಕಾರವನ್ನು ರಸ್ತೆ ಬದಿಯಲ್ಲೇ ನಡೆಸಬೇಕಾಗಿ ಬಂದಿರುವುದು‌ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

‘ಮಹಾತ್ಮ ಗಾಂಧಿ ಪುರಸ್ಕಾರ’ ಪಡೆದ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿರುವುದು ಪಂಚಾಯಿತಿಗೂ ಕಪ್ಪು ಚುಕ್ಕೆಯಾಗಿದೆ.

‘ಕಲ್ಲಮುಂಡ್ಕೂರಿನ ಐದು ಸೆಂಟ್ಸ್‌ ಜಾಗದಲ್ಲಿ ಬಾಬು ಎಂಬುವರು ಮೃತಪಟ್ಟಿದ್ದರು. ಇವರ ಶವ ಸಂಸ್ಕಾರಕ್ಕೆ ಮನೆ ಆವರಣದಲ್ಲಿ ಜಾಗ ಇರಲಿಲ್ಲ. ಸಾರ್ವಜನಿಕ ರುದ್ರಭೂಮಿಯೂ ಇಲ್ಲ. ಬೇರೆ ದಾರಿ ಕಾಣದೆ ಮೃತರ ಕುಟುಂಬದವರು ರಸ್ತೆ ಬದಿಯಲ್ಲೇ ಶವ ಸಂಸ್ಕಾರ ನಡೆಸಿದ್ದಾರೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇಂಥ ಪ್ರಕರಣ ನಡೆದಿರುವುದು ಪ್ರಜ್ಞಾವಂತರನ್ನು ಕಳವಳಕ್ಕೀಡು ಮಾಡಿದೆ’ ಎಂದು ಸ್ಥಲೀಯರು ತಿಳಿಸಿದ್ದಾರೆ.

‘8 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಕಲ್ಲಮುಂಡ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಅದರ ಅನುಷ್ಠಾನವಾಗಿಲ್ಲ. ಕ್ಲಲಮಡ್ಕೂರಿನ ಹೆಚ್ಚಿನ ಪ್ರದೇಶ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಬರುತ್ತದೆ. ಖಾಸಗಿ ಭೂಹಿಡುವಳಿದಾರರು ರುದ್ರಭೂಮಿಗೆ ಹೋಗುವ ರಸ್ತೆಗೆಂದರೆ ಜಾಗ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಹೀಗಾಗಿ ಸ್ಮಶಾನಕ್ಕೆ ಜಾಗ ಗುರುತಿಸುವುದು ಪಂಚಾಯಿತಿ ಆಡಳಿತಕ್ಕೆ ಕಷ್ಟವಾಗಿದೆ’ ಎಂಬುದು ಸಾರ್ವಜನಿಕರ ಅಹವಾಲು.

‘ನಾನು ಅಧ್ಯಕ್ಷರಾಗಿದ್ದಾಗ ಸಾರ್ವಜನಿಕ ರುದ್ರಭೂಮಿಗೆ ಜಾಗ ಗುರುತಿಸಿ ₹5 ಲಕ್ಷ ಅನುದಾನ ಕಾಯ್ದಿರಿಸಿದ್ದೆ. ಆದರೆ ಸ್ಥಳೀಯರ ವಿರೋಧದಿಂದ ರುದ್ರಭೂಮಿ ನಿರ್ಮಾಣ ಸಾಧ್ಯವಾಗಿಲ್ಲ' ಎಂದು ಜೋಕಿಂ ಕೊರೆಯಾ ತಿಳಿಸಿದರು. `ಕಲ್ಲಮುಂಡ್ಕೂರಿನಲ್ಲಿ ಸುಮಾರು 2 ಎಕರೆ ಜಾಗ ರುದ್ರಭೂಮಿಗೆ ಮೀಸಲಿಟ್ಟಿರುವ ಬಗ್ಗೆ ಪಹಣಿ ದಾಖಲೆ ಇದೆ. ಆದರೆ, ಸಾರ್ವಜನಿಕರ ವಿರೋಧದಿಂದ ಈ ಯೋಜನೆ ಕಾರ್ಯಗತ ಆಗಿಲ್ಲ' ಎಂದು ಪಂಚಾಯಿತಿ ಸದಸ್ಯ ಸತೀಶ್ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT