ರಾಷ್ಟ್ರವ್ಯಾಪಿ ‘ಬೆಲೆ ಮುನ್ಸೂಚನೆ’ ವ್ಯವಸ್ಥೆ ಜಾರಿ

7
ರಾಜ್ಯದ ‘ಕೃಪ’ ಡ್ಯಾಷ್‌ ಬೋರ್ಡ್‌ ಕೇಂದ್ರಕ್ಕೆ ಮಾದರಿ

ರಾಷ್ಟ್ರವ್ಯಾಪಿ ‘ಬೆಲೆ ಮುನ್ಸೂಚನೆ’ ವ್ಯವಸ್ಥೆ ಜಾರಿ

Published:
Updated:

ಬೆಂಗಳೂರು: ಕರ್ನಾಟಕ ಕೃಷಿ ಬೆಲೆ ಆಯೋಗ ರೂಪಿಸಿರುವ ಬೆಲೆ ಮುನ್ಸೂಚನೆ ಮತ್ತು ಮಾರಾಟ ಮಾಹಿತಿ ವ್ಯವಸ್ಥೆಯನ್ನು ರಾಷ್ಟ್ರದಾದ್ಯಂತ ಅಳವಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಕೃಷಿ ಬೆಲೆ ಆಯೋಗವು ಕೃಷಿ ಧಾರಣೆ ವಿಶ್ಲೇಷಣಾ (ಕೃಪ) ಡ್ಯಾಷ್‌ಬೋರ್ಡ್‌ ಮೂಲಕ ಬೆಲೆ ಮುನ್ಸೂಚನೆ(ಪ್ರೈಸ್‌ ಫೋರ್‌ಕಾಸ್ಟಿಂಗ್‌) ಮತ್ತು ಮಾರಾಟ ಮಾಹಿತಿಯನ್ನು (ಮಾರ್ಕೆಟ್‌ ಇಂಟೆಲಿಜೆನ್ಸ್‌) ಸರ್ಕಾರಕ್ಕೆ ನೀಡುತ್ತಿದೆ.

ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಕೃಷಿ (ಮಾರುಕಟ್ಟೆ ವಿಭಾಗ) ಇಲಾಖೆ, ದೇಶ ವ್ಯಾಪಿ ಇದರ ಅನುಷ್ಠಾನಕ್ಕೆ ತಾಂತ್ರಿಕ ಸಮಿತಿಯೊಂದನ್ನೂ ರಚಿಸಿದೆ. ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಈ ಸಮಿತಿಯ ಸದಸ್ಯತ್ವವನ್ನೂ ನೀಡಿದೆ.

ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ತುತ್ತಾಗುವುದನ್ನು ತಡೆಯಲು ಎಲ್ಲ ರಾಜ್ಯಗಳಲ್ಲೂ ಈ ವ್ಯವಸ್ಥೆ ಜಾರಿ ತರುವ ಅಗತ್ಯವಿದೆ. ಇದಕ್ಕಾಗಿ ಬೆಲೆ ಮುನ್ಸೂಚನೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಮಾಹಿತಿ ಅಗತ್ಯವಿದೆ ಎಂದೂ ಕೇಂದ್ರ ಕೃಷಿ ಇಲಾಖೆ ಪ್ರತಿಪಾದಿಸಿದೆ.

ರೈತರು ಬೀದಿಗೆ ಬರುವ ಸಂಕಷ್ಟ ಇಲ್ಲ: ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ರೈತರು ಸಂಕಷ್ಟಕ್ಕೆ ತುತ್ತಾಗುವುದನ್ನು ಡ್ಯಾಷ್ ಬೋರ್ಡ್‌ ವ್ಯವಸ್ಥೆಯಿಂದ ತಪ್ಪಿಸಬಹುದು. ಸಾಕಷ್ಟು ಸಂದರ್ಭಗಳಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ಬೀದಿಗೆ ಸುರಿದು ಪ್ರತಿಭಟನೆ ನಡೆಸುತ್ತಾರೆ. ಮೊದಲೇ ಧಾರಣೆ ಕುಸಿತದ ಮಾಹಿತಿ ನೀಡುವುದರಿಂದ ರೈತರು ಉತ್ತಮ ಧಾರಣೆ ಸಿಗುವ ದಿನಗಳಲ್ಲಿ ಮಾರಾಟ ಮಾಡಬಹುದು.

ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಆವಕ, ಉತ್ಪಾದನಾ ವೆಚ್ಚ, ಮಾರುಕಟ್ಟೆ ದರ, ಹಾಲಿ ಇರುವ ಬೆಂಬಲ ಬೆಲೆ ಇತ್ಯಾದಿಗಳನ್ನು ಮಾಹಿತಿ ಕಲೆ ಹಾಕಿ ತಂತ್ರಾಂಶ ವಿಶ್ಲೇಷಣೆ ನಡೆಸುತ್ತದೆ. ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಧಾರಣೆ ಕುಸಿಯುತ್ತಿದೆಯೇ ಅಥವಾ ಸ್ಥಿರವಾಗಿರುತ್ತದೆಯೇ ಎಂಬುದರ ಮಾಹಿತಿ ನೀಡುತ್ತದೆ.

ರಾಜ್ಯದ ಎಲ್ಲ ಎಪಿಎಂಸಿಗಳ ಸಂಪರ್ಕ ಹೊಂದಿರುವ ‘ಕೃಪ’ 29 ಬೆಳೆಗಳ ಬಗ್ಗೆ ದಿನ ನಿತ್ಯ ಮಾಹಿತಿ ನೀಡುತ್ತದೆ. ಮಾರುಕಟ್ಟೆಯಲ್ಲಿ ಈ ಕೃಷಿ ಉತ್ಪನ್ನಗಳ ದೈನಂದಿನ ಟ್ರೆಂಡ್‌ ಹೇಗಿದೆ ಎಂಬ ಅಂಕಿ– ಅಂಶ ಸಹಿತ ವಿಶ್ಲೇಷಣೆಯನ್ನು ಸರ್ಕಾರಕ್ಕೆ ನೀಡುತ್ತಿದೆ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಆವಕ ಪ್ರಮಾಣ, ಹಾಲಿ ದರ ಮತ್ತು ಕೇಂದ್ರ ಪ್ರಕಟಿಸಿರುವ ಬೆಂಬಲ ಬೆಲೆಗೂ ಮಾರುಕಟ್ಟೆಯಲ್ಲಿರುವ ದರದ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರವು ನಿರ್ದಿಷ್ಟ ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆಯನ್ನು ಮುಂಚಿತವಾಗಿಯೇ ನಿರ್ಧರಿಸಬಹುದು.

ಅನ್ವಿತಾ ಎಂಬ ಕಂಪನಿ ಜತೆ ಸೇರಿ ಕೃಷಿ ಬೆಲೆ ಆಯೋಗ, ಡೇರಿ ಸೈನ್ಸ್‌ ಕಾಲೇಜಿನ ಡೇರಿ ಎಕನಾಮಿಕ್ಸ್‌ ವಿಭಾಗ ಜಂಟಿಯಾಗಿ ‘ಅರಿಮಾ’ ಎಂಬ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿವೆ.

*
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ ಕೃಷಿಕರಿಗೆ ಉಪಯೋಗವಾಗುತ್ತದೆ.
-ಟಿ.ಎನ್‌.ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು. ಕೃಷಿ ಬೆಲೆ ಆಯೋಗ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !