ಬುಧವಾರ, ಏಪ್ರಿಲ್ 8, 2020
19 °C

ಅವಧಿ ಮೀರಿದ ಔಷಧಿ ವಿತರಣೆ -ಕೆ.ಆರ್.ಪುರ ಆಸ್ಪತ್ರೆ ಮೇಲೆ ಜಿಲ್ಲಾಧಿಕಾರಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವಧಿ ಮೀರಿದ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ಮೇಲೆ ಜಿಲ್ಲಾಧಿಕಾರಿ ದಿಢೀರ್ ದಾಳಿ ನಡೆಸಿದ್ದು, ಹಲವು ಅಕ್ರಮಗಳು ಪತ್ತೆಯಾಗಿವೆ. 

ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿದವರು. ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಮಂಗಳವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಔಷಧಿ ವಿತರಣೆ ಮಾಡುತ್ತಿದ್ದುದು ಕಂಡು ಬಂತು. 

ಕೂಡಲೆ ಜಿಲ್ಲಾಧಿಕಾರಿಗಳು ವಿಚಾರಿಸಿದಾಗ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಇಲ್ಲಿ ವೈದ್ಯರ ಪಾತ್ರ ಏನೂ ಇಲ್ಲ. ವೈದ್ಯರು ಕೇವಲ ಔಷಧಿಯನ್ನು ನೀಡುವಂತೆ ಸಲಹಾ ಚೀಟಿ ಬರೆಯುವುದು ಮಾತ್ರ. ಆದರೆ, ಔಷಧಿಯನ್ನು ತರುವುದು ಹಾಗೂ ವಿತರಿಸುವುದು ಫಾರ್ಮಸಿಸ್ಟ್ ಜವಾಬ್ದಾರಿಯಾಗಿರುತ್ತದೆ.  ಔಷಧಿ ತಯಾರಿಸಿರುವುದು ಈ ವರ್ಷವಾದರೆ, ಮುಂದಿನ ವರ್ಷದ ಸಂಖ್ಯೆಯನ್ನು ಮುದ್ರಿಸಿ ಇರಿಸಲಾಗುತ್ತದೆ. ಅಂದರೆ ಪ್ರಸ್ತುತ ವರ್ಷಕ್ಕಿಂತ ಮುಂದಿನ ವರ್ಷದ ದಿನಾಂಕವನ್ನು ಮುದ್ರಿಸಲಾಗುತ್ತದೆ. 

ತಯಾರಿಸಿ ಒಂದು ವರ್ಷ ಹಳೆಯದಾದ ಔಷಧಿಗಳೇ ಮಾರುಕಟ್ಟೆಗೆ ಹೊಸ ಔಷಧ ರೂಪದಲ್ಲಿ ಬರುತ್ತವೆ. ಮಾರುಕಟ್ಟೆಗೆ ಬಂದ ನಂತರ ಎರಡು ವರ್ಷದವರೆಗೆ ಮಾರುಕಟ್ಟೆಯಲ್ಲಿರುತ್ತವೆ. ಎರಡು ವರ್ಷವೂ ಮಾರಾಟವಾಗದಿದ್ದರೆ, ಔಷಧಗಳನ್ನು ನಾಶಪಡಿಸಬೇಕು. ನಾಶ ಮಾಡುವ ಬದಲು ಅದನ್ನು ಸಾರ್ವಜನಿಕರಿಗೆ ವಿತರಿಸಿದರೆ ಅಥವಾ ಮಾರಾಟ ಮಾಡಿದರೆ ಕಾನೂನಿನ ಪ್ರಕಾರ ಅಪರಾಧ. ಇಂತಹ ಔಷಧ ಸೇವಿಸಿದರೆ ರೋಗಿಯ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲ ರೋಗಿಗಳಿಗೆ ಈ ಪರಿಣಾಮ ತೀವ್ರವಾಗಿ ಸಾವು ಸಂಭವಿಸಬಹುದು. ಇಲ್ಲವೇ ಅಪಾಯವಿಲ್ಲದೆಯೂ ಪಾರಾಗಬಹುದು. ಆದರೂ ಕಾನೂನಿನ ಪ್ರಕಾರ ಅವಧಿ ಮುಗಿದ ಔಷಧ ವಿತರಣೆ ನಿಷೇಧಿಸಲಾಗಿದೆ. 

ಇಂತಹ ಔಷಧ ವಿತರಣೆ ಕಂಡು ಬಂದಾಗ ಸರ್ಕಾರಿ ಔಷಧ ನಿಯಂತ್ರಣಾಧಿಕಾರಿ ( ಡ್ರಗ್ಸ್ ಕಂಟ್ರೋಲರ್ )ಯವರಿಗೆ ದೂರು ಸಲ್ಲಿಸಬೇಕು ಎಂಬುದು ನಿಯಮ. ಆದರೆ, ಕೆ.ಆರ್.ಪುರ ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಪಿ.ರಮೇಶ್ ಹೇಳುವುದೇ ಬೇರೆ, ಅವಧಿ ಮೀರಿದ ಔಷಧ ವಿತರಣೆ ಕಂಡು ಬಂದಾಗ ಕೂಡಲೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಬೇಕು. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ, ನಮ್ಮನ್ನು ಏನೂ ಕೇಳಬೇಡಿ ಎನ್ನುತ್ತಾರೆ. 

ಸರ್ಕಾರಿ ಆಸ್ಪತ್ರೆಯಲ್ಲಾಗಲಿ, ಕೆಲವು ಔಷಧ ಅಂಗಡಿಗಳಲ್ಲಾಗಲೀ ಮಾತ್ರೆಗಳ ಮುದ್ರಿತ ಭಾಗವನ್ನು ಕತ್ತರಿಸಿ ಅಂಗಡಿಯಲ್ಲಿಯೇ ಇರಿಸಿಕೊಂಡು, ಮುದ್ರಿತವಲ್ಲದ ಭಾಗವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇಂತಹ ಔಷಧಗಳನ್ನು ಮಾರಾಟ ಮಾಡುವಾಗ ಅವಧಿ ಮುದ್ರಿಸಿ ಮಾರಾಟ ಮಾಡಬೇಕು. ಇದನ್ನು ಕೇಳಲು ಹೋದರೆ, ವ್ಯಾಪಾರಿಗಳು ಗ್ರಾಹಕರ ಜೊತೆಯೇ ವಾಗ್ವಾದ ನಡೆಸುತ್ತಾರೆ. ಇದು ಒಂದೊಂದು ಬಾರಿ ಕಿರಿಕಿರಿ ಉಂಟುಮಾಡುತ್ತದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರಾಗಿರುವ ಡಾ.ಸ್ಮೃತಿ ರಮೇಶ್ ಅಭಿಪ್ರಾಯಪಟಿದ್ದಾರೆ.

ಔಷಧಿಯ ಮುಚ್ಚಿರುವ ಕಾಗದದ ಭಾಗ ತೆರೆದುಕೊಂಡಿದ್ದರೆ, ಅಥವಾ ಕತ್ತರಿಸಿದ್ದರೆ, ಔಷಧಕ್ಕೆ ಮಿಶ್ರಣ ಮಾಡಿರುವ ರಾಸಾಯನಿಕಗಳು ಗಾಳಿಗೆ ತೆರೆದುಕೊಳ್ಳುವುದರಿಂದ ಉದ್ದೇಶಿತ ಪರಿಣಾಮ ಬೀರದೆ, ಸೇವಿಸಿದ ರೋಗಿಯ ಮೇಲೆ ವ್ಯತಿರಿಕ್ತ ಪರಿಣಾಮ ಅಥವಾ ಅಡ್ಡ ಪರಿಣಾಮ ಬೀರಬಹುದು ಎಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

ಕೆ.ಆರ್.ಪುರ ಪ್ರಕರಣದಲ್ಲಿ ವಿತರಣೆಯಾದ ಅವಧಿ ಮೀರಿದ ಔಷಧಿಯನ್ನು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ, ಈ ಕೃತ್ಯ ಎಸಗಿದ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.
ಕಾನೂನು ಏನು ಹೇಳುತ್ತದೆ: ಅವಧಿ ಮೀರಿದ ಔಷಧಿಯನ್ನು ಯಾರು ವಿತರಣೆ ಮಾಡುತ್ತಾರೋ ಅಂತಹವರ ವಿರುದ್ಧ 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಪ್ರಕಾರ ಹಾಗೂ ಭಾರತೀಯ ದಂಡ ಸಂಹಿತೆ 269, 270, 274 ಮತ್ತು 275ರ ಪ್ರಕಾರ ಎರಡು ವರ್ಷ ಸೆರೆವಾಸ ಹಾಗೂ ದಂಡ ವಿಧಿಸಬಹುದಾಗಿದೆ ಎಂದು ವಕೀಲ ಅಯ್ಯಪ್ಪ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು