ಸೋಮವಾರ, ಜೂನ್ 1, 2020
27 °C
ಕೋವಿಡ್‌–19 ಆತಂಕ

ನಿಜಾಮುದ್ದೀನ್ ಮಸೀದಿಯಲ್ಲಿದ್ದರು ಕರ್ನಾಟಕದ 45 ಜನ: ಈಗಾಗಲೇ ಶಿರಾದ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಜಾಮುದ್ದೀನ್‌ ಮಸೀದಿಯಿಂದ ಜನರ ಸ್ಥಳಾಂತರ – ಸಂಗ್ರಹ ಚಿತ್ರ

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‌ ಜಮಾಅತ್‌ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ ಕೊರೊನಾ ವೈರಸ್‌ ಸೋಂಕಿನಿಂದಾಗಿ ಈಗಾಗಲೇ 7 ಮಂದಿ ಸಾವಿಗೀಡಾಗಿದ್ದು, ಕನಿಷ್ಠ 24 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಮಾರ್ಚ್‌ 10ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಅಂಶ ಇದೀಗ ಬಹಿರಂಗ ಗೊಂಡಿದೆ. 

ಮರ್ಕಜ್ ನಿಜಾಮುದ್ದೀನ್‌ ಮಸೀದೆಯಲ್ಲಿ ಭಾಗಿಯಾಗಿದ್ದವರ ಪೈಕಿ ಅನೇಕರು ಕರ್ನಾಟಕ, ತೆಲಂಗಾಣ, ಒಡಿಶಾ ಹಾಗೂ ಬಿಹಾರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಂಚರಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿತ್ತು. ಆದರೆ, ಕರ್ನಾಟಕದಿಂದಲೇ ಸುಮಾರು 45 ಮಂದಿ ಭಾಗಿಯಾಗಿದ್ದಾರೆ ಎಂಬುದು ಆರೋಗ್ಯ ಸಚಿವ ಶ್ರೀರಾಮುಲು ಅವರ ಟ್ವೀಟ್‌ನಿಂದ ತಿಳಿದು ಬಂದಿದೆ. 

ಕೊರೊನಾ ಸೋಂಕಿನಿಂದ ಮಾರ್ಚ್‌ 27ರಂದು ಶಿರಾ ನಗರದಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಅವರೂ ಸಹ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ತುಮಕೂರು ಹಾಗೂ ತಿಪಟೂರಿನಿಂದ ಒಟ್ಟು 13 ಮಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. 

'ಪ್ರಾರ್ಥನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ,  ಕ್ವಾರಂಟೈನ್‌ ಮಾಡುವ  ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.  ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ' ಎಂದು ಶ್ರೀರಾಮುಲು ತಿಳಿಸಿದ್ದಾರೆ. 

ಇದನ್ನೂ ಓದಿ: ಕೊರೊನಾ ಹರಡುವ ಕೇಂದ್ರವಾಯಿತು ನಿಜಾಮುದ್ದೀನ್‌ ಮಸೀದಿ: ಕರ್ನಾಟಕಕ್ಕೂ ಸೋಂಕು?

'ಅಲ್ಲಿನ ಧಾರ್ಮಿಕ ಸಭೆಗೆ  ಆಸ್ಟ್ರೇಲಿಯಾ, ಸಿಂಗಪೂರ್‌, ದುಬೈ, ಸೌದಿ ಅರೇಬಿಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಆದಷ್ಟು ಬೇಗ ಗುರುತಿಸಿ, ಅವರನ್ನು ಕ್ವಾರಂಟೈನ್‌ ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ. 

13 ಮಂದಿ ಆಸ್ಪತ್ರೆಯಲ್ಲಿ

ತುಮಕೂರಿನ 11 ಮಂದಿ ಹಾಗೂ ತಿ‍ಪಟೂರಿನ ಇಬ್ಬರು ನವದೆಹಲಿಯ ಜಾಮಿಯಾ ಮಸೀದಿ ಆಯೋಜಿಸಿದ್ದ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಶಿರಾ ನಗರದಲ್ಲಿ ಮಾರ್ಚ್‌ 27ರಂದು ಒಬ್ಬರು ಸಾವಿಗೀಡಾಗಿದ್ದು, ಉಳಿದ 13 ಜನರು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದೆ. 

ಶಿರಾದ ವ್ಯಕ್ತಿ ಸಾವಿಗೂ ಮುನ್ನ ಎಲ್ಲೆಲ್ಲಿ ಸಂಚರಿಸಿದ್ದರು? 

* ಮಾರ್ಚ್ 5ರಂದು ಮಧ್ಯಾಹ್ನ 2.30ಕ್ಕೆ ತುಮಕೂರಿನಿಂದ ಸಂಪರ್ಕ ಕ್ರಾಂತಿ ರೈಲಿನ ಎಸ್‌–6 ಬೋಗಿಯಲ್ಲಿ ನವದೆಹಲಿಗೆ ಪ್ರಯಾಣ.

* ಮಾರ್ಚ್ 7ರಿಂದ 11ರ ವರೆಗೆ ಮಸೀದಿಯಲ್ಲೇ ವಾಸ್ತವ್ಯ

* 11ರಂದು ಬೆಳಿಗ್ಗೆ 9ಕ್ಕೆ ನವದೆಹಲಿಯಿಂದ ಕೊಂಗು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟು 14ರಂದು ಯಶವಂತಪುರ ತಲುಪಿದ್ದಾರೆ. ರೈಲಿನ ಎಸ್‌–19 ಬೋಗಿಯಲ್ಲಿ ಇವರು ಇದ್ದರು.

* 14ರಂದು ರಾತ್ರಿ 12.30ಕ್ಕೆ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಶಿರಾ ತಲುಪಿದ್ದಾರೆ. ಕೆಲ ದಿನ ಮನೆಯಲ್ಲೇ ತಂಗಿದ್ದಾರೆ.

* 18ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದೆ. 21ರ ವರೆಗೆ ಶಿರಾದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ.

* 23ರಂದು ಹೊರರೋಗಿಯಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು.

* 24ರಂದು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ. ಗಂಟಲು ದ್ರವ ಮತ್ತು ಕಫ, ರಕ್ತದ ಮಾದರಿ ಪರೀಕ್ಷೆ.

* 26ರಂದು ರಾತ್ರಿ ಬಂದ ವರದಿ.

* ಮಾರ್ಚ್ 27ರಂದು ಬೆಳಿಗ್ಗೆ ಸಾವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು