ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ– ಡಿಕೆಶಿ ಹಾಸ್ಯ ಚಟಾಕಿ

Last Updated 18 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಹಾವು –ಮುಂಗುಸಿಯಂತೆ ಕಿತ್ತಾಡಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು, ಕಲಾಪದ ಬಳಿಕ ನಗು ನಗುತ್ತಾ ಹಾಸ್ಯ ಚಟಾಕಿ ಹಾರಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಸಂಜೆ ಕಲಾಪ ಮುಂದೂಡುತ್ತಿದ್ದಂತೆ ಬಿಜೆಪಿಯವರು ಪ್ರತಿಭಟನಾರ್ಥವಾಗಿ ಸದನದ ಒಳಗೇ ಇಡೀ ರಾತ್ರಿ ಕುಳಿತುಕೊಳ್ಳಲು ನಿರ್ಧರಿಸಿದರು. ದೋಸ್ತಿ ಪಕ್ಷದ ಸದಸ್ಯರು ಅಲ್ಲಿಂದ ಹೋದ ಬಳಿಕ ಉಳಿದದ್ದು ಕೇವಲ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌.

ಬಿ.ಎಸ್‌.ಯಡಿಯೂರಪ್ಪ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಆರ್.ಅಶೋಕ್‌ ಮುಂತಾದವರ ಬಳಿ ಬಂದ ಶಿವಕುಮಾರ್‌ ಹರಟೆ ಹೊಡೆಯಲಾರಂಭಿಸಿದರು. ಸ್ವಲ್ಪ ಹೊತ್ತಿನಲ್ಲೇ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಎಂ.ಬಿ.ಪಾಟೀಲ ಅವರೂ ಬಂದು ಸೇರಿಕೊಂಡರು. ಬಹಳ ಹೊತ್ತಿನವರೆಗೆ ಮಾತುಕತೆ ನಡೆಯಿತು.

ಕಲಾಪದ ಸ್ವಾರಸ್ಯಗಳು...

ವಿಪಕ್ಷ ನಾಯಕ ಎಂದ ಸಿದ್ದರಾಮಯ್ಯ!
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತದ ಪ್ರಸ್ತಾವ ಮಂಡಿಸುವ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದರು. ಮಾತನಾಡುವ ವೇಳೆ, ‘ವಿಪಕ್ಷ ನಾಯಕನಾದ ನಾನು’ ಎಂದು ಹೇಳಿದರು.

ಈ ಮಾತು ಕೇಳಿ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಖುಷಿ ವ್ಯಕ್ತಪಡಿಸಿದರು. ‘ಹೋ ಹೋ, ಏನು ಖುಷಿ ಇವರಿಗೆ ನೋಡಿ. ನಾನು ನಾಲ್ಕು ವರ್ಷ ವಿರೋಧ ಪಕ್ಷದ ನಾಯಕನಾಗಿದ್ದೆ. ಈಗ ಬಾಯಿತಪ್ಪಿ ಹಾಗೆ ಹೇಳಿದೆ’ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು. ‘ಅವರು ಸ್ವಲ್ಪವಾದರೂ ಖುಷಿ ಪಡಲಿ ಬಿಡಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.

ಶ್ರೀರಾಮುಲುಗೆ ಮೈತ್ರಿ ಗಾಳ!
ವಿಧಾನಸಭೆಯ ಕಲಾಪವನ್ನು ಮಧ್ಯಾಹ್ನ ಮುಂದೂಡಿದ ಬಳಿಕ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ಸದನದಲ್ಲಿ ಒಬ್ಬರೇ ಕುಳಿತಿದ್ದರು. ಈ ವೇಳೆ, ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆಯಲ್ಲಿ ತೊಡಗಿದ್ದರು. ರಾಮುಲು ಅವರನ್ನು ಉದ್ದೇಶಿಸಿ, ‘ಏನು ಒಬ್ಬರೇ ಆಲೋಚಿಸುತ್ತಿದ್ದೀರಿ. ನಮ್ಮ ಕಡೆ ಬಂದು ಬಿಡಿ’ ಎಂದು ಕುಮಾರಸ್ವಾಮಿ ಆಹ್ವಾನಿಸಿದರು.

ಆಗ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ‘ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನೇನು ಉಪಮುಖ್ಯಮಂತ್ರಿ ಮಾಡುವುದಿಲ್ಲ. ರಮೇಶ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ. ಹೆಚ್ಚು ಆಸೆ ಇಟ್ಟುಕೊಳ್ಳಬೇಡಿ’ ಎಂದು ಕಿಚಾಯಿಸಿದರು.

ಇದಕ್ಕೆ ಶ್ರೀರಾಮುಲು ನಕ್ಕರು. ‘ಅವರು ಏನು ಹೇಳಿದರು ಎಂಬುದು ಗೊತ್ತಾಗಲಿಲ್ಲ. ಸುಮ್ಮನೆ ನಕ್ಕೆ. ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿದೆ. ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ’ ಎಂದು ಶ್ರೀರಾಮುಲು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಬೋಪಯ್ಯ ವಿರುದ್ಧ ಕಿಡಿ
ಮುಖ್ಯಮಂತ್ರಿ ಅವರು ವಿಶ್ವಾಸಮತ ಯಾಚನೆಯ ‍ಪ್ರಸ್ತಾವ ಮಂಡಿಸುತ್ತಿದ್ದ ವೇಳೆ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದು ಸರಿಯಲ್ಲ ಎಂದು ಬಿಜೆಪಿಯ ಕೆ.ಜೆ.ಬೋಪಯ್ಯ ಆಕ್ಷೇಪಿಸಿದರು.

ಈ ಮಾತಿನಿಂದ ಕೆರಳಿದ ಸಚಿವ ಡಿ.ಕೆ.ಶಿವಕುಮಾರ್‌, ‘ನಿಮ್ಮವರು ಶಾಸಕರನ್ನು ಹರಾಜು ಹಾಕಿದ್ದಾರೆ. ಅವರ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ನಮ್ಮ ನಾಯಕರು ಬೆಳಕು ಚೆಲ್ಲುತ್ತಿದ್ದಾರೆ. ಈ ಹಿಂದೆ ಸಭಾಧ್ಯಕ್ಷರಾಗಿದ್ದಾಗ ನೀವು ಏನು ಮಾಡಿದ್ದೀರಿ ಎಂಬುದು ಗೊತ್ತಿದೆ’ ಎಂದರು. ಕಾಂಗ್ರೆಸ್‌ ಸದಸ್ಯರು ಸಹ ಬೋಪಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸಿದ್ದ ಬೋಪಯ್ಯ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈಗ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತೀರಿ’ ಎಂದು ಶಿವಕುಮಾರ್ ಛೇಡಿಸಿದರು. ಸಚಿವ ವೆಂಕಟರಮಣಪ್ಪ ಅವರನ್ನೇ ಕೇಳಿ ಎಂದರು. ದನಿಗೂಡಿಸಿದ ವೆಂಕಟರಮಣಪ್ಪ, ‘ಪಕ್ಷೇತರ ಶಾಸಕ ಆಗಿದ್ದರೂ ಕಾನೂನಿಗೆ ವಿರುದ್ಧವಾಗಿ ನನ್ನನ್ನೂ ಅನರ್ಹ ಮಾಡಿದ್ದೀರಿ. ಈಗ ಹೇಗೆ ಮಾತನಾಡುತ್ತೀರಿ’ ಎಂದು ಕುಟುಕಿದರು.

‘ಗೂಳಿಹಟ್ಟಿ ಶೇಖರ್‌, ನೀನೂ ಹೇಳಪ್ಪ’ ಎಂದು ಶಿವಕುಮಾರ್‌ ಹೇಳಿದರು. ಬಳಿಕ ಬೋಪಯ್ಯ ಮೌನಕ್ಕೆ ಶರಣಾದರು.

ಸರ್ಪಗಾವಲು
ತಮ್ಮ ಪಕ್ಷದ ಶಾಸಕರ ಮೇಲೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಬಿಜೆಪಿ ನಾಯಕರು ಸರ್ಪಗಾವಲು ಹಾಕಿದ್ದರು. ಶಾಸಕರು ಮೊಗಸಾಲೆಯಿಂದ ಹೊರಕ್ಕೆ ಹೋಗದಂತೆ ನಿಗಾ ವಹಿಸುವ ಜವಾಬ್ದಾರಿಯನ್ನು ವಿಧಾನ ಪರಿಷತ್‌ ಸದಸ್ಯರಿಗೆ ವಹಿಸಲಾಗಿತ್ತು.

ಬಿಜೆ‍ಪಿ ಶಾಸಕರನ್ನು ಮೈತ್ರಿ ನಾಯಕರು ಸೆಳೆಯಬಹುದು ಎಂಬ ಭೀತಿಯಿಂದ ಕಮಲ ಪಕ್ಷದ ಶಾಸಕರಿಗೆ ಮೊಗಸಾಲೆಯಲ್ಲೇ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಯಾರೂ ಹೊರಗೆ ಹೋಗಬಾರದು ಎಂದು ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ನೀಡಿದ್ದರು.

ಸದನದಲ್ಲಿ ಬಿಜೆಪಿಯ ಎಂ‍.ಪಿ.ರೇಣುಕಾಚಾರ್ಯ ಅವರಿಗೆ ಮೂರನೇ ಸಾಲಿನಲ್ಲಿ ಸ್ಥಳ ನಿಗದಿಯಾಗಿದೆ. ಆದರೆ, ಗುರುವಾರ ಅವರು ಬಾಗಿಲ ಹತ್ತಿರ ಇರುವ ಸೀಟಿನಲ್ಲಿ ಕುಳಿತರು. ಸದಸ್ಯರು ಹೊರಗೆ ಹೋದಾಗ ಅವರನ್ನು ಹಿಂಬಾಲಿಸಿ ಸದನದೊಳಗೆ ಕರೆದುಕೊಂಡು ಬಂದರು.

ಮಾತು ವಾಪಸ್‌ ಪಡೆದ ಬಿಎಸ್‌ವೈ
15 ಶಾಸಕರಿಗೆ ವಿಪ್‌ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದ್ದಾಗಿ ಸದನದಲ್ಲಿ ಹೇಳಿದ ಯಡಿಯೂರಪ್ಪ ಮುಜುಗರಕ್ಕೆ ಒಳಗಾದರು.

ಆಡಳಿತ ಪಕ್ಷದ ಸದಸ್ಯರ ಆಕ್ಷೇಪದ ಬಳಿಕ, ತಮ್ಮ ಮಾತನ್ನು ಅವರು ವಾಪಸ್‌ ಪಡೆದರು.

‘ಒಂದೂವರೆ ದಿನದ ಸುದೀರ್ಘ ವಾದ ವಿವಾದ ಆಲಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಸದನದ ಕಲಾಪಕ್ಕೆ ಬನ್ನಿ ಎಂದು 15 ಶಾಸಕರಿಗೆ ಒತ್ತಾಯ ಮಾಡುವ ಹಾಗಿಲ್ಲ. ಅವರಿಗೆ ವಿಪ್‌ ಅನ್ವಯ ಆಗುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

ಆಗ ಕೆ.ಆರ್‌.ರಮೇಶ್‌ ಕುಮಾರ್‌, ‘ಸುಪ್ರೀಂ ಕೋರ್ಟ್‌ ಹಾಗೆ ಹೇಳಿಲ್ಲ’ ಎಂದು ತಿದ್ದಿದರು.

ಡಿ.ಕೆ.ಶಿವಕುಮಾರ್‌, ‘ಸುಪ್ರೀಂ ಕೋರ್ಟ್‌ ಈ ರೀತಿ ಆದೇಶ ಹೊರಡಿಸಿಲ್ಲ. ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌, ದೇಶಕ್ಕೆ ಹಾಗೂ ಜನರಿಗೆ ಅವಮಾನ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ಮಾತನ್ನು ವಾಪಸ್‌ ಪಡೆಯುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.

ಕುಶಲೋಪರಿ: ಸಿ.ಟಿ.ರವಿಗೆ ಗದರಿದ ಯಡಿಯೂರಪ್ಪ
ವಿಧಾನಸಭಾ ಕಲಾಪ ಆರಂಭವಾಗುವ ಮುನ್ನ ಬಿಜೆಪಿಯ ಸಿ.ಟಿ.ರವಿ ಅವರು ಜೆಡಿಎಸ್‌–ಕಾಂಗ್ರೆಸ್‌ ಸದಸ್ಯರ ಜತೆಗೆ ಕುಶಲೋಪರಿ ನಡೆಸುತ್ತಿದ್ದರು. ಈ ವೇಳೆ, ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ನಗುನಗುತ್ತಲೇ ಕೈ ಮುಗಿಯುತ್ತಾ ಸದನದೊಳಗೆ ಬಂದರು.

ಆಡಳಿತ ಪಕ್ಷದ ಸಾಲಿನಲ್ಲಿ ರವಿ ಇರುವುದನ್ನು ಕಂಡು ಕೋಪಗೊಂಡರು. ‘ರವಿ ನಿಮಗೇನು ಅಲ್ಲಿ ಕೆಲಸ’ ಎಂದು ಗದರಿದರು. ಈ ಮಾತು ಕೇಳಿದ ಕೂಡಲೇ ರವಿ ಅವರು ವಿರೋಧ ಪಕ್ಷದ ಸಾಲಿಗೆ ಓಡೋಡಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT