ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ

Last Updated 26 ಏಪ್ರಿಲ್ 2020, 10:19 IST
ಅಕ್ಷರ ಗಾತ್ರ

ಬೆಂಗಳೂರು: 'ನಾನು ಗೋಪಾಲಯ್ಯ ಅವರಿಗಿಂತ ಮೊದಲೇ ಮಂತ್ರಿಯಾದವನು. ಸರ್ಕಾರದ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಹಾರ ಸಚಿವ ಗೋಪಾಲಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಬಸವ ಭವನದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

'ಗೋಪಾಲಯ್ಯ ಅವರಿಗೆ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥವನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂಥ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿ ಇಟ್ಟುಕೊಂಡಿದ್ದು ಯಾಕೆ, ಸರ್ಕಾರ ನೂರಾರು ಗೋದಾಮು, ಛತ್ರಗಳನ್ನು ಪಡೆದು ಅವುಗಳನ್ನು ದಿನಸಿ ಪದಾರ್ಥ ಸಂಗ್ರಹಕ್ಕೆ ಬಳಸಲಾಗುವುದು ಎಂದು ಘೋಷಿಸಿದ್ದೇಕೆ, ಅಷ್ಟು ಕಟ್ಟಡಗಳಲ್ಲಿ ಸಂಗ್ರಹಿಸಲು ಅವಕಾಶ ಇರುವಾಗ ಇಲ್ಲಿ, ಖಾಸಗಿ ಜಾಗದಲ್ಲಿ ಬಚ್ಚಿಟ್ಟುಕೊಂಡಿದ್ದೇಕೆ' ಎಂದು ಅವರು ಪ್ರಶ್ನಿಸಿದರು.

'ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ, ಯಾರು ಯಾರಿಗೆ ಮಾರುತ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಮಾಹಿತಿ ಇದೆ. ನಾನು ಅವರಿಗಿಂತ ಮೊದಲೇ ಸಚಿವನಾಗಿದ್ದು, ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ' ಎಂದರು.

'ಎಷ್ಟು ಅಧಿಕಾರಿಗಳ ಜತೆ ಏನೇನು ಮಾತುಕತೆ ಆಗಿದೆ, ಸರ್ಕಾರದ ಅಕ್ಕಿಯನ್ನು ಯಾರು ಎಲ್ಲಿ ಎಷ್ಟಕ್ಕೆ ಖರೀದಿಸಿದ್ದಾರೆ ಎಂಬುದೂ ನನಗೆ ಗೊತ್ತಿದೆ. ಈಗ ಜನರ ಆರೋಗ್ಯ ಕಾಪಾಡಿ, ಅವರ ಜೀವಗಳನ್ನು ಉಳಿಸೋಣ. ಜೀವ ಇದ್ದರೆ ನಂತರ ಉಳಿದದ್ದು. ಹೀಗಾಗಿ, ಈಗ ಆರೋಗ್ಯ ವಿಚಾರವಾಗಿ ಮಾತ್ರ ಚರ್ಚೆ ಮಾಡೋಣ' ಎಂದು ಕಿವಿಮಾತು ಹೇಳಿದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ:

'ಕಾನೂನಿನಲ್ಲಿ ಎಲ್ಲರೂ ಒಂದೇ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನಿನ ಪ್ರಕಾರ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಮಾಡುವ ನಾವು ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು' ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

'ಮಂಡ್ಯ, ಪಾದರಾಯನಪುರದಲ್ಲಿ ತಪ್ಪು ಮಾಡಿದವರಿಗೂ ಶಿಕ್ಷೆಯಾಗಬೇಕು. ಅದೇ ರೀತಿ ಮಂಗಳೂರಿನಲ್ಲಿ ಜನಪ್ರತಿನಿಧಿಗಳು ಏನು ಮಾಡಿದ್ರು, ವಿಜಯಪುರದ ನಾಯಕ ಏನು ಹೇಳಿಕೆ ನೀಡಿದ್ರು, ಚಿಕ್ಕಮಗಳೂರು, ದಾವಣಗೆರೆಯಲ್ಲಿ ಹೇಗೆ ಪ್ರಚೋದನೆ ಮಾತನಾಡಿದರು ಎಂಬುದನ್ನು ಪರಿಗಣಿಸಿ, ಅವರಿಗೆ ಶಿಕ್ಷೆ ನೀಡಬೇಕು' ಎಂದೂ ಆಗ್ರಹಿಸಿದರು.

'ಮಾಧ್ಯಮಗಳು ಕೂಡ ಎಲ್ಲರನ್ನೂ ಸಮನಾಗಿ ನೋಡಬೇಕು. ಮಂಗಳೂರಿನಲ್ಲಿ ರಾತ್ರಿ ನಾಲ್ಕೈದು ಹೆಣ ಎತ್ತಿಸಿದರು. ಇದು ಸರ್ಕಾರಕ್ಕೆ ನೀಡುವ ಸಹಕಾರವೇ, ಆಡಳಿತ ಪಕ್ಷದವರಿಗೆ ಬೇರೆ, ವಿರೋಧ ಪಕ್ಷದವರಿಗೆ ಬೇರೆ ನೀತಿಯೇ. ಅಧಿಕಾರಿಗಳು ಮಾಡುವ ತಪ್ಪನ್ನೇ ಮಾಧ್ಯಮಗಳು ಮಾಡುವುದು ಬೇಡ. ಇದು ನನ್ನ ವಿನಂತಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT