ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ: ಡಿಕೆಶಿಗೆ ಸಿಬಿಐ ಕುಣಿಕೆ

ಕನಕಪುರ ಶಾಸಕನಿಗೆ ಸಂಕಷ್ಟ
Last Updated 2 ಅಕ್ಟೋಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಬಿಐ ತನಿಖೆ ಉರುಳು ಸುತ್ತಿಕೊಳ್ಳಲಿದೆ. ಇದರಿಂದಾಗಿ, ಈಗಾಗಲೇ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ಕಂಗೆಟ್ಟಿರುವ ಕಾಂಗ್ರೆಸ್‌ ನಾಯಕನಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.

ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಶಿವಕುಮಾರ್‌ ಅವರನ್ನು ಹೊಸದಾಗಿ ತನಿಖೆಗೆ ಒಳಪಡಿಸುವ ಅಗತ್ಯವಿರುವುದರಿಂದ ಸಿಬಿಐ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಶಿವಕುಮಾರ್‌ ಅವರನ್ನು ಸೆಪ್ಟೆಂಬರ್‌ 3ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಅವರ ಮೇಲೆ ಹೊಸ ಪ್ರಕರಣ ದಾಖಲಾಗುವುದರಿಂದ ಸದ್ಯಕ್ಕೆ ಜಾಮೀನಿನ ಮೇಲೆ ಹೊರಬರುವ ಸಾಧ್ಯತೆ ಕಡಿಮೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ಸ್ಪಷ್ಟಪಡಿಸಿವೆ.

ಪ್ರಕರಣದಲ್ಲಿ ಪೂರಕ ಎಫ್‌ಐಆರ್‌ ದಾಖಲಿಸಲು ಸಿಬಿಐ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಬಳಿಕ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಈ ಮಧ್ಯೆ, ಶಿವಕುಮಾರ್‌ ಅವರ ಕಿರಿಯ ಸೋದರ, ಸಂಸದ ಡಿ.ಕೆ.ಸುರೇಶ್‌ ಅವರಿಗೂ ಇ.ಡಿ ಸಮನ್ಸ್‌ ಜಾರಿ ಮಾಡಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಇ.ಡಿ ಕಚೇರಿಯಲ್ಲಿ ಅವರ ವಿಚಾರಣೆ ನಡೆಯಲಿದೆ. ಡಿಕೆಶಿ ಅವರ ಪುತ್ರಿ ಐಶ್ವರ್ಯಾ, ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಇ.ಡಿ ಪ್ರಶ್ನಿಸಿದೆ. ಸಿಬಿಐ ಅಧಿಕಾರಿಗಳೂ ಶಿವಕುಮಾರ್‌ ಕುಟುಂಬ ಸದಸ್ಯರು ಹಾಗೂ ಆಪ್ತರನ್ನು ಪ್ರಶ್ನಿಸುವ ಸಂಭವವಿದೆ.

2017ರ ಆಗಸ್ಟ್‌ನಲ್ಲಿ ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಮಯದಲ್ಲಿ ಶಿವಕುಮಾರ್‌ ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ರಾಜ್ಯಕ್ಕೆ ಕರೆತಂದು ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇಟ್ಟಿದ್ದರು. ಅದೇ ಸಂದರ್ಭದಲ್ಲಿ (ಆಗಸ್ಟ್‌ 2ರಂದು) ಅವರ ಹಾಗೂ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ದೆಹಲಿ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಹಾಗೂ ಆರ್.ಕೆ. ಪುರಂ ಮನೆಗಳಲ್ಲಿ ಐ.ಟಿ ಅಧಿಕಾರಿಗಳಿಗೆ ₹ 8.60 ಕೋಟಿ ಹಣ ಸಿಕ್ಕಿತ್ತು. ಈ ಹಣವನ್ನು ಹವಾಲಾ ಮಾರ್ಗದಲ್ಲಿ ಸಾಗಣೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ದೆಹಲಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಶಿವಕುಮಾರ್‌ ಅವರ ಆಪ್ತರಾದ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮ, ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಅಲ್ಲಿನ ಸುಖದೇವ್‌ ವಿಹಾರದ ನಿವಾಸಿ ರಾಜೇಂದ್ರ ವಿಚಾರಣೆ ವೇಳೆ ಸಮರ್ಪಕವಾದ ಉತ್ತರ ನೀಡಿಲ್ಲ.

ಶಿವಕುಮಾರ್‌ 2018ರ ವಿಧಾನಸಭೆ ಚುನಾವಣೆ ವೇಳೆ ₹ 840 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿ
ದ್ದಾರೆ. ಇದರಲ್ಲಿ ಪತ್ನಿ ಹಾಗೂ ಪುತ್ರಿಯ ಆಸ್ತಿಯೂ ಸೇರಿದೆ.

* ಪ್ರಕರಣದಲ್ಲಿ ಪಿಎಂಎಲ್‌ ಕಾಯ್ದೆ ಅನ್ವಯವಾಗುವುದೇ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸುವವರೆಗೆ ತನಿಖೆಯನ್ನು ಬೇರೆಡೆಗೆ ತಿರುಗಿಸುವುದು ಸರಿಯಲ್ಲ

ಎ.ಎಸ್. ಪೊನ್ನಣ್ಣಹೈಕೋರ್ಟ್‌ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT