ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಶಾಲೆಗಳಲ್ಲಿ ಕನ್ನಡದಲ್ಲೂ ಪಾಠ: ಸಿಎಂಗೆ ಶಿಕ್ಷಣ ಇಲಾಖೆ ಪ್ರಸ್ತಾವ

Last Updated 7 ಫೆಬ್ರುವರಿ 2019, 19:08 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿಗಳ ಹಾಗೂ ಮೈತ್ರಿ ಸರ್ಕಾರದ ಪಾಲುದಾರರಾದ ಕಾಂಗ್ರೆಸ್‌ ನಾಯಕರ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರ,ಒಂದು ಸಾವಿರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೂ ಬೋಧನೆಗೆ ಮುಂದಾಗಿದೆ.

ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

‘2019–20ನೇ ಶೈಕ್ಷಣಿಕ ವರ್ಷದಿಂದಲೇ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಲಾಗುತ್ತದೆ. ಈ ಸಲುವಾಗಿ ಶಿಕ್ಷಕರಿಗೆ ಇಂಗ್ಲಿಷ್‌ ಪ್ರಾದೇಶಿಕ ಸಂಸ್ಥೆಯಲ್ಲಿ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಸ್ಥೆಯಲ್ಲಿ ವಿಡಿಯೊ ಕೌನ್ಸೆಲಿಂಗ್‌ ಸೌಕರ್ಯವೂ ಇದೆ. ಪಠ್ಯಪುಸ್ತಕ, ಆಡಿಯೊ– ವಿಡಿಯೊ ಕಲಿಕಾ ಕಿಟ್‌ಗಳು ಹಾಗೂ ಇ–ಕಲಿಕಾ ಸಾಧನಗಳನ್ನು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಸಿದ್ಧಪಡಿಸುತ್ತಿದೆ’ ಎಂದು ಬೆಳಗಾವಿ ಅಧಿವೇಶನದಲ್ಲಿ ಉತ್ತರಿಸಿದ್ದರು.

‘ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದಲೇ 1,715 ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನೂ 1 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದೂ ತಿಳಿಸಿದ್ದರು.

ಇದಕ್ಕೆ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದರು. ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಕಲಿಸಬೇಕು ಎಂದು ಮೈತ್ರಿ ಸರ್ಕಾರದ ಸಮನ್ವಯಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಒತ್ತಾಯಿಸಿದ್ದರು. ‘ನಮ್ಮ ಮಕ್ಕಳು ಇಂಗ್ಲಿಷ್‌ ಶಾಲೆಯಲ್ಲಿ ಓದಿದರೆ ಸಾಕೇ. ಬಡವರ ಮಕ್ಕಳು ಕನ್ನಡ ಶಾಲೆಯಲ್ಲಿ ಕಲಿಯಬೇಕೇ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಪ್ರಶ್ನಿಸಿದ್ದರು. ‘ಇನ್ನೂ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಾದರೆ ಲೋಕೋಪಯೋಗಿ ಇಲಾಖೆಯ ಅನುದಾನ ನೀಡಲೂ ಸಿದ್ಧ’ ಎಂದು ಘೋಷಿಸಿದ್ದರು.

‘ಮಾತೃ ಭಾಷೆಯನ್ನು (ಕನ್ನಡ) ಮಾಧ್ಯಮವಾಗಿ ಉಳಿಸಿಕೊಂಡು, ನಿಗದಿತ ವಿದ್ಯಾರ್ಹತೆ ಮತ್ತು ಸಮರ್ಥ ಶಿಕ್ಷಕರಿಂದ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬಹುದು’ ಎಂದು ರಾಜ್ಯ ಸರ್ಕಾರಕ್ಕೆ ದಕ್ಷಿಣ ಭಾರತೀಯ ಇಂಗ್ಲಿಷ್‌ ಪ್ರಾದೇಶಿಕ ಸಂಸ್ಥೆ ಇತ್ತೀಚೆಗೆ ಶಿಫಾರಸು ಮಾಡಿತ್ತು.

‘ಮಕ್ಕಳಲ್ಲಿ ಮನೆ ಭಾಷೆ (ಮಾತೃಭಾಷೆ) ಮತ್ತು ರಾಜ್ಯ ಭಾಷೆಯ ಜೊತೆಗೆ ಇಂಗ್ಲಿಷ್‌ ಭಾಷಾ ಕೌಶಲ ವೃದ್ಧಿಗೆ ನಮ್ಮ ಪೂರ್ಣ ಬೆಂಬಲವಿದೆ’ ಎಂದು ಪ್ರತಿಪಾದಿಸಿದ್ದ ಈ ಸಂಸ್ಥೆ, ‘ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮವಾಗಿ ಮುಂದುವರಿಸಬಹುದು. ಒಂದೊಮ್ಮೆ ಇಂಗ್ಲಿಷ್‌ ಮಾಧ್ಯಮ ಅತೀ ಅಗತ್ಯ ಎಂದಾದರೆ ನಾಲ್ಕನೇ ತರಗತಿಯಿಂದ ಆರಂಭಿಸಬಹುದು’ ಎಂದೂ ಸಲಹೆ ನೀಡಿತ್ತು.

‘ಸಾವಿರ ಶಾಲೆಗಳಲ್ಲಿ ಐದನೇ ತರಗತಿಯ ವರೆಗೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬೋಧನೆ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಶಿಕ್ಷಣ ಸಚಿವರೂ ಆಗಿರುವ ಮುಖ್ಯಮಂತ್ರಿ ತಾತ್ವಿಕವಾಗಿ ಒಪ್ಪಿದ್ದಾರೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT