ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತದ ‘ಶಕ್ತಿ’ ತೋರಿಸಿದ್ದ ಎನ್.ವೆಂಕಟಾಚಲ ನಿಧನ

Last Updated 30 ಅಕ್ಟೋಬರ್ 2019, 6:45 IST
ಅಕ್ಷರ ಗಾತ್ರ

ಬೆಂಗಳೂರು:ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂತು.

‘ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದ ಲಕ್ಷ್ಮಿ ದೇವಾಲಯದ ಬಳಿಯ ತಮ್ಮ ನಿವಾಸದಲ್ಲಿದ್ದ ಅವರಿಗೆ ಬೆಳಿಗ್ಗೆ 5.45ಕ್ಕೆಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಒಬ್ಬ ಪುತ್ರ ಮತ್ತು ಪುತ್ರಿ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ ಗುರುವಾರ (ಅ.31) ಅಂತ್ಯಕ್ರಿಯೆ ‌ನಡೆಯಲಿದೆ’ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಂಡತಿ ಅನುಶ್ರೀಯಾ,ಪುತ್ರರಾದ ಶೇಷಾಚಲ, ವೇದಾಚಲ (ಇಬ್ಬರೂ ವಕೀಲರು) ಮತ್ತುಅರ್ಜುನಾಚಲ (ಸಾಫ್ಟ್‌ವೇರ್ ಡೆವಲಪರ್) ಮತ್ತುಮಗಳು ಅರುಣಾಚಲ (ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು) ಇದ್ದಾರೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೊಮ್ಮಗ ವರುಣ್ ತಿಳಿಸಿದ್ದಾರೆ.ಕುಟುಂಬದವರ ಸಂಪರ್ಕ ಸಂಖ್ಯೆ: 99011 12664 ಮಹಾಲಿಂಗಯ್ಯ.

ಪರಿಚಯ: ನಂಜೇಗೌಡ ವೆಂಕಟಾಚಲ ಅವರು ಜುಲೈ 3, 1930ರಂದುಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಿಟ್ಟೂರಿನಕೃಷಿ ಕುಟುಂಬದಲ್ಲಿ ಜನಿಸಿದರು‌.

ಶಿಕ್ಷಣ: ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು.

ಸನ್ನದು: ಮೈಸೂರು (ಈಗ ಕರ್ನಾಟಕ) ಹೈಕೋರ್ಟ್ನಲ್ಲಿ ನವೆಂಬರ್ 16, 1965ರಂದುವಕೀಲರಾಗಿ ಸನ್ನದು ನೋಂದಣಿ ಮಾಡಿಸಿದರು.

ವೃತ್ತಿ ಜೀವನ: ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು.1963ರಿಂದ 1973ರವರೆಗೆ ಹೆಬ್ಬಾಳಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು‌. 1973ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಲಹೆಗಾರರೂ ಆಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ:ನವೆಂಬರ್ 28,1977ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂಕೋರ್ಟ್‌ಗೆಪದೋನ್ನತಿ: ಜುಲೈ 1, 1992ರಂದುಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, ಜುಲೈ 2, 1995ರಂದು ನಿವೃತ್ತರಾದರು.

ಕರ್ನಾಟಕ ಲೋಕಾಯುಕ್ತ: ಜುಲೈ 2,2001ರಂದು ಕರ್ನಾಟಕಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಈ ಕಾರಣಕ್ಕಾಗಿಯೇ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರು. ಇವರ ಕಾರ್ಯಶೈಲಿಯ ಕುರಿತಂತೆ ‘ಲಂಚಸಾಮ್ರಾಜ್ಯ’ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು.

ಭ್ರಷ್ಟಾಚಾರ ತಡೆಗೆ ಬ್ರಿಟನ್ ಮಾದರಿ ಕಾನೂನು ಬೇಕು ಎನ್ನುತ್ತಿದ್ದ ವೆಂಕಟಾಚಲ

‘ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಆಗಾಗ ಹೇಳುತ್ತಿದ್ದರು.

`ಬ್ರಿಟನ್‌ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವ ಪ್ರಧಾನಿಯನ್ನೂ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆಗೊಳಪಡಿಸಲು ಅವಕಾಶವಿದೆ. ಅಲ್ಲದೆ, ಪ್ರತ್ಯೇಕ ನ್ಯಾಯಾಲಯಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಿವೆ. ಇದರಿಂದ ಯಾರ ವಿರುದ್ಧವೇ ಆಗಲಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಈ ಕಾನೂನಿನ ಪ್ರಕಾರ ಲಂಚ ಸ್ವೀಕಾರಕ್ಕೆ ಪ್ರಚೋದಿಸುವುದು, ಆಹ್ವಾನಿಸುವುದು ಹಾಗೂ ಲಂಚ ಸ್ವೀಕರಿಸುವುದು ಕೂಡ ಅಪರಾಧ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ತಡೆಗೆ ಸಹಕಾರಿಯಾಗಲಿದೆ’ ಎಂಬುದು ಅವರ ನಿಲುವಾಗಿತ್ತು.

ಘನತೆ ತಂದುಕೊಟ್ಟವರು: ಯಡಿಯೂರಪ್ಪ

ಜೀವ ತುಂಬಿದ್ದವರು: ಬಿಜೆಪಿ

ತುಂಬಲಾರದ ನಷ್ಟ: ಕಾಂಗ್ರೆಸ್

ಸಿದ್ದರಾಮಯ್ಯ ಸಂತಾಪ

ಲೋಕಾಯುಕ್ತಕ್ಕೆ ಅನ್ವರ್ಥ: ಎಚ್‌.ಡಿ.ಕುಮಾರಸ್ವಾಮಿ

ಹೋರಾಟ ಮನನೀಯ: ಜಮೀರ್‌ ಅಹಮದ್

ಭ್ರಷ್ಟರಿಗೆ ಸಿಂಹಸ್ವಪ್ನ: ಡಾ.ಜಿ.ಪರಮೇಶ್ವರನುಡಿನಮನ

ಜನರಲ್ಲಿ ಎಚ್ಚರ ಮೂಡಿಸಿದವರು

ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕಲೆಂದೇ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1984ರಲ್ಲಿ ಈ ಸಂಸ್ಥೆ ಸ್ಥಾಪನೆ ಆದಂದಿನಿಂದಲೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯಾವುದೇ ನಾಚಿಕೆ ಮತ್ತು ಭಯವಿಲ್ಲದೆ ಲಂಚ ಪಡೆಯುವುದರಲ್ಲಿ ನಿರತರಾಗಿದ್ದ ಅಧಿಕಾರಿಗಳು ಹಾಗೂ ನೌಕರರಲ್ಲಿ ಒಂದು ರೀತಿಯ ಭಯ, ಎಚ್ಚರವನ್ನು ಮೂಡಿಸುವ ಕೆಲಸ ಲೋಕಾಯುಕ್ತದಿಂದ ಸಾಧ್ಯವಾಯಿತು ಎನ್ನುವುದೂ ನಿಜ. ಅದರಲ್ಲೂ 2001ರಲ್ಲಿ ನ್ಯಾಯಮೂರ್ತಿ ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕವಾದ ಬಳಿಕ ಲೋಕಾಯುಕ್ತರಿಗೆ ಇರುವ ಅಪಾರ ಅಧಿಕಾರದ ಬಗ್ಗೆ ಸಾರ್ವಜನಿಕರಲ್ಲೂ ಎಚ್ಚರ ಮೂಡುವಂತೆ ಆ ಸಂಸ್ಥೆ ಕಾರ್ಯ ನಿರ್ವಹಿಸಿತು.

ಜನಮೆಚ್ಚಿದ ಲೋಕಾಯುಕ್ತ

ಮೇಲ್ನೋಟಕ್ಕೆವೆಂಕಟಾಚಲ ಅವರ ಕಾರ್ಯವೈಖರಿಬಹು ಗಡಸು. ದಾಳಿ ಮತ್ತು ಕಚೇರಿ ಪರಿಶೀಲನೆಗೆ ಅವರ ಮೊದಲ ಪ್ರಾಶಸ್ತ್ಯ. ಅವರ ನೇಮಕವಾದದ್ದು ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ. ಮೇಲ್ನೋಟಕ್ಕೆ ಕೃಷ್ಣ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಜನರ ಮನಸ್ಸಿನಲ್ಲಿ ಇಣುಕಿದ ಸಂಶಯವನ್ನು ವೆಂಕಟಾಚಲ ಬೇಗನೇ ಹೊಡೆದು ಹಾಕಿದರು.

ವಿವಿಧ ಕಚೇರಿಗಳಿಗೆ ಭೇಟಿ ಇತ್ತು, ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಆಗುವ ವಿಳಂಬಕ್ಕೆ ಚಾಟಿ ಏಟು ಕೊಟ್ಟು ಕೆಳಮಟ್ಟದ ಕಚೇರಿಗಳ ಕಾರ್ಯವೈಖರಿಯಲ್ಲಿ ಒಂದು ತರಹದ ಚುರುಕುತನ ತಂದರು. ಕಾನೂನು ಪ್ರಕಾರ ಲೋಕಾಯುಕ್ತರಿಗಿಂತಲೂ ಉಪಲೋಕಾಯುಕ್ತರಿಗೆ ಜಾಸ್ತಿ ಅಧಿಕಾರ ಇರುವುದರಿಂದ, ಉಪಲೋಕಾಯುಕ್ತರು ನೇಮಕವಾಗದಿದ್ದ ಆ ಕಾಲದಲ್ಲಿ, ಉಪಲೋಕಾಯುಕ್ತರಿಗಿರುವ ಅಧಿಕಾರವನ್ನೂ ತಾವು ಚಲಾಯಿಸಲು ಹಿಂಜರಿಯಲಿಲ್ಲ.

ಲೋಕಾಯುಕ್ತರ ವಿವರ

ಕರ್ನಾಟಕ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದವರ ವಿವರ ಇಂತಿದೆ...

ಎ.ಡಿ.ಕೌಶಲ್‌ (1986– 1991),ರವೀಂದ್ರನಾಥ್‌ ಪೈನೆ (1991–1996),ಅಬ್ದುಲ್‌ ಹಕೀಂ (1996–2001),ಎನ್‌.ವೆಂಕಟಾಚಲ (2001–2006),ಸಂತೋಷ್‌ ಹೆಗ್ಡೆ (2006 – 2010),ಶಿವರಾಜ್‌ ಪಾಟೀಲ್‌
2011 ಜುಲೈ– ಸೆಪ್ಟೆಂಬರ್‌,ವೈ.ಭಾಸ್ಕರ ರಾವ್‌ (2013ರ ಫೆಬ್ರುವರಿಯಿಂದ 2015ರ ಡಿಸೆಂಬರ್), ಪಿ.ವಿಶ್ವನಾಥ ಶೆಟ್ಟಿ (2017ರ ಜನವರಿಯಿಂದ ಈವರೆಗೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT