ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸ್‌ಬುಕ್ನಾಗೆ ‘ಸುದ್ದ’ ಕನ್ನಡದ ಗಂಧ

Last Updated 31 ಅಕ್ಟೋಬರ್ 2018, 17:30 IST
ಅಕ್ಷರ ಗಾತ್ರ

ಕನ್ನಡ ರಾಜ್ಯೋತ್ಸವಕ್ಕೆ ನಾಡು ಸಜ್ಜಾಗುತ್ತಿರುವಾಗ ಫೇಸ್‌ಬುಕ್‌ನಲ್ಲೊಂದು ವಿಡಿಯೊ ಶುದ್ಧ ಮತ್ತು ‘ಅಶುದ್ಧ’ ಕನ್ನಡದ ಬಗ್ಗೆ ಒಂದಿಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ದಿ ಕಥೆ ಪ್ರಾಜೆಕ್ಟ್‌, ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೊ ಮತ್ತು ಮಿನಿಮಲ್‌ ಮೂವಿ ಪೋಸ್ಟರ್ ಕನ್ನಡ ಎಂಬ ಸಂಸ್ಥೆಗಳನ್ನು ಆರಂಭಿಸಿದ ಪುನೀತ್‌ ಬಿ.ಎ ಎಂಬ ಯುವಕ ಮಾಡಿರುವ ವಿಡಿಯೊ ಇದು.

‘ಐ ಲವ್‌ Kannada' ಎಂಬ ಈ ವಿಡಿಯೊದಲ್ಲಿ ಬಳಸಿರುವ ಕನ್ನಡ ಮಂಡ್ಯ, ರಾಮನಗರ ಭಾಗದಲ್ಲಿ ಹೆಚ್ಚಾಗಿ ಬಳಸುವ ಶೈಲಿಯಲ್ಲಿದೆ. ‘ನಗರ, ಪಟ್ಟಣ, ಅರೆಪಟ್ಟಣ, ಗ್ರಾಮೀಣ ಭಾಗದಿಂದ ವಲಸೆ ಬಂದು ನಿರ್ಮಾಣಗೊಂಡಿರುವ ‘ಅರೆನಗರ’ವಾಸಿಗಳ ಕನ್ನಡ ಅರ್ಥಾತ್‌ದುಡಿಯುವ ವರ್ಗದ ಜನರ ಆಡುಭಾಷೆ’ ಎಂಬುದು ಪುನೀತ್‌ ನೀಡುವ ವಿವರಣೆ.

ತನ್ನ ಹೆಂಡತಿ ಮತ್ತು ಮಗನನ್ನೇ ಕರೆದು ಕರೆದು ಅವರು ಮಾತನಾಡುತ್ತಾರೆ. ‘ಅದು ಎಂತದಾ ಮಗ ಕನ್ನಡದಲ್ಲಿ ಸುದ್ದ, ಅಸುದ್ದ? ಅಂಗಂತ ಒಂದೂ ಇಲ್ಲಕಣಪ್ಪೀ’ ಎಂದು ಮಗನಿಗೆ ತಿಳಿಹೇಳುವ ಮೂಲಕ ಒಂದು ಸಂದೇಶವನ್ನು ರವಾನಿಸುತ್ತಾರೆ.

‘ಕನ್ನಡ ಮಾತಾಡಿ ಅಂತೀವಿ. ಆದರೆ ಒಂದೊಂದು ಭಾಗದ ಕನ್ನಡಕ್ಕೂ ಏನಾದರೊಂದು ಲೇವಡಿ ಮಾಡ್ತೀವಿ.ಮಂಗಳೂರಿಗರು ಮಾತಾಡೋದು ಗ್ರಾಂಥಿಕ ಕನ್ನಡ, ಹುಬ್ಬಳ್ಳಿ– ಧಾರವಾಡದವರ ಕನ್ನಡಕ್ಕೆ ಇನ್ನೊಂದು ರೀತಿಯ ಕೊಂಕು,‌ ಮಂಡ್ಯದ ಕನ್ನಡವನ್ನು ಕಾರ್ಮಿಕರ ಕನ್ನಡ, ಕುಂದಾಪುರದವರು ಮಾತಾಡ್ತಿದ್ರೆ ಅರ್ಥಾನೇ ಆಗೊಲ್ಲ ಮಾರಾಯ.... ಹೀಗೆ. ಪ್ರತಿ ಆಡುಭಾಷೆಗೂ ಪ್ರಾದೇಶಿಕ ಮಹತ್ವವಿರುತ್ತದೆ. ಸಂಸ್ಕೃತಿಯ ಬಣ್ಣ ಇರುತ್ತದೆ. ಆದರೆ ಈಗ ಕನ್ನಡವೆಂದರೆ ಬೆಂಗಳೂರಿನಲ್ಲಿ ಬಳಕೆಯಲ್ಲಿರೋ ಕನ್ನಡ ಎಂದಾಗಿಬಿಟ್ಟಿದೆ. ಈ ಮನಸ್ಥಿತಿ ಬದಲಾಗಬೇಕಿದೆ. ಅದಕ್ಕಾಗಿ ‘ಐ ಲವ್‌ Kannada' ವಿಡಿಯೊ ಮಾಡಿದೆ’ ಎಂದು ಹೇಳುತ್ತಾರೆ ಪುನೀತ್‌.

ಕನ್ನಡವನ್ನು ಪ್ರದೇಶವಾರು ನೆಲೆಯಲ್ಲಿ ಲೇವಡಿ ಮಾಡಿದಾಗ ಆ ಭಾಗದ ಜನರಲ್ಲಿ ‘ನಮ್ಮ ಕನ್ನಡಕ್ಕೆ ಎಲ್ಲರೂ ನಗ್ತಾರೆ ನಮಗಂತೂ ಬೆಂಗಳೂರು ಕನ್ನಡ ಬರೋದಿಲ್ಲ ಹಾಗೆ ಮಾತಾಡಲು ಯತ್ನಿಸಿದ್ರೂ ನಮ್ಮೂರಿನ ಕನ್ನಡವೇ ಢಾಳಾಗಿ ಕಾಣುತ್ತದೆ ಹಾಗಾಗಿ ಮಾತಾಡದೇ ಇರೋದೇ ಸುರಕ್ಷಿತ’ ಎಂಬ ಭಾವ ಬಂದುಬಿಡುತ್ತದೆ. ಇಂತಹ ಕೀಳರಿಮೆಯನ್ನು ತುಂಬುವ ಅಧಿಕಾರ ಬೆಂಗಳೂರು ಕನ್ನಡ ಮಾತಾಡುವ ಮಂದಿಗೆ ಕೊಟ್ಟವರಾರು ಎಂದು ಅವರು ಪ್ರಶ್ನಿಸುತ್ತಾರೆ.

‘ಕರುನಾಡ ತಾಯಿ ಸದಾ ಚಿನ್ಮಯಿ ಈ ಲೋಕವೆಲ್ಲ ನಿನ್ನ ಪ್ರೇಮಾಲಯ ದೇವಾಲಯ’ ಎಂಬ ಹಾಡಿನೊಂದಿಗೆ ಕನ್ನಡದ ವಿಡಿಯೊ ಶುರುವಾಗುತ್ತದೆ. ನಗುವುದನ್ನು ‘ನೆಗೋದು’, ‘ನೆಗಾಟ’ ಎಂದು ನಾನು ಯೋಳ್ತೀನಿ ಆದ್ರೆ ಇವ್ಳ ಕಡೆಯೋರು ‘ನೆಕ್ಕೋದು’ ಅಂತಾರೆ; ‘ಡ್ಯಾಡಿ ನಾಳೆಯಿಂದ ನಾ ಸ್ಕೂಲಿಗ್‌ ವೋಗಲ್ಲ. ನನ್ನ ಫ್ರೆಂಡ್ಸೆಲ್ಲ ನೀನು ಮಾತಾಡೋದು ಶುದ್ಧ ಕನ್ನಡ ಅಲ್ಲ ಗಲೀಜ್‌ ಕನ್ನಡ ಅಂತ ನಗ್ತಾರೆ. ನೀವು ಇಕ್ಕು ಅಂತೀರಿ ಇಡು ಅನ್ಬೇಕು, ಐತೆ ಅನ್ಬಾರ್ದು ಇದೆ ಅನ್ಬೇಕು ಅಂತ ನಗ್ತಾರೆ’ ಎಂದು ಮಗ ದೂರು ಹೇಳೋದು; ‘ಏನ್ಲಾ ಅದು ಕನ್ನಡದಾಗೆ ಸುದ್ದ ಅಸುದ್ದ ಗಲೀಜ್‌ ಅಂತೆಲ್ಲ ಇಲ್ಲ ಕಣ್ಲಾ ಒಬ್ಬೊಬ್ರ ಮನೀಗ್‌ ವಂದಂದು ಕನ್ನಡ ಕಣ್ಲಾ. ನೋಡು ನಿನ್ನಮ್ಮ ಇವತ್ತಿಗೂಕೊತ್ತಂಬ್ರಿ ಸೊಪ್ಪನ್ನು ‘ಕೊತ್ತಿಮ್ರಿ ಸೊಪ್ಪು’ ಅಂತಲೇ ಯೋಳ್ತಾಳೆ ಕಣಪ್ಪಿ ಹಾಗೆ...’

–ಹೀಗೆ ವಿಡಿಯೊ ತುಂಬಾ ಆಡುಭಾಷೆಗಳ ಪದಪ್ರಯೋಗ ಮತ್ತು ರಾಜಧಾನಿಯ ಕನ್ನಡದ ಬಗ್ಗೆ ಚರ್ಚೆ ಮಾಡಿದ್ದಾರೆ ಪುನೀತ್‌. ಫೇಸ್‌ಬುಕ್‌ನಲ್ಲಿ ಸಾವಿರಕ್ಕೂ ಅಧಿಕ ಸ್ನೇಹಿತರನ್ನು ಹೊಂದಿರುವ ಪುನೀತ್‌ ಇತ್ತೀಚೆಗೆ ಆರಂಭಿಸಿರುವ ವಿಡಿಯೊ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಸಂತ ಶೆಟ್ಟಿ ಎಂಬವರು, ‘ಕೆಲವರಿಗೆ ಕೆಲವು ಆಡುಭಾಷೆ ಮೈಲಿಗೆ ಇದ್ದಂತೆ. ಕುಂದಾಪುರದ ಹ್ವಾಯ್ಕ್‌ ಬರ್ಕ್‌ ಕನ್ನಡ, ಮಂಡ್ಯದ ಹೋಯ್ತದೆ ಬತ್ತದೆ ಕನ್ನಡ, ಧಾರವಾಡದ ಬರ್ರಿ ಕುಂದುರ್ರಿ ಕನ್ನಡ ಅಶುದ್ಧ ಕನ್ನಡ, ಸಾಹಿತ್ಯದಲ್ಲಿ ಬಳಸುವ ಬರಹದ ಒಂದು ಶಿಷ್ಟ ರೂಪದ ಕನ್ನಡ ಮಾತ್ರವೇ ಶುದ್ಧ ಕನ್ನಡ ಎಂಬ ತಪ್ಪು ಅನಿಸಿಕೆ ಆಳವಾಗಿ ಮನೆ ಮಾಡಿದೆ. ಈ ಶುದ್ಧ, ಅಶುದ್ಧದ ಹಗ್ಗ ಹಿಡಿದುಕೊಂಡು ಕನ್ನಡದ ಒಳನುಡಿಗಳನ್ನು ಆಡುವವರಲ್ಲಿ ತಮ್ಮ ಕನ್ನಡದ ಬಗ್ಗೆಯೇ ಕೀಳರಿಮೆ ಮೂಡಿಸುವ ಕೆಲವೂ ಇಂತಹ ನಂಬಿಕೆಯುಳ್ಳ ಜನರಿಂದ ಆಗಿದೆ. ಕನ್ನಡಿಗ ಮಾತಾಡಿದ್ದೇ ಕನ್ನಡ’ ಎಂದು ಪ್ರತಿಕ್ರಿಯಿಸಿದ್ದಾರೆ.

63ನೇ ಕನ್ನಡ ರಾಜ್ಯೋತ್ಸವ ಆಚರಿಸಲು ಭುವನೇಶ್ವರಿಯ ಧ್ವಜದ ಮಡಿಕೆ ಬಿಚ್ಚುತ್ತಿದ್ದೇವೆ. ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಎಂಬ ಶಿಸ್ತು ಅಳವಡಿಸಿಕೊಳ್ಳುವುದು ಸಾಧ್ಯವಾಗದಿದ್ದರೂ ಕನ್ನಡ ಮಾತನಾಡುವ ಉಮೇದನ್ನು ಪ್ರೋತ್ಸಾಹಿಸುವುದು ಅಗತ್ಯ ನೀವೇನಂತೀರಿ?

ಪುನೀತ್‌ ಅವರ ಫೇಸ್‌ಬುಕ್‌ ಪುಟದ ಕೊಂಡಿ: https://www.facebook.com/ba.puneeth

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT