ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಬರದಿಂದ ಕಲಿಯದ ಪಾಠ | ಅಣೆಕಟ್ಟೆ ಸುತ್ತಲಿನ ಕೆರೆಗಳೇ ಖಾಲಿ!

120 ಟಿ.ಎಂ.ಸಿ. ನೀರು ನದಿಗೆ
Last Updated 10 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಸತತ ನಾಲ್ಕು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಬರದಿಂದ ತತ್ತರಿಸುತ್ತಿದೆ. ಮಳೆಗಾಲದಲ್ಲೇ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ಆದರೂ ನೀರಿನ ಸದ್ಬಳಕೆ ವಿಚಾರದಲ್ಲಿ ಗಂಭೀರವಾಗಿಲ್ಲ. ಅದಕ್ಕೆ ಜ್ವಲಂತ ಸಾಕ್ಷಿ ಅಪಾರ ಪ್ರಮಾಣದ ನೀರು ನದಿಯಲ್ಲಿ ಹರಿದು ಹೋಗುತ್ತಿರುವುದು.

ಆಗಸ್ಟ್‌ ಮೊದಲ ವಾರದಿಂದ ಇದುವರೆಗೆ 120 ಟಿ.ಎಂ.ಸಿ. ಅಡಿ ನೀರು ವ್ಯರ್ಥ ನದಿಯಲ್ಲಿ ಹರಿದು ಹೋಗಿದೆ. ಇನ್ನೂ ಹರಿದು ಹೋಗುತ್ತಲೇ ಇದೆ. ಆ ನೀರಿನಿಂದ ಒಂದೇ ಒಂದು ಕೆರೆ ಕಟ್ಟೆಗಳನ್ನು ತುಂಬಿಸುವ ಯೋಜನೆಯಾಗಲಿ, ಅದರ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳಾಗಲಿ ನಡೆದಿಲ್ಲ. ನಾಲ್ಕು ವರ್ಷಗಳಿಂದ ಜನರ ಜೀವನ ದುಸ್ತರಗೊಂಡಿದೆ. ಆದರೂ ಎಚ್ಚೆತ್ತುಕೊಂಡಿಲ್ಲ.

ಎರಡು ತಿಂಗಳ ಅವಧಿಯಲ್ಲಿ ಎರಡು ಸಲ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸುತ್ತಿರುವ ಕಾರಣ ಕಾಲುವೆ ಭಾಗದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಶೇ 70ರಷ್ಟು ಪ್ರದೇಶದಲ್ಲಿ ಮಳೆಯನ್ನೇ ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ. ಸಮರ್ಪಕವಾಗಿ ಮಳೆಯಾಗದ ಕಾರಣ ಅನೇಕ ಕಡೆ ಬಿತ್ತನೆಯೇ ಆಗಿಲ್ಲ. ಬಹುತೇಕ ಕೆರೆ ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಹೀಗಿದ್ದರೂ ಅವುಗಳನ್ನು ತುಂಬಿಸುವ ಕುರಿತು ಜನಪ್ರತಿನಿಧಿಗಳು ಗಂಭೀರವಾಗಿಲ್ಲ ಎಂದು ಆರೋಪಿಸುತ್ತಾರೆ ರೈತ ಮುಖಂಡರು.

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದು

‘ನದಿಯಲ್ಲಿ ವ್ಯರ್ಥ ಹರಿದು ಹೋಗುತ್ತಿರುವ ನೀರಿನ ಸದ್ಬಳಕೆ ವಿಚಾರದಲ್ಲಿ ಆಂಧ್ರ ಪ್ರದೇಶ ಹೆಚ್ಚಿನ ಕಾಳಜಿ ತೋರಿಸುತ್ತಿದೆ. ಅದಕ್ಕಾಗಿ ಪ್ರತ್ಯೇಕ ಕಾಲುವೆಯನ್ನೇ ನಿರ್ಮಿಸಿಕೊಂಡು ಆಂಧ್ರಕ್ಕೆ ನೀರು ಹರಿಸಿಕೊಳ್ಳಲು ಯೋಜನೆ ರೂಪಿಸಿದೆ. ಆದರೆ, ಕರ್ನಾಟಕ ತಕರಾರು ತೆಗೆದಿರುವುದರಿಂದ ಅದು ನನೆಗುದಿಗೆ ಬಿದ್ದಿದೆ. ಆದರೆ, ರಾಜ್ಯ ಸರ್ಕಾರವು ಆಂಧ್ರದಂತೆ ಯಾವುದೇ ಹೊಸ ಯೋಜನೆ ರೂಪಿಸಲು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌.

‘ಜಿಂದಾಲ್‌ ಕಂಪನಿ ದರೋಜಿ ಕೆರೆ ಅಭಿವೃದ್ಧಿ ಪಡಿಸಿ, ಸುಮಾರು ಎರಡು ಟಿ.ಎಂ.ಸಿ. ಅಡಿ ನೀರು ಸಂಗ್ರಹಿಸಿದೆ. ಅಷ್ಟೇ ಅಲ್ಲ, ಆಲಮಟ್ಟಿಯಿಂದ ಪೈಪ್‌ಲೈನ್‌ ಮೂಲಕ ನೀರು ತರುತ್ತಿದೆ. ಕಂಪನಿಯೊಂದು ಇಷ್ಟೆಲ್ಲ ಮಾಡುತ್ತಿರುವಾಗ ಸರ್ಕಾರ ಏನೂ ಮಾಡುತ್ತಿಲ್ಲವೆಂದರೆ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ’ ಎನ್ನುತ್ತಾರೆ ರೈತ ಮುಖಂಡ ರುದ್ರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT