ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ, ಕಳಸಾ– ಬಂಡೂರಿ ಯೋಜನೆ: ಭೇಟಿಯಾಗದ ರಾಜ್ಯಪಾಲ; ಕಣ್ಣೀರಿಟ್ಟ ಮಹಿಳೆಯರು

Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹದಾಯಿ, ಕಳಸಾ– ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಉತ್ತರ ಕರ್ನಾಟಕದ ರೈತರು, ತಮ್ಮ ಭೇಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಒಪ್ಪದಿದ್ದರಿಂದ ಧರಣಿಯನ್ನು ಶನಿವಾರ ಅಂತ್ಯಗೊಳಿಸಿದರು.

‘ಬೆಂಗಳೂರು ಚಲೊ’ ಮೂಲಕ ಹುಬ್ಬಳ್ಳಿಯಿಂದ ಗುರುವಾರ ನಗರಕ್ಕೆ ಬಂದಿದ್ದ ರೈತರನ್ನು ರೈಲು ನಿಲ್ದಾಣದಲ್ಲೇ ಪೊಲೀಸರು ತಡೆದಿದ್ದರು. ರೈತರಿಂದ ಮನವಿ ಸ್ವೀಕರಿಸಲು ರಾಜ್ಯಪಾಲರೂ ಸಮಯ ನೀಡಿರಲಿಲ್ಲ. ರಾಜ್ಯಪಾಲರು ಮನವಿ ಸ್ವೀಕರಿಸುವವರೆಗೂ ನಗರ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದ ರೈತರು, ನಿಲ್ದಾಣದ ಆವರಣದಲ್ಲೇ ಕುಳಿತು ಸುರಿಯುವ ಮಳೆಯಲ್ಲೂ ಅಹೋರಾತ್ರಿ ಧರಣಿ ಮುಂದುವರಿಸಿದ್ದರು.

ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಗಳು, ಐವರು ರೈತ ಮಹಿಳೆಯರನ್ನು ರಾಜಭವನಕ್ಕೆ ಕರೆದೊಯ್ದಿದ್ದರು. ಮನವಿ ಸ್ವೀಕರಿಸಲು ರಾಜ್ಯಪಾಲರು ಬರಲೇ ಇಲ್ಲ. ಅವರ ಪರವಾಗಿ ವಿಶೇಷ ಕರ್ತವ್ಯಾಧಿಕಾರಿಯೇ ಮಹಿಳೆಯರಿಂದ ಮನವಿ ಸ್ವೀಕರಿಸಿದರು.

ಕಣ್ಣೀರಿಡುತ್ತಲೇ ರಾಜಭವನದಿಂದ ಹೊರಬಂದ ರೈತ ಮಹಿಳೆಯರು, ‘ತವರು ಮನೆಗೆ ಹೋದರೂ ತಂದೆ ಸಿಗಲಿಲ್ಲ. ಮಡಿಲು ಬರಿದು ಮಾಡಿ ಕೊಂಡು ಹೊರಗೆ ಬಂದಿದ್ದೇವೆ. ತಂದೆ ಸತ್ತ ಮಕ್ಕಳು ನಾವು’ ಎಂದು ದುಃಖಿತರಾದರು.

‘ನಮ್ಮನ್ನು ಭೇಟಿಯಾಗಲು ರಾಜ್ಯಪಾಲರಿಗೆ ಇಷ್ಟವಿಲ್ಲವಂತೆ. ಅಧಿಕಾರಿಗೆ ಮನವಿ ಕೊಟ್ಟಿದ್ದೇವೆ. ಈಗ ವಾಪಸ್‌ ಹೋಗುತ್ತೇವೆ. ಮುಂದೆ ಏನು ಮಾಡಬೇಕು ಎಂಬುದನ್ನುಇನ್ನಷ್ಟು ದಿನ ಬಿಟ್ಟು ತೀರ್ಮಾನಿಸುತ್ತೇವೆ’ ಎಂದು ರೈತ ಮಹಿಳೆ ಹೇಮಾ ತಿಳಿಸಿದರು.

ಹುದ್ದೆಗೆ ಗೌರವ ಕೊಟ್ಟು ಧರಣಿ ಹಿಂದಕ್ಕೆ: ‘ಮನವಿ ಸ್ವೀಕರಿಸಲು ಆಗುವುದಿಲ್ಲವೆಂದು ರಾಜ್ಯಪಾಲರೇ ಹೇಳುತ್ತಿರುವಾಗ, ಧರಣಿಯನ್ನು ಮುಂದುವರಿಸಿ ಪ್ರಯೋಜನವಿಲ್ಲ. ಅವರ ಹುದ್ದೆಗೆ ಗೌರವ ಕೊಟ್ಟು ಧರಣಿ ಹಿಂದಕ್ಕೆ ಪಡೆದಿದ್ದೇವೆ’ ಎಂದು ರೈತ ಸೇನಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

‘ರಾಜ್ಯಪಾಲರ ವಿರುದ್ಧ ಬಂದವರೂ ನಾವಲ್ಲ. ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಬುದ್ದಿಯೂ ನಮಗಿಲ್ಲ. ಊರಿಗೆ ಹೋದ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳು ತ್ತೇವೆ’ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿಗೆ ರೈತರ ತರಾಟೆ

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ‘ನಾವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿಲ್ಲ. ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬಂದಿದ್ದೇವೆ. ಸರ್ಕಾರ ಹಾಗೂ ಪಕ್ಷಗಳ ಬೆಂಬಲವೂ ನಮಗೆ ಬೇಕಿಲ್ಲ. ವಾಪಸ್‌ ಹೋಗಿ’ ಎಂದರು.

ಉಪಮುಖ್ಯಮಂತ್ರಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ವೀರೇಶ ಸೊಬರದಮಠ, ‘ಇವರೆಲ್ಲ ನಾಟಕ ಮಾಡಲು ಬಂದು ಹೋಗುತ್ತಾರೆ. ಉಪಮುಖ್ಯಮಂತ್ರಿ ಬಂದಿದ್ದಕ್ಕೆ ಧರಣಿ ಹಿಂಪಡೆದಿಲ್ಲ. ರಾಜ್ಯಪಾಲರು ಮನವಿ ಸ್ವೀಕರಿಸಲು ಒಪ್ಪದಿದ್ದಕ್ಕೆ ಧರಣಿ ಅಂತ್ಯಗೊಳಿಸಲಾಗಿದೆ’ ಎಂದು ಹೇಳಿದರು.

‘ನಮಗೆ ಯಾವುದೇ ಮುಖ್ಯಮಂತ್ರಿ, ಪಕ್ಷದವರು ಬೇಕಾಗಿಲ್ಲ. ರಾಜ್ಯದ ಮೂರು ಪಕ್ಷದವರು,ಮಹದಾಯಿ ಹೆಸರಿನಲ್ಲಿ ಲೂಟಿ ಮಾಡಿ ತಿಂದು ತೇಗಿದ್ದಾರೆ. ಅವರಿಗೆಲ್ಲ ನಾಚಿಕೆ ಆಗಬೇಕು. ಮಾನ, ಮರ್ಯಾದೆಯೂ ಅವರಿಗಿಲ್ಲ’ ಎಂದು ಕಿಡಿಕಾರಿದ ರೈತರು, ‘ರೈತರಿಗಾಗಿ ಸರ್ಕಾರ ಹುಟ್ಟಿದೆ. ಸರ್ಕಾರಕ್ಕಾಗಿ ನಾವು ಹುಟ್ಟಿಲ್ಲ. ಉತ್ತರ ಕರ್ನಾಟಕದ ಸಂಸದರು ಹಾಗೂ ಶಾಸಕರು, ರೈತ ಹೋರಾಟಗಾರರನ್ನೇ ಮುಗಿಸಲು ಹೊರಟಿದ್ದಾರೆ. ಏನಾದರೂ ಪ್ರಶ್ನೆ ಮಾಡಿದರೆ ಹೊಡೆಸುತ್ತಾರೆ. ಹೋರಾಟಗಾರ ಸತ್ತ ಎಂದು ಸುದ್ದಿ ಹಬ್ಬಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಳಿದ್ದಕ್ಕೆಲ್ಲ ಹೇಳೋಕೆ ಆಗೊಲ್ಲ’

‘ರೈತರು ಮನವಿ ಸಲ್ಲಿಸಲು ರಾಜ್ಯಪಾಲರ ಸಮಯ ಕೊಡಿಸಲು ನಿಮ್ಮಿಂದ ಆಗುವುದಿಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಗೋವಿಂದ ಕಾರಜೋಳ, ‘ನೀವು ಕೇಳಿದ್ದಕ್ಕೆಲ್ಲ ಹೇಳೋಕೆ ಆಗುವುದಿಲ್ಲ. ನೀವ್ಯಾರೂ ಹೋರಾಟಗಾರರಲ್ಲ, ನಾವು ಹೋರಾಟಗಾರರು’ ಎಂದರು.

‘ರಾಜ್ಯಪಾಲರ ಭೇಟಿಯಾಗಲುಅತೃಪ್ತ ಶಾಸಕರಿಗೆ ಬೇಗನೇ ಸಮಯ ಕೊಡಿಸುತ್ತೀರಾ. ರೈತರಿಗೆ ಕೊಡಿಸಲು ಆಗುವುದಿಲ್ಲವೇ’ ಎಂದು ಕೇಳಿದಾಗ, ಉತ್ತರಿಸಲಾಗದೇ ಸ್ಥಳದಿಂದ ಹೊರಟು ಹೋದರು.

ರಾಜಭವನದಲ್ಲಿ ಅಡ್ಡಿ: ರಾಜಭವನ ಎದುರು ಸುದ್ದಿಗಾರರ ಜೊತೆ ರೈತ ಮಹಿಳೆಯರು ಮಾತನಾಡುವ ವೇಳೆಯಲ್ಲೂ ಪೊಲೀಸರು ಅಡ್ಡಿಪಡಿಸಿದರು.

ಒಂದೂವರೆ ತಿಂಗಳಲ್ಲಿ ಪರಿಹಾರ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ‘ಮಹದಾಯಿ, ಕಳಸಾ– ಬಂಡೂರಿ ನ್ಯಾಯಮಂಡಳಿ ತೀರ್ಪು ಅಧಿಸೂಚನೆ ಹೊರಡಿಸಲು ಎದುರಾಗಿರುವ ಸಮಸ್ಯೆಗೆ ಒಂದೂವರೆ ತಿಂಗಳಲ್ಲಿ ಪರಿಹಾರ ದೊರೆಯುವ ವಿಶ್ವಾಸವಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದರು.

‘ಕರ್ನಾಟಕ ಮತ್ತು ಗೋವಾ ಸರ್ಕಾರಗಳೆರಡೂ ಮಹದಾಯಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮಂಡಳಿಯಿಂದ ಸ್ಪಷ್ಟೀಕರಣ ಕೇಳಿ ಮೇಲ್ಮನವಿ ಸಲ್ಲಿಸಿವೆ. ಹೀಗಿದ್ದಾಗ ಅಧಿಸೂಚನೆ ಹೊರಡಿಸಬಹುದೇ ಅಥವಾ ಮೇಲ್ಮನವಿ ವಾಪಸ್‌ ಪಡೆದ ಬಳಿಕ ಅಧಿಸೂಚನೆ ಹೊರಡಿಸಬೇಕೇ ಎನ್ನುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕೇಳಲಾಗಿದೆ’ ಎಂದು ತಿಳಿಸಿದರು.

‘ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ ಅವರನ್ನು ಎರಡು ಬಾರಿ ಭೇಟಿಯಾಗಿ ಅಧಿಸೂಚನೆ ಹೊರಡಿಸಲು ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದೆ. ಮೊದಲು ಪರಿಶೀಲಿಸುವುದಾಗಿ ಹೇಳಿದ್ದ ಅವರು, ನಂತರ ಸಹಕಾರ ಸಾಧ್ಯವಿಲ್ಲ ಎಂದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT