ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ₹ 50 ಕೋಟಿಗೂ ಹೆಚ್ಚು ವಂಚನೆ

ಸಿಐಡಿ ತನಿಖೆಗೆ ಶಿಫಾರಸು ಮಾಡಿದ ಪೊಲೀಸ್‌ ಕಮಿಷನರ್‌
Last Updated 11 ಜನವರಿ 2020, 16:05 IST
ಅಕ್ಷರ ಗಾತ್ರ

ಮಂಗಳೂರು: ತಿಂಗಳಿಗೆ ಶೇ 4ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದ ತಂಡವೊಂದು ನೂರಾರು ಮಂದಿಗೆ ₹ 50 ಕೋಟಿಗೂ ಹೆಚ್ಚು ವಂಚಿಸಿದೆ. ಈ ಸಂಬಂಧ ನಗರದ ವಿವಿಧ ಪೊಲೀಸ್‌ ಠಾಣೆಗಳಿಗೆ ದೂರುಗಳ ಮಹಾಪೂರವೇ ಹರಿದುಬರುತ್ತಿದೆ.

ಕುಂದಾಪುರ ತಾಲ್ಲೂಕಿನ ಧನುಷ್‌ ಎಂ.ಕೆ. ಎಂಬಾತ ತನ್ನ ಸಂಬಂಧಿಗಳು ಮತ್ತು ಸ್ನೇಹಿತರ ಜೊತೆಗೂಡಿ ಪ್ರಾರಂಭಿಸಿದ್ದ ‘ಸ್ಪೀಕ್‌ ಅಂಡ್‌ ಗ್ರೂಪ್‌’ ಎಂಬ ಕಂಪನಿಯಿಂದ ಈ ವಂಚನೆ ನಡೆದಿದೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದು, 60ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ. ಕಾವೂರು ಮತ್ತು ಕಂಕನಾಡಿ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ.

‘ಇದು ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ. ಆದ್ದರಿಂದ ತನಿಖೆಯನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸುವಂತೆ ಕೋರಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಈವರೆಗೆ ಸಲ್ಲಿಕೆಯಾಗಿರುವ ದೂರುಗಳನ್ನು ಆಧರಿಸಿ ಪೊಲೀಸರು ನಡೆಸಿರುವ ಪ್ರಾಥಮಿಕ ಅಂದಾಜಿನ ಪ್ರಕಾರ ₹ 50 ಕೋಟಿಗೂ ಹೆಚ್ಚಿನ ವಂಚನೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಧನುಷ್‌ ಹಾಗೂ ಆತನ ಸ್ನೇಹಿತೆ ಜೀನ್‌ ನಿಶಾ ಮಿಸ್ಕಿತ್‌ ನಾಪತ್ತೆಯಾಗಿದ್ದು, ಇಬ್ಬರೂ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ಉದಯಕುಮಾರ್‌ ನಾಯ್ಕ್ ಕೂಡ ತಲೆಮರೆಸಿಕೊಂಡಿದ್ದಾನೆ.

ಐವರ ಬಂಧನ: ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಂಗಳೂರಿನ ದೇರೆಬೈಲ್‌ ನಿವಾಸಿ ಮಂಜುನಾಥ ನಾಯಕ್‌, ಬೆಂಗಳೂರಿನ ಮತ್ತಿಕೆರೆ ಸಮೀಪದ ಮುತ್ಯಾಲನಗರ ನಿವಾಸಿ ವಿಕಾಸ್‌ ನಾಯಕ್‌ ಅಲಿಯಾಸ್ ತಿಲಕ್‌ ರಾಜ್‌, ಮಂಗಳೂರಿನ ಕೊಂಚಾಡಿ ನಿವಾಸಿ ಡೆಂಜಿಲ್‌ ಮಸ್ಕರೇನಸ್‌, ದೇರೆಬೈಲ್‌ ನಿವಾಸಿ ಅಶೋಕ್‌ ನಾಯ್ಕ್‌ ಮತ್ತು ಬೆಂಗಳೂರಿನ ಮತ್ತಿಕೆರೆಯ ವಿಶ್ವನಾಥ ನಾಯಕ್‌ ಎಂಬುವವರನ್ನು ಡಿಸೆಂಬರ್‌ 30ರಂದೇ ಬಂಧಿಸಲಾಗಿದೆ.

‘ಆರೋಪಿಗಳಲ್ಲಿ ಬಹುಪಾಲು ಮಂದಿ ಧನುಷ್‌ ಕುಟುಂಬದ ಸದಸ್ಯರೇ ಆಗಿದ್ದಾರೆ. ಕಂಪನಿಯ ಪ್ರಮುಖ ಹುದ್ದೆಗಳನ್ನು ತನ್ನ ಸಂಬಂಧಿಕರಿಗೇ ನೀಡಿದ್ದ. ಮಂಗಳೂರಿನ ಬೋಂದೆಲ್‌, ವೆಲೆನ್ಸಿಯಾ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಚೇರಿ ತೆರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಿಮೆ ತೋರಿಸಿ ನಂಬಿಸಿದರು

ಆರೋಪಿಗಳು ತಮ್ಮಲ್ಲಿ ಹೂಡಿಕೆ ಮಾಡುವವರಿಗೆ ಶೇ 4ರ ಬಡ್ಡಿ ಮತ್ತು ವಿಶೇಷ ಬೋನಸ್‌ ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು. ‘ಮೆಟ್‌ಲೈಫ್‌’ ಕಂಪನಿಯ ವಿಮಾ ಯೋಜನೆಗಳನ್ನು ತೋರಿಸಿ ಅದೇ ಮಾದರಿಯಲ್ಲಿ ತಮ್ಮ ಕಂಪನಿಯೂ ಲಾಭ ನೀಡುತ್ತದೆ ಎಂದು ಗ್ರಾಹಕರನ್ನು ನಂಬಿಸುತ್ತಿದ್ದರು. ಗಲ್ಫ್‌ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ನೂರಾರು ಮಂದಿ ಇವರ ಮಾತನ್ನು ನಂಬಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT