ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಎಫ್‌ಐಆರ್‌

ಆಡಿಯೊ ಪ್ರಕರಣ: ಪಟ್ಟು ಸಡಿಲಿಸದ ಸರ್ಕಾರ * ಇಂದು ಸಂಜೆಯೊಳಗೆ ಎಸ್‌ಐಟಿ ರಚನೆ
Last Updated 13 ಫೆಬ್ರುವರಿ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು/ ರಾಯಚೂರು: ‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ಮೈತ್ರಿ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ರಾಯಚೂರಿನ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಾಗಿದೆ.

‘ಯಡಿಯೂರಪ್ಪ, ಶಾಸಕರಾದ ಕೆ.ಶಿವನಗೌಡ ನಾಯಕ, ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ.ಮರಮಕಲ್‌ ಅವರು ಅಕ್ರಮ ಕೂಟ ರಚಿಸಿಕೊಂಡು ಅಪರಾಧ ಎಸಗಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಗುರುಮಠಕಲ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ದೂರು ನೀಡಿದ್ದರು.

ಎಸ್‌ಐಟಿ ರಚನೆ ಸಂಬಂಧ ಗುರುವಾರ ಸಂಜೆ ವೇಳೆಗೆ ಸರ್ಕಾರಿ ಆದೇಶ ಹೊರಬೀಳುವ ಸಾಧ್ಯತೆ ಇದೆ. ಆ ಆದೇಶವನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಶಾಸಕರು ಖರೀದಿಗೆ ಇರುವ ವಸ್ತುಗಳು ‌ಎಂಬ ಭಾವನೆ ಎಲ್ಲರಿಗೂ ಬಂದುಬಿಟ್ಟಿದೆ. ಇಂತಹ ಭಾವನೆ ಅಪಾಯಕಾರಿ. ಶಾಸಕರ ಖರೀದಿ ಶಾಶ್ವತವಾಗಿ ನಿಲ್ಲುವಂತಾಗಬೇಕು. ಅದಕ್ಕಾಗಿಯೇ ಆಡಿಯೊ ಪ್ರಕರಣವನ್ನು ಎಸ್‌ಐಟಿಗೆ ಕೊಟ್ಟಿದ್ದೇವೆ’ ಎಂದರು.

‘ತಂಡಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಯಾರದ್ದೇ ಪ್ರಭಾವಕ್ಕೂ ಒಳಗಾಗಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸುತ್ತೇನೆ. ರಾಜ್ಯದಲ್ಲಿ ಶಾಸಕರ ಖರೀದಿ ಪ್ರಕರಣಗಳು ಮರುಕಳಿಸದಂತೆ ತನಿಖೆ ಮಾಡಲು ಸೂಚಿಸುತ್ತೇನೆ’ ಎಂದರು.

ಈ ಆಡಿಯೊದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರಿಂದ ಎಸ್‌ಐಟಿಯಿಂದ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಸೋಮವಾರ ರೂಲಿಂಗ್‌ ನೀಡಿದ್ದರು. ‘ಯಾವುದೇ ಕಾರಣಕ್ಕೂ ಎಸ್‌ಐಟಿಯಿಂದ ತನಿಖೆ ನಡೆಸಬಾರದು. ಸದನ ಸಮಿತಿ ಅಥವಾ ಹಕ್ಕುಬಾಧ್ಯತಾ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಮಂಗಳವಾರದ ಕಲಾಪದಲ್ಲಿ ತನಿಖಾ ಸ್ವರೂಪದ ಬಗ್ಗೆ ಹಗ್ಗಜಗ್ಗಾಟ ನಡೆದಿತ್ತು.

ಬಿಕ್ಕಟ್ಟು ಇತ್ಯರ್ಥಪಡಿಸಲು ರಮೇಶ್‌ ಕುಮಾರ್‌ ಕೊಠಡಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಪ್ರಮುಖರ ಸಭೆ ಬುಧವಾರ ಬೆಳಿಗ್ಗೆ ನಡೆಯಿತು. ‘ಎಸ್‌ಐಟಿಯಿಂದಲೇ ತನಿಖೆ ನಡೆಯಲಿದೆ. ಈ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದಿಡಲು ಸಾಧ್ಯವೇ ಇಲ್ಲ’ ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪಮುಖ್ಯ
ಮಂತ್ರಿ ಜಿ.ಪರಮೇಶ್ವರ ಬಲವಾಗಿ ಪ್ರತಿ‍ಪಾದಿಸಿದರು. ಇದಕ್ಕೆ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದರು.

‘ಬಿಜೆಪಿ ಶಾಸಕರ ಧ್ವನಿಯನ್ನು ಅಡಗಿಸಲು ಎಸ್‌ಐಟಿಯನ್ನು ಅಸ್ತ್ರವನ್ನಾಗಿ ಬಳಸಲಾಗುತ್ತದೆ. ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ಶಾಸಕರು ಪಟ್ಟು ಹಿಡಿದರು. ಇದಕ್ಕೆ ಮೈತ್ರಿಕೂಟದ ನಾಯಕರು ಒಪ್ಪದಿದ್ದಾಗ ಬಿಜೆಪಿ ನಾಯಕರು ಸಭೆಯಿಂದ ಹೊರ ನಡೆದರು. ಸಭಾಧ್ಯಕ್ಷರು ಮತ್ತೊಮ್ಮೆ ಸಭೆ ಕರೆದರು. ಸಭೆಯಲ್ಲಿ ಒಮ್ಮತಕ್ಕೆ ಬರಲಾಗಲಿಲ್ಲ.

‘ಸರ್ಕಾರ ಎಸ್‍ಐಟಿ ತನಿಖೆಯೇ ಆಗಬೇಕೆಂದು ಸಹಟ ಮಾಡುತ್ತಿದೆ. ಇದನ್ನು ವಿರೋಧಿಸಿ ನಾವು ಅಹೋರಾತ್ರಿ ಹೋರಾಟ ಮಾಡುತ್ತೇವೆ’ ಎಂದು ಪ್ರಕಟಿಸಿದ ಯಡಿಯೂರಪ್ಪ, ತಮ್ಮ ಪಕ್ಷದ ಸದಸ್ಯರ ಜತೆ ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಧರಣಿ ನಡೆಸಿದರು.

ಯಡಿಯೂರಪ್ಪ ನಂ.1 ಆರೋಪಿ

ಶಾಸಕ ನಾಗನ ಗೌಡ ಅವರ ಪುತ್ರ ಶರಣಗೌಡ ಅವರು ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ಸಲ್ಲಿಸಿದ್ದು, ಪೊಲೀಸರು ಎಫ್ಐ ಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಶಾಸಕ ಕೆ.ಶಿವನಗೌಡ ನಾಯಕ, ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ.ಮರಮಕಲ್‌ ಅವರನ್ನೂ ಆರೋಪಿಗಳನ್ನಾಗಿಸಲಾಗಿದೆ.

ಎಸ್‌ಐಟಿ ಏನು, ಎತ್ತ?

*ಎಸ್‌ಐಟಿ ರಚನೆ ಆದೇಶದಲ್ಲಿ ತಂಡಕ್ಕೆ ಪೊಲೀಸ್‌ ಠಾಣೆ ಅಧಿಕಾರ ನೀಡಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಬೇಕು

*ಈ ಪ್ರಕರಣದ ತನಿಖೆ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯಡಿ ನಡೆಯಲಿದ್ದು, ರಾಜಕೀಯ ಮುಖಂಡರ ದನಿ ಆಡಿಯೋದಲ್ಲಿ ಇರುವುದರಿಂದ ಬಂಧನ ಸಾಧ್ಯತೆ ಕಡಿಮೆ. ಕಟ್ಟಕಡೆ ಅಸ್ತ್ರವಾಗಿ ಇದನ್ನು ಬಳಸಬಹುದು.

*ಆದರೆ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಡಲು ಅವಕಾಶವಿದೆ. ಬೇಕಾದರೆ ಅದನ್ನು ಕೋರ್ಟ್‌ನಲ್ಲಿ ಸಂಬಂಧಪಟ್ಟವರು ಪ್ರಶ್ನಿಸಬಹುದು.

*ಆರೋಪಿಗಳನ್ನು ಬಂಧಿಸಬಾರದು ಎಂದು ಎಸ್‌ಐಟಿಗೆ ಕೋರ್ಟ್‌ ಷರತ್ತು ಹಾಕಬಹುದು.

*ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೆ ಚಾರ್ಜ್‌ಶೀಟ್‌ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT