ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ನಷ್ಟದ ಅಂದಾಜು: ರಾಜ್ಯದ ವರದಿ ತಿರಸ್ಕರಿಸಿದ ಕೇಂದ್ರ

ಪ್ರವಾಹ ಪರಿಹಾರ; ಸ್ಪಷ್ಟನೆ ಕೋರಿದ ಕೇಂದ್ರ
Last Updated 3 ಅಕ್ಟೋಬರ್ 2019, 20:32 IST
ಅಕ್ಷರ ಗಾತ್ರ

ನವದೆಹಲಿ: ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಕೆಲವು ಸ್ಪಷ್ಟನೆ ಕೋರಿರುವ ಕೇಂದ್ರ ಸರ್ಕಾರ, ನಷ್ಟದ ಪ್ರಮಾಣವನ್ನು ಅಧಿಕೃತವಾಗಿ ಪ್ರಮಾಣೀಕರಿಸುವಂತೆ ಸೂಚಿಸಿದೆ.

ಕಳೆದ ಜುಲೈ ತಿಂಗಳಲ್ಲಿ ನದಿಗಳು ಉಕ್ಕಿ ಹರಿದಿದ್ದರಿಂದ ಪ್ರವಾಹ ಸ್ಥಿತಿ ತಲೆದೋರಿ ಅಂದಾಜು ₹38,000 ಕೋಟಿಗೂ ಅಧಿಕ ಪ್ರಮಾಣದ ನಷ್ಟಉಂಟಾಗಿದೆ. ರಾಷ್ಟ್ರೀಯ ನೈಸರ್ಗಿಕವಿಪತ್ತು ಪರಿಹಾರ (ಎನ್‌ಡಿಆರ್‌ಎಫ್‌) ನಿಯಮಾವಳಿ ಅನ್ವಯ ₹ 3,500 ಕೋಟಿ ಪರಿಹಾರದ ನೆರವು ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಕೇಂದ್ರದ ತಂಡ ಅಧ್ಯಯನ ನಡೆಸಿ ಪ್ರತ್ಯೇಕ ವರದಿ ಸಲ್ಲಿಸಿದೆ. ಆದರೆ, ಈ ವರದಿಯು ರಾಜ್ಯ ಸರ್ಕಾರ ಸಲ್ಲಿಸಿರುವ ನಷ್ಟದೊಂದಿಗೆ ತಾಳೆಯಾಗುತ್ತಿಲ್ಲ. ಕೂಡಲೇ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಕೇಂದ್ರವು ರಾಜ್ಯಕ್ಕೆ ಸೂಚಿಸಿತ್ತು. ಗುರುವಾರ ಕಂದಾಯ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಕೇಂದ್ರದ ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತ ಸ್ಪಷ್ಟನೆ ನೀಡಿದೆ.

ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ನಷ್ಟವನ್ನು ಅಂದಾಜಿಸಲಾಗಿದೆ. ನಷ್ಟದ ಪ್ರಮಾಣವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗಿದೆ ಎಂದು ರಾಜ್ಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರದ ಅಧಿಕಾರಿಗಳು, ಸ್ಪಷ್ಟ ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.

‘ನಮ್ಮ ಪ್ರಸ್ತಾವನೆಯಲ್ಲಿ ಒಟ್ಟು 2.50 ಲಕ್ಷ ಮನೆಗಳು ಸಂಪೂರ್ಣ ನೆಲಕಚ್ಚಿವೆ ಎಂಬ ವಿವರ ಇತ್ತು. ಆದರೆ, ಕೇಂದ್ರದ ಅಧ್ಯಯನ ತಂಡ ಸಲ್ಲಿಸಿರುವ ವರದಿಯ ಪ್ರಕಾರ ಈ ಪ್ರಮಾಣ ಕೇವಲ 1.15 ಲಕ್ಷ. ಪ್ರತಿ ಮನೆಗೆ ₹ 5 ಲಕ್ಷದಂತೆ ಪರಿಹಾರ ಕೋರಲಾಗಿತ್ತು. ನೆಲಕಚ್ಚಿದ ಮನೆಗಳೆಲ್ಲ ₹ 5 ಲಕ್ಷ ಬೆಲೆ ಬಾಳುತ್ತಿದ್ದವೇ ಎಂಬುದನ್ನು ಪ್ರಮಾಣೀಕರಿಸುವಂತೆ ಸೂಚಿಸಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT