ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರೈತಪರ ಅಂದ್ರೆ ಯಾರ ಪರ...?

ಅನುಭವ ಮಂಟಪ
Last Updated 21 ಮೇ 2020, 2:43 IST
ಅಕ್ಷರ ಗಾತ್ರ

ಇವತ್ತು ಯಾರೇ ಆದರೂ ‘ನಮ್ಮದು ರೈತ ಪರ ಹೋರಾಟ’ ಅಂದರೆ ಮೊದಲು ಅವರಲ್ಲಿ ಕೇಳಿ ಸ್ಪಷ್ಟ ಮಾಡಿಕೊಳ್ಳಬೇಕಾದದ್ದು - ‘ಯಾವ ರೈತರ ಪರ?’ ಎಂದು.

ಎಲ್ಲರಿಗೂ ರೈತ ಎಂದಾಕ್ಷಣ ಮನಸ್ಸಿಗೆ ಬರುವ ಚಿತ್ರ ‘ಕೈ ಕೆಸರಾದರೆ ಬಾಯಿ ಮೊಸರು’ ಎಂದು ನಂಬಿ ಶ್ರಮದಲ್ಲೇ
ಹಣ್ಣಾಗುತ್ತಿರುವ ರೈತನದು. ಆದರೆ, ಆ ರೈತ ಈಗ ಮೂಡುತ್ತಿರುವ ಕೃಷಿರಂಗದ ಹೊಸ ಚಿತ್ರಣದಲ್ಲಿ ಇಲ್ಲವೇ ಇಲ್ಲ.

ಎಪಿಎಂಸಿ ಕಾಯಿದೆಯ ಹಲ್ಲು ಕೀಳುವ ಸುಗ್ರೀವಾಜ್ಞೆ ಹೊರಟಾಗ ಮೊದಲ ಬಾರಿಗೆ ರೈತರ ಪರವಾಗಿ ಆಳುವವರು ಮತ್ತು ವಿರೋಧ ಪಕ್ಷದವರು ಇಬ್ಬರೂ ಸಾರ್ವಜನಿಕವಾಗಿ ಬಾಯಿ ತೆರೆದು ಮಾತನಾಡಿದರು. ಎಪಿಎಂಸಿ ಕಾರ್ಯತಃ ಕೃಷಿ ದಲ್ಲಾಳಿಗಳ ಆಡೊಂಬಲ. ರೈತ ಮಾರಿದ್ದನ್ನು ಖರೀದಿಸಿ, ಅಲ್ಲಿಂದ ಕೃಷಿ ಉತ್ಪನ್ನಗಳ ಲಾಜಿಸ್ಟಿಕ್ಸ್ ಅನ್ನು ನಿಭಾಯಿಸುವವರು ಅವರು. ಮೂಲತಃ ಎಪಿಎಂಸಿ ಕಾಯಿದೆ ಜಾರಿಗೆ ಬಂದದ್ದು ರೈತನ ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂಬ ಉದ್ದೇಶದಿಂದ. ಅದು ಇವತ್ತಿಗೂ ಈಡೇರಿಲ್ಲ. ಆದರೆ ಕೃಷಿ ದಲ್ಲಾಳಿ ಸಂಸ್ಥೆಗಳು ಈ ಕಾನೂನಿನ ಭರಪೂರ ಲಾಭ ಎತ್ತುತ್ತಾ ಬಂದಿವೆ.

ಈಗ ಎಪಿಎಂಸಿ ಕಾಯಿದೆ ಬದಲಾವಣೆಯ ಮೊದಲ ಹೊಡೆತ ನೇರವಾಗಿ ಬಿದ್ದದ್ದು ಈ ಮಧ್ಯವರ್ತಿಗಳಿಗೆ. ಅವರು ಕೈಯಲ್ಲಿ ಕಾಸು, ಅಧಿಕಾರದ ಸಾಮೀಪ್ಯ, ರಾಜಕೀಯ ಪ್ರಭಾವ - ಎಲ್ಲವನ್ನೂ ಹೊಂದಿರುವವರು. ಹಾಗಾಗಿ ಅವರ ಪರ ಸ್ವರ ಎದ್ದಿದೆ. ಈ ತಿದ್ದುಪಡಿ ಪರಿಣಾಮವಾಗಿ ರೈತ ತನ್ನ ಉತ್ಪಾದನೆಯನ್ನು ಮುಕ್ತವಾಗಿ ಮಾರಬಹುದು. ಅವನಿಗೆ ಎಪಿಎಂಸಿ
ಮಧ್ಯವರ್ತಿಗಳ ಹಂಗಿರುವುದಿಲ್ಲ. ಯಾರು ಬೇಕಿದ್ದರೂ ರೈತನಿಂದ ನೇರವಾಗಿ ಗದ್ದೆ ಬದಿಯಲ್ಲೇ ಬೆಳೆಯನ್ನು ಖರೀದಿ ಮಾಡಬಹುದು. ಅಂದರೆ, ಈ ಮಧ್ಯವರ್ತಿಗಳಿಗೆ ಈಗ ಅಸಂಖ್ಯ ಪ್ರತಿಸ್ಪರ್ಧಿಗಳು.

ಎಪಿಎಂಸಿ ಕಾಯಿದೆಯ ಈ ಸಂದರ್ಭದಲ್ಲಿ ಕೇಳಿಸಿದ ನೋವಿನ ಚೀತ್ಕಾರ, ಕಳೆದ ಕೆಲವು ವರ್ಷಗಳಿಂದ ರೈತನ ಹೆಸರಲ್ಲಿ ಆಗಿರುವ ಬೇರೆ ಕೆಲವು ಕಾನೂನುಗಳು – ನೀತಿ ಬದಲಾವಣೆಗಳ ವೇಳೆ ಯಾಕೆ ಕೇಳಿಬರಲಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಇಡೀ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ಸಿಗುತ್ತದೆ. ಉದಾಹರಣೆಗೆ, ಇದೇ ಜನವರಿ ಅಂತ್ಯದಲ್ಲಿ ‘ಕರ್ನಾಟಕ ಭೂಸುಧಾರಣಾ ಕಾಯಿದೆ 1961’ಕ್ಕೆ ಬದಲಾವಣೆ ತರಲಾಗುವುದು ಎಂದು ಮುಖ್ಯಮಂತ್ರಿಯವರು ಪ್ರಕಟಿಸಿದಾಗ ಅದಕ್ಕೆ ಯಾವುದೇ ಅಪಸ್ವರ ಎದ್ದಿರಲಿಲ್ಲ. ಇದು ಕೂಡ ನೇರ ಕೃಷಿರಂಗದ ಮೇಲೇ ಪ್ರಭಾವ ಬೀರುವ ಸಂಗತಿ.

* * *

2022ರ ಹೊತ್ತಿಗೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುವಾಗ ಕೃಷಿ ಆದಾಯವನ್ನು ‘ದುಪ್ಪಟ್ಟು’ ಮಾಡುವ ಕೇಂದ್ರ ಸರ್ಕಾರದ ಕನಸು, ಕಳೆದ 2014ರಿಂದ ಈಚೆಗೆ ವೇಗ ಪಡೆದುಕೊಂಡಿದೆ. ಈ ಯೋಜನೆಯ ಲಾಜಿಕ್ ಅನ್ನು ಸ್ಥೂಲವಾಗಿ ವಿವರಿಸ
ಬೇಕೆಂದರೆ, ರೈತರ ಸಂಖ್ಯೆಯನ್ನು ಕಡಿಮೆಗೊಳಿಸಿ, ಕೃಷಿ ಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ದೇಶದ ಜಿಡಿಪಿಗೆ ಕೃಷಿರಂಗದ ಕೊಡುಗೆಯನ್ನು ದುಪ್ಪಟ್ಟು ಮಾಡುವ ಕಾರ್ಯಕ್ರಮ ಇದು. ಈಗ ದೇಶದ ಜನಸಂಖ್ಯೆಯ ಶೇ 50ಕ್ಕೂ ಹೆಚ್ಚಿರುವ ರೈತರು ತಮ್ಮ ಶ್ರಮದ ಹೊರತಾಗಿಯೂ ದೇಶದ ಜಿಡಿಪಿಗೆ ಕೊಡುತ್ತಿರುವ ಕೊಡುಗೆ ತೀರಾ ಸಣ್ಣದು ಎಂಬುದು ಈ ಯೋಜನೆಯ ಹಿಂದಿರುವವರ ಸಂಕಟ.

ಇಂಥದ್ದೊಂದು ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ 35 ವರ್ಷಗಳ ಹಿಂದೆ ಉದಾರೀಕರಣದ ಜೊತೆ ಜೊತೆಗೇ ಆರಂಭವಾಗಿದೆ. ಹಿಂದಿನ ಸರಕಾರಗಳು ಸ್ವಲ್ಪ ಹಿಂಜರಿಕೆಯೊಂದಿಗೆ ಹಂತ ಹಂತವಾಗಿ ಮಾಡುತ್ತಿದ್ದ ಬದಲಾವಣೆಗಳನ್ನು ಹಾಲಿ ಕೇಂದ್ರ ಸರ್ಕಾರ ವೇಗ ಮತ್ತು ಭರಪೂರ ಮಾರ್ಕೆಟಿಂಗ್ ಜೊತೆ ಮಾಡುತ್ತಿದೆ. ಹಿಂದಿನ ಮತ್ತು ಈಗಿನ ಸರ್ಕಾರಗಳ ನಡುವಣ ವ್ಯತ್ಯಾಸ ಅಷ್ಟೆ.

ಕರ್ನಾಟಕದಲ್ಲೇ ಆರಂಭಗೊಂಡ ಭೂದಾಖಲೆಗಳ ಡಿಜಿಟಲೀಕರಣದಿಂದ ಆರಂಭಿಸಿ, ಕೃಷಿಭೂಮಿ ಗುತ್ತಿಗೆ ಕಾಯಿದೆ, ಕೃಷಿ ಉತ್ಪನ್ನಗಳ ಗುತ್ತಿಗೆ ಕೃಷಿ ಕಾಯಿದೆ, ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ ಕಾಯಿದೆ, ಕಂಪನಿ ಕಾಯಿದೆಯ ಸೆಕ್ಷನ್ 465(1)ರಲ್ಲಾದ ತಿದ್ದುಪಡಿ, ಬೀಜಗಳ ಕಾಯಿದೆ, ಅಗತ್ಯ ಸಾಮಗ್ರಿಗಳ ಕಾಯಿದೆ… ಹೀಗೆ ಸಾಲು ಸಾಲು ಬದಲಾವಣೆಗಳನ್ನು ಸಿದ್ಧಪಡಿಸಲಾಗುತ್ತಿದೆ; ಕೆಲವು ಈಗಾಗಲೇ ಪೂರ್ಣಗೊಂಡಿವೆ. ಉಳಿದವು ಅನುಷ್ಠಾನದ ಬೇರೆ ಬೇರೆ ಹಂತಗಳಲ್ಲಿವೆ. ಕೃಷಿಯು ಸಾಂವಿಧಾನಿಕವಾಗಿ ರಾಜ್ಯಗಳ ನಿರ್ವಹಣಾ ಪಟ್ಟಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ಸಹಾಯವಿಲ್ಲದೆ ಈ ನಿಟ್ಟಿನಲ್ಲಿ ಮುಂದುವರಿಯುವುದು
ಸ್ವಲ್ಪ ಕಷ್ಟವಾಗುತ್ತದೆ.

ಹಾಲಿಕೇಂದ್ರ ಸರ್ಕಾರದ ಕಾರ್ಯ ವೈಖರಿಯಲ್ಲಿ ಒಂದು ವೈಶಿಷ್ಟ್ಯ ಇದೆ. ಅದೇನೆಂದರೆ, ಸಣ್ಣಸಣ್ಣ ಬದಲಾವಣೆಗಳನ್ನು ಅಲ್ಲಲ್ಲಿ ಗುಪ್ಪೆ ಹಾಕುತ್ತಾ ಹೋಗುವುದು. ಅವೆಲ್ಲ ಬದಲಾವಣೆಗಳು ಒಂದು ಪೂರ್ಣ ಚಿತ್ರವಾಗಿ ಮೂಡುವುದು ಆ ಬದಲಾವಣೆಗಳ ಫಲಿತಾಂಶ ದೊರೆಯತೊಡಗಿದಾಗಲೇ. ಅಲ್ಲಲ್ಲಿ ಮಾಡುತ್ತಾ ಹೋಗುವ ಈ ಬದಲಾವಣೆಗಳು ಗಮನಕ್ಕೆ ಬರದೇ ಹೋಗುವುದೇ ಹೆಚ್ಚು. ಕೇಂದ್ರ ಸರ್ಕಾರದ ಕೃಷಿ ಆದಾಯ ದುಪ್ಪಟ್ಟು ಯೋಜನೆಯನ್ನು ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ನೋಡಿದರೆ ಅಲ್ಲಿ ಆಗುತ್ತಿರುವ ಈ ಎಲ್ಲ ಪುಟ್ಟಪುಟ್ಟ ಬದಲಾವಣೆಗಳು ಮತ್ತು ಆ ಬದಲಾವಣೆಗಳ ಒಟ್ಟು ಪರಿಣಾಮ ಗಮನಕ್ಕೆ ಬಂದೀತು.

ಒಟ್ಟು ಚಿತ್ರವನ್ನು ತೀರಾ ಸರಳವಾಗಿ ಕಟ್ಟಿಕೊಡಬೇಕೆಂದರೆ: ‘ರೈತ’ ಯಾರು ಎಂಬ ವ್ಯಾಖ್ಯಾನವೇ ಬದಲಾಗಲಿದೆ; ಕಾರ್ಪೊರೇಟ್ ಕಂಪನಿಗಳೂ ‘ರೈತ’ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರಲಿವೆ. ಗಾತ್ರ ಆಧರಿತ ಕೃಷಿ ಆರ್ಥಿಕತೆಗೆ ಒತ್ತು ನೀಡುವ ಹೆಸರಿನಲ್ಲಿ, ಸರ್ಕಾರದ ಕೃಪಾಶ್ರಯ ಪಡೆದ ಕಾರ್ಪೊರೇಟ್ ಕಂಪನಿಗಳು ರೈತನ ಭೂಮಿಯನ್ನು ಗುತ್ತಿಗೆಯಲ್ಲಿ ಪಡೆದು, ತಮಗೆ ಲಾಭ ತರಬಲ್ಲ ಬೆಳೆಯನ್ನು ಅಲ್ಲಿ ಬೆಳೆದು, ತಮ್ಮದೇ ಲಾಜಿಸ್ಟಿಕ್ಸ್ ಬಳಸಿ ಆ ಬೆಳೆಯನ್ನು ಸಾಗಿಸಿ, ತಮ್ಮದೇ ಉಗ್ರಾಣಗಳಲ್ಲಿ ಅದನ್ನು ಸಂಗ್ರಹಿಸಿ, ತಮ್ಮದೇ ಕಾರ್ಖಾನೆ
ಗಳಲ್ಲಿ ಅದನ್ನು ಸಂಸ್ಕರಿಸಿ, ತಮ್ಮದೇ ರಿಟೇಲ್ ಚೈನ್‌ಗಳ ಮೂಲಕ ಅವುಗಳನ್ನು ಮಾರುವ ವ್ಯವಸ್ಥೆಗೆ ಇದು ಹಾದಿ ಆಗಲಿದೆ. ಆ ಹೊತ್ತಿಗೆ ಸಾಂಪ್ರದಾಯಿಕ ರೈತ ತನ್ನ ಕೊನೆಯ ಆಸರೆಯಾಗಿ ಉಳಿದಿರುವ ತನ್ನದೇ ಭೂಮಿಯಲ್ಲಿ ಭೂರಹಿತ ಕೃಷಿ ಕಾರ್ಮಿಕನಾಗಿ ಅಥವಾ ಸಂಸ್ಕರಣಾ ಕಾರ್ಖಾನೆಗಳ ಕಾರ್ಮಿಕನಾಗಿ ದುಡಿದು, ಅಲ್ಲಿ ಸಿಕ್ಕಿದ ಸಂಬಳದಲ್ಲಿ ತನ್ನದೇ ಭೂಮಿಯಲ್ಲಿ ಬೆಳೆದ ಬೆಳೆಯನ್ನು ಮಾರುವವರು ಹೇಳಿದ ಬೆಲೆಗೆ ಖರೀದಿಸಿ ಉಣ್ಣಬೇಕಾದ ಸ್ಥಿತಿಗೆ ತಲುಪಲಿದ್ದಾನೆ.

ಲೇಖಕ: ಹಿರಿಯ ಪತ್ರಕರ್ತ, ಕೃಷಿ ಆಸಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT