ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳು ಉಚಿತ ಸಿಲಿಂಡರ್‌: ಸಚಿವ ಸಂಪುಟ ತೀರ್ಮಾನ

1 ಲಕ್ಷ ಜನರಿಗೆ ಪ್ರಯೋಜನ: ಸಂಪುಟ ಸಭೆ ತೀರ್ಮಾನ
Last Updated 21 ಏಪ್ರಿಲ್ 2020, 1:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ಯಡಿ ಮೂರು ತಿಂಗಳು ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕೋವಿಡ್–19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ವಿತರಣೆಗೆ ಕ್ರಮ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್‌ ಉಚಿತವಾಗಿ ವಿತರಿಸಲಿದೆ ಎಂದರು.

ಇದಕ್ಕಾಗಿ ಸರ್ಕಾರ ₹27.52 ಕೋಟಿ ಭರಿಸಲಿದ್ದು, ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ
ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಬೊಕ್ಕಸಕ್ಕೆ ₹137 ಕೋಟಿ ಹೊರೆಯಾಗಲಿದೆ. ಸುಮಾರು 2,800 ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಅವರು ಹೇಳಿದರು.

ಸಂಪುಟ ಸಭೆಯ ಮುಖ್ಯಾಂಶಗಳು

*ಮೈಸೂರು ಮಿನರಲ್ಸ್‌ ಲಿಮಿಟೆಡ್‌ಗೆ ಸೇರಿದ ಜಾಗವು ಕಂದಾಯ ಇಲಾಖೆಗೆ ಸೇರಿದ್ದೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂಬ ದಾವೆ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎಂಬ ತೀರ್ಪನ್ನು ಸಂಪುಟ ಸಭೆ ಅಂಗೀಕರಿಸಿದೆ.

* ಜೀವಾವಧಿ ಶಿಕ್ಷೆಗೊಳಗಾಗಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಅಥವಾ 10 ವರ್ಷ ಶಿಕ್ಷೆ ಅನುಭವಿಸಿದ ಕೈದಿಗಳಿಗೆ
ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ನಿಯಮಕ್ಕೆ ಸಚಿವ ಸಂಪುಟ ಅನುಮೋದಿಸಿದೆ.

* ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ದರೋಜಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹23.40 ಕೋಟಿ ಮಂಜೂರು.

* ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಮೂರನೇ ಹಂತದಲ್ಲಿ ಕೇರಳ– ಕರ್ನಾಟಕ ಗಡಿ ರಸ್ತೆ ಅಭಿವೃದ್ಧಿ. ಇದಕ್ಕಾಗಿ ಕೇಂದ್ರದ ಪಾಲು ₹1,274 ಕೋಟಿ ಒಳಗೊಂಡಂತೆ ₹2,729.66 ಕೋಟಿ ವೆಚ್ಚಕ್ಕೆ ಒಪ್ಪಿಗೆ.

* ಕರ್ನಾಟಕ ರೈತ ಸುರಕ್ಷಾ ಫಸಲ್‌ ಭೀಮಾ ಯೋಜನೆಯಡಿ ಬ್ಯಾಂಕುಗಳಲ್ಲಿ ರೈತರ ಫಸಲುಗಳಿಗೆ ಮಾಡಿದ ವಿಮೆಗೆ ರಾಜ್ಯ ಸರ್ಕಾರದ ಪಾಲಿನ 2016 ರ ಸಾಲಿನ ವಿಮಾ ಮೊತ್ತ ₹18.59 ಕೋಟಿ ಭರಿಸಲು ಒಪ್ಪಿಗೆ.

ಟಿಪ್ಪು ಜಯಂತಿ ಗಲಾಟೆ: ಮೊಕದ್ದಮೆ ವಾಪಸ್

ಟಿಪ್ಪು ಜಯಂತಿ, ಗಣೇಶೋತ್ಸವ ವೇಳೆ ನಡೆದ ಗಲಾಟೆಯಲ್ಲಿ ಭಾಗಿಯಾದವರ ಮೇಲೆ ಇದ್ದ ಮೊಕದ್ದಮಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ.

ನದಿ ನೀರಿನ ಹಂಚಿಕೆ ವಿರುದ್ಧದ ಹೋರಾಟ, ಟಿಪ್ಪುಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಗಲಭೆ, ಕನ್ನಡ ಪರ ಹೋರಾಟಗಳ ವೇಳೆ ದಾಖಲಾಗಿದ್ದ ಮೊಕದ್ದಮೆಗಳ ಪೈಕಿ 152 ಮೊಕದ್ದಮೆ ಹಿಂದಕ್ಕೆ ಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಹಿಂದೆ 46 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು.

ನಿಗಮ–ಮಂಡಳಿ: ಸರ್ಕಾರಿ ನೌಕರರಲ್ಲ

ನಿಗಮ–ಮಂಡಳಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಇನ್ನು ಮುಂದೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗುವುದಿಲ್ಲ. ಇನ್ನು ಮುಂದೆ ನಿಗಮ–ಮಂಡಳಿಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದಿಲ್ಲ.ಈ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT