ಗುರುವಾರ , ಏಪ್ರಿಲ್ 9, 2020
19 °C
,

ರಾಜ್ಯದಲ್ಲೂ ಜೂಜು ಕೇಂದ್ರ?: ಶ್ರೀಲಂಕಾ ಮಾದರಿಯ ಕ್ಯಾಸಿನೊಗೆ ಸರ್ಕಾರದ ಅವಕಾಶ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದೇಶಿ ಪ್ರವಾಸಿಗರ ಸೆಳೆಯುವ ಸಲುವಾಗಿ ಗೋವಾ, ಶ್ರೀಲಂಕಾ ಮಾದರಿಯ ಜೂಜು ಕೇಂದ್ರಗಳ (ಕ್ಯಾಸಿನೊ) ಆರಂಭಕ್ಕೆ ಅನುಮತಿ ನೀಡಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ರಾಜ್ಯಕ್ಕೆ ಬಂದ ಪ್ರವಾಸಿಗರು ಜೂಜಿನ ಸಲುವಾಗಿ ಗೋವಾ, ಇಲ್ಲವೆ ಶ್ರೀಲಂಕಾ ಕಡೆಗೆ ಮುಖಮಾಡುತ್ತಾರೆ. ಹಾಗಾಗಿ ವಿದೇಶಿಗರನ್ನು ಸೆಳೆದು, ಇಲಾಖೆಯ ಆದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಿದೆ.

‘ರಾಜ್ಯದ ಎಲ್ಲೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡುವುದಿಲ್ಲ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆರಂಭಿಸಲು ಅನುಮತಿ ನೀಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಜೂಜು ಕೇಂದ್ರ ತೆರೆಯಲು ಪ್ರವಾಸೋದ್ಯಮ ಇಲಾಖೆ ಬಂಡವಾಳ ತೊಡಗಿಸುವುದಿಲ್ಲ. ಸರ್ಕಾರ ನೀತಿ, ನಿಯಮಗಳನ್ನು ಮಾತ್ರ ರೂಪಿಸುತ್ತದೆ. ಆಸಕ್ತರು ಸರ್ಕಾರದಿಂದ ಅನುಮತಿ ಪಡೆದು ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

‘ಜೂಜು ಕೇಂದ್ರಗಳನ್ನು ಆರಂಭಿಸುವ ಮುನ್ನ ಜನಸಾಮಾನ್ಯರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಲಾಗುವುದು. ಇಂತಹ ಕೇಂದ್ರಗಳು ನಿರ್ಬಂಧಿತ ಸ್ಥಳವಾಗಿರುತ್ತವೆ. ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ನಂತರವೇ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ತಿಳಿಸಿದರು.

ಈ ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಜೂಜಿಗೆ ಸಾಕಷ್ಟು ಹೆಸರುವಾಸಿಯಾದ ನಗರಗಳಲ್ಲಿ ಇಂತಹ ಕೇಂದ್ರಗಳಿಗೆ ಕಲ್ಪಿಸಿರುವ ಸೌಕರ್ಯಗಳನ್ನು ನಮ್ಮಲ್ಲೂ ಒದಗಿಸಬೇಕಾಗುತ್ತದೆ. ಏನೆಲ್ಲ ಸೌಕರ್ಯ ಹಾಗೂ ಇತರ ಅವಕಾಶಗಳನ್ನು ನೀಡಬೇಕಾಗುತ್ತದೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು.

‘ಲಾಸ್ ವೆಗಾಸ್ ನಗರ ಜೂಜಿನ ಜತೆಗೆ ಪ್ರಮುಖವಾಗಿ ‘ಕ್ಯಾಸಿನೊ’ಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಮನರಂಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸಲು ಇಂತಹ ನಗರಗಳಿಂದ ನಾವು ಕಲಿಯಬೇಕಾಗಿದೆ’ ಎಂದು ಸಚಿವರು ವಿವರಿಸಿದರು.

ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಕಷ್ಟಕರ ಎಂಬುದು ಗೊತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಿ, ಪ್ರವಾಸಿಗರನ್ನು ಆಕರ್ಷಿಸುವುದು ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆಹಾರ, ಶಿಕ್ಷಣ, ನೈರ್ಮಲ್ಯ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡುತ್ತದೆ. ಆದರೆ ಪ್ರವಾಸೋದ್ಯಮ ಇಲಾಖೆಯು ಹೊಸ ಆಲೋಚನೆಗಳ ಮೂಲಕ ಆದಾಯ ಹೆಚ್ಚಿಸುವ ಪ್ರಯತ್ನ ನಡೆಸಿದೆ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)