ಗುರುವಾರ , ಏಪ್ರಿಲ್ 9, 2020
19 °C

ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್'

ಹೇಮಂತ್‌ ಕುಮಾರ್‌ ಎಸ್‌. Updated:

ಅಕ್ಷರ ಗಾತ್ರ : | |

ಸುಧಾಕರ ಚತುರ್ವೇದಿ

ಜಗತ್ತಿನ ಹಿರಿಯಜ್ಜ ಎಂದು ಕರೆಯಬಹುದಾದ ಕನ್ನಡಿಗ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀಜಿಯವರ ಆಪ್ತರಾಗಿದ್ದ, ನಾಲ್ಕು ವೇದಗಳ ಪಂಡಿತ, ಶತಾಯುಷಿ, 124 ವರ್ಷ ವಯಸ್ಸಿನ ಸುಧಾಕರ ಚತುರ್ವೇದಿ. 

ಮಹಾತ್ಮ ಗಾಂಧಿ ಅವರ 'ಪೋಸ್ಟ್ ಮನ್' ಎಂದೇ ಹೆಸರಾಗಿದ್ದವರು ಸುಧಾಕರ ಚತುರ್ವೇದಿ. ಅವರ ಬದುಕನ್ನು ಹೋರಾಟ ಮತ್ತು ಅಲೆದಾಟಗಳ ಜೋಡಣೆ ಎನ್ನಬಹುದು. 124 ವರ್ಷ ಬದುಕಿದ ಅವರ ನಿತ್ಯ ಚಟುವಟಿಕೆ ಮತ್ತು ಆಹಾರ ಪದ್ಧತಿ ಸೋಜಿಗ ಮೂಡಿಸುತ್ತದೆ. ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವಯೇ ಊಟ. ಅದುವೇ ದೀರ್ಘ ಆಯುಷ್ಯದ ಗುಟ್ಟು!

1915ರಲ್ಲಿ ಸುಧಾಕರ ಅವರು ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿ ಅವರೊಂದಿಗೆ ಭೇಟಿಯಾಗಿತ್ತು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡ ಗಾಂಧೀಜಿ ಚಕಿತರಾಗಿದ್ದರು. ಅಂದಿನಿಂದ ಬಾಪು ಜೊತೆಗಿನ ಸ್ನೇಹ ಶುರುವಾಯಿತು. ಕನ್ನಡದಲ್ಲಿ ಸಹಿ ಮಾಡಲು ಹಾಗೂ ಮಾತು ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧೀಜಿಗೆ ಕಲಿಸುವ ಪ್ರಯತ್ನ ಮಾಡಿದ್ದರಂತೆ. 

ಮಹಾತ್ಮ ಗಾಂಧಿ ಅನೇಕ ಬಾರಿ ಪತ್ರ ಬರೆಯುವಾಗ ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಕೆಲವು ಸಹ ವೈಸ್‌ರಾಯ್‌ಗಳೊಂದಿಗೆ ನಡೆಸುವ ಪತ್ರ ವ್ಯವಹಾರಗಳ ಹೊಣೆ ಇವರೇ ವಹಿಸಿದ್ದರಂತೆ. ಗಾಂಧೀಜಿ ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಪ್ರತಿಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುತಿದ್ದರಂತೆ. ಹಾಗೂ ಕನ್ನಡದಲ್ಲಿ ಅಚ್ಚಾಗುತ್ತಿದ್ದ ‘ಹರಿಜನ’ ಪತ್ರಿಕೆಗೆ ಸುಧಾಕರ ಅವರ ಸಹೋದರ ಸಂಪಾದಕರಾಗಿದ್ದರೆಂದು ಹೇಳಿಕೊಂಡಿದ್ದರು.  

* ಶತಾಯುಷಿ ಬದುಕು ಹೀಗಿತ್ತು

ಊಟದಲ್ಲಿ ಉಪ್ಪು, ಖಾರ ಎಲ್ಲವೂ ಹಿತ-ಮಿತ. ಸಾತ್ವಿಕ ಆಹಾರ ಸೇವನೆ ಮತ್ತು ಪೂರ್ಣ ಹೊಟ್ಟೆ ಭರ್ತಿಗಿಂತ ತುತ್ತು ಕಡಿಮೆ ತಿನ್ನುವ ಅಭ್ಯಾಸ. ನಿತ್ಯ ಬೆಳಿಗ್ಗೆ 3:30ಕ್ಕೆ ಎದ್ದು ಶುಚಿಯಾಗಿ ಸುಮಾರು ಎರಡು ಗಂಟೆ ಧ್ಯಾನ. ಅನಂತರ ಸ್ನಾನ, ಹೋಮ, ಹವನ, ಪೂಜೆ. 7:30–8:00 ಗಂಟೆ ಒಳಗೆ ಒಂದು ಬಾಳೆ ಹಣ್ಣು ಮತ್ತು ಒಂದು ಚೂರು ಬ್ರೆಡ್ ಸೇವನೆ.

ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳ ಓದು. ಮನೆಗೆ ಬಂದವರೊಂದಿಗೆ ಚರ್ಚೆ. 11:30ರ ಆಸುಪಾಸಿನಲ್ಲಿ ಮಿತ ಆಹಾರ. ನಂತರ ವಿಶ್ರಾಂತಿ. ಮಧ್ಯಾಹ್ನದ ವೇಳೆಗೆ ವೇದಗಳ ವಿಷಯ ಚರ್ಚಿಸಲು ಬರುವ ವಿದ್ಯಾರ್ಥಿಗಳೊಂದಿಗೆ ಮಾತುಕತೆ. ಸಂಜೆ ಮನೆಯಲ್ಲೇ ತಿರುಗಾಟ. ದಿನಕ್ಕೆ ಮೂರು ಬಾರಿ ಟೀ ಕುಡಿಯುವುದು ಅಭ್ಯಾಸವಾಗಿತ್ತು. ಸಂಜೆ ಏಳರ ವೇಳೆಗೆ ಒಂದು ಬಾಳೆ ಹಣ್ಣಿನ ಊಟ. ರಾತ್ರಿ ನಿದ್ರೆಗೆ ಜಾರುವವರೆಗೂ ಅಧ್ಯಯನ.

ಅಹಿಂಸೆಯ ವಿಚಾರ ಮಾತನಾಡುತ್ತ, ಅದನ್ನು ಪಾಲಿಸುವುದು ಕಷ್ಟ ಎಂದಿದ್ದರು. 'ನಾನು ಮುಂಬೈನಲ್ಲಿ ಗಾಂಧೀಜಿ ಜೊತೆಗಿದ್ದಾಗ, ಒಬ್ಬ ಇಂಗ್ಲಿಷ್‌ ವ್ಯಕ್ತಿ ನನ್ನ ಮೇಲೆ ಪಿಸ್ತೂಲಿನಿಂದ ಗುರಿ ಇಟ್ಟಿದ್ದ. ನಾನು ಉದ್ದನೆಯ ಕೋಲಿನಿಂದ ಅವನ ತಲೆಗೆ ಬಾರಿಸಿದ್ದೆ. ಅವನು ಓಹ್..! ಗಾಡ್...ಎಂದು ಕೆಳಕ್ಕೆ ಬಿದ್ದ' ಎಂದು ಹಿಂದಿನ ಘಟನೆ ನೆನಪಿಸಿಕೊಂಡಿದ್ದರು. ಬೆಕ್ಕು ಸಾಕುವುದು ಸುಧಾಕರ ಅವರಿಗೆ ಇಷ್ಟದ ಹವ್ಯಾಸವಾಗಿತ್ತು. ಜಗತ್ತಿನಲ್ಲಿ ಇರುವುದು ಮಾನವ ಜಾತಿ ಒಂದೇ ಎಂದು ನಂಬಿದ್ದರು. 

* ಮನಃ ಪರಿವರ್ತನೆ ಉತ್ತಮ

'ಮತ ಪರಿವರ್ತನೆಗಿಂತ, ಮನಃ ಪರಿವರ್ತನೆ ಉತ್ತಮ‘ ಹಾಗೂ ಹೆಸರು, ವೇಷ-ಭೂಷಣದಲ್ಲಿ ಬದಲಾವಣೆ ಬೇಕಾಗಿಲ್ಲ, ಯಾರಲ್ಲಿ ನಿನಗೆ ನಂಬಿಕೆಯಿದೆಯೊ ಅವರನ್ನು ನೀನು ಪೂಜಿಸು ಎಂದು ಸಾರಿದರು.  ಬ್ರಹ್ಮಚಾರಿಯಾಗಿದ್ದ ಸುಧಾಕರ ಅವರು ಹಿಂದುಳಿದ ವರ್ಗದ ಹುಡುಗನನ್ನು ದತ್ತು ತೆಗೆದುಕೊಂಡು ಆತನಿಗೆ 'ಆರ್ಯಮಿತ್ರ' ಎಂದು ಹೆಸರಿಟ್ಟು ಉತ್ತಮ ವಿದ್ಯಾಭ್ಯಾಸ ನೀಡಿ ಬೆಳೆಸಿದರು. ಆರ್ಯಮಿತ್ರ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿದರು. 

* ಬೆಂಗಳೂರಿನಲ್ಲಿ ಬಾಲ್ಯದ ದಿನಗಳು

ನಗರದ ಚಾಮರಾಜಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಮಾಧ್ವ ಬ್ರಾಹ್ಮಣ ಸಂಪ್ರದಾಯದ ಮನೆಯಲ್ಲಿ ಬೆಳೆದ ಇವರಿಗೆ ಇಬ್ಬರು ಮುಸಲ್ಮಾನ ಸ್ನೇಹಿತರಿದ್ದರು. ಒಮ್ಮೆ ಇವರ ನಡುವೆ ಜಾತಿ, ಧರ್ಮಗಳ ಪ್ರಶ್ನೆ ಬಂದಾಗ, ಸುಧಾಕರ ಆ ಸ್ನೇಹಿತರಿಗೆ ಕಚ್ಚೆ ಉಡಿಸಿ, ಜನಿವಾರ ಹಾಕಿಸಿ ಮನೆಗೆ ಕರೆಸಿ, ತನ್ನ ತಂದೆಯೊಂದಿಗೆ ಕೂರಿಸಿ ಊಟ ಬಡಿಸಿದರು. ಆದರೆ, ಎಲೆಗೆ ಉಪ್ಪಿನಕಾಯಿ ಬೀಳುತ್ತಿದ್ದಂತೆ ಅವರಲ್ಲೊಬ್ಬ ಬೆರಳಿಂದ ಅದನ್ನು ಎತ್ತಿ ನಾಲಿಗೆ ಮೇಲಿಟ್ಟು ಚಪ್ಪರಿದ. ಇದರಿಂದ ಅನುಮಾನಗೊಂಡ ತಂದೆ ಟಿ.ವಿ.ಕೃಷ್ಣರಾವ್ ಎಲ್ಲರನ್ನು ಓಡಿಸಿ ಮನೆಗೆಲ್ಲ ಗಂಜಲ ಸಿಂಪಡಿಸಿ ಶುದ್ಧಿ ಮಾಡಿದ್ದರೆಂದು ಬಾಲ್ಯದ ದಿನಗಳ ನೆನಪು ಮಾಡಿಕೊಂಡಿದ್ದರು. 

1897ರ ಏಪ್ರಿಲ್‌ 20ರಂದು ಜನಿಸಿದ ಸುಧಾಕರ ತನ್ನ ಎಂಟನೇ ವಯಸ್ಸಿನಲ್ಲೇ ಅಕ್ಕ ಪದ್ಮಾವತಿ ಬಾಯಿಯವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡಿದ್ದರು. ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿ ಮೆಚ್ಚಿನ ಓದು. ಇವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಪುಟ್ಟಮ್ಮ ಅವರ ಪಾತ್ರವೂ ಪ್ರಮುಖವಾಗಿತ್ತು. 

* ಹರಿದ್ವಾರದಲ್ಲಿ ಪದವಿ

ಸ್ವಾಮಿ ದಯಾನಂದರ ಶಿಷ್ಯ ಶ್ರದ್ಧಾನಂದರು ಹರಿದ್ವಾರದಲ್ಲಿ ಸ್ಥಾಪಿಸಿದ್ದ 'ಗುರುಕುಲ ಕಾಂಗಡಿ' ವಿಶ್ವವಿದ್ಯಾಲಯದಲ್ಲಿ ಸತತ ಆರು ವರ್ಷ ಅಭ್ಯಾಸ ಮಾಡಿ 'ವೇದಾಲಂಕಾರ' ಪದವಿ ಪಡೆದರು. ನಂತರ ಉತ್ತರ ಭಾರತದಲ್ಲಿ ಸಂಚರಿಸುತ್ತ ಸ್ವತಃ ವೇದಾಭ್ಯಾಸ ಮಾಡಿ ಎರಡೇ ವರ್ಷದಲ್ಲಿ 'ವೇದ ವಾಚಸ್ಪತಿ' ಆದರು. ಜ್ಞಾನ ಸಂಪಾದನೆ ಹೆಚ್ಚುತ್ತಿದ್ದಂತೆ ಪದವಿಗಳ ಬಗೆಗೆ ವ್ಯಾಮೋಹ ಇಲ್ಲವಾಗಿ, ಆಳ ಅಧ್ಯಯನದಲ್ಲಿ ನಿರತರಾದರು. ನಾಲ್ಕು ವೇದಗಳಲ್ಲೂ ಪರಿಣತಿ ಪಡೆದು 'ಚತುರ್ವೇದಿ' ಎಂದು ಹೆಸರಾದರು. 

ಹಲವು ವರ್ಷಗಳ ಸಂಚಾರದ ಬಳಿಕ ಬೆಂಗಳೂರಿಗೆ ವಾಪಸ್ಸಾದರು. ಮಠವೊಂದರಲ್ಲಿ ಗುರುಗಳ ಭೇಟಿಗೆಂದು ಹೋಗಿದ್ದಾಗ, ವಿಧವೆಯೊಬ್ಬಳು ಗುರುಗಳ ಕಾಲಿಗೆ ನಮಸ್ಕರಿಸುವಷ್ಟರಲ್ಲಿ, ಆ ಗುರು ‘ಥೂ...! ಮುಂಡೆ ಅನಿಷ್ಟ ಹೋಗು ಆಕಡೆ...’ ಎಂದು ಗದರುತ್ತಿದ್ದರು. ಆ ಘಟನೆ ಸುಧಾಕರ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ವಿಧವೆಯರು ಮಾತ್ರ ಏಕೆ ಧರಿದ್ರರು..? ಗಂಡಸರು ಎಷ್ಟು ಮದುವೆ ಬೇಕಾದರು ಮಾಡಿಕೊಳ್ಳಬಹುದು, ಹೆಂಸರಿಗೆ ಏಕೆ ಆ ಹಕ್ಕಿಲ್ಲ..? ಎಂಬ ಪ್ರಶ್ನೆಗಳನ್ನು ಗುರುಗಳಲ್ಲಿ ಕೇಳಿದ್ದರಂತೆ.  

ಇದರಿಂದ ಕೋಪಗೊಂಡ ಗುರು, ನಿಷ್ಠಾವಂತ ಬ್ರಾಹ್ಮಣರ ಮನೆಯಲ್ಲಿ ಇಂತಹ ಅಧಿಕ ಪ್ರಸಂಗಿ ಎಂದು ಟೀಕಿಸಿ; ಸಭೆ ಕರೆಸಿ ಬಹಿಷ್ಕಾರ ಹಾಕಿಸಲಾಯಿತು. 'ಯಾವತ್ತೋ ನಿಮ್ಮನ್ನು ನನ್ನೆದೆಯಿಂದ ಬಹಿಷ್ಕರಿಸಿದ್ದೇನೆ' ಎಂದು ಸುಧಾಕರ್‌ ಹೊರನಡೆದರಂತೆ. 

ಈ ಘಟನೆಯ ನಂತರ ಬೀದಿ-ಬೀದಿಗಳಲ್ಲಿ ತಿರುಗಿ ಜೀವನ ಸಾಗಿಸಬೇಕಾಗಿ ಬಂತು. ಸಂಬಂಧಿಗಳು ಮನೆಗೆ ಸೇರಿಸಲು ಹೆದರಿದರು. ಅಲೆದಾಟ ಇನ್ನಷ್ಟು ಗಟ್ಟಿಯಾಗಿಸಿತು. ಮತ್ತೆ ಉತ್ತರ ಭಾರತದ ಕಡೆಗೆ ಮರಳಿದರು. ಜೀವನೋಪಾಯಕ್ಕಾಗಿ ಭಾಷಣಗಳನ್ನು ಮಾಡಿದರು. ಅದರಿಂದ ₹100ರಿಂದ ₹2,000 ವರೆಗೂ ಸಂಭಾವನೆ ಸಿಗುತ್ತಿತ್ತು. ಆರ್ಥಿಕ ಸಮಸ್ಯೆ ದೂರವಾಯಿತು.

ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆ ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಭಾಷಣ ಮಾಡಿದರು. ಅಲ್ಲಿ ಶಿಷ್ಯ ವೃಂದವೇ ಸೃಷ್ಟಿಯಾಯಿತು. ಶಿಷ್ಯರಲ್ಲಿ ಯುವತಿಯೊಬ್ಬಳು ಇವರನ್ನು ಪ್ರೀತಿಸಿದ್ದಳು ಹಾಗೂ ಆಕೆಯ ತಂದೆ ತನ್ನ ಮಗಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ, ಸುಧಾಕರ ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟಿದ್ದರು. ರಾಷ್ಟ್ರ ಸ್ವತಂತ್ರವಾಗುವುದು ತಡವಾಯಿತು... ಆ ಸಮಯಕ್ಕೆ ವಯಸ್ಸು 50 ವರ್ಷ ದಾಟಿತ್ತು. 1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಸುಧಾಕರ ಬ್ರಹ್ಮಚಾರಿಯಾಗಿಯೇ ಉಳಿದರು.

ಹಲವು ಮಠಾಧೀಶರು, ಪಂಡಿತರು ಇವರಲ್ಲಿಗೆ ಬಂದು ವೇದ, ಮಂತ್ರಗಳ ಅರ್ಥವನ್ನು ತಿಳಿದುಕೊಂಡು ಹೋಗುವುದು ಕೊನೆಯ ವರೆಗೂ ಮುಂದುವರಿದಿತ್ತು. ಶ್ರದ್ಧಾನಂದರ ಆಜ್ಞೆಯಂತೆ, ನಾಲ್ಕು ವೇದಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸುಮಾರು 25 ಪಂಡಿತರಿಗೆ ಆ ಕೆಲಸವನ್ನು ಒಪ್ಪಿಸಲಾಗಿತ್ತು. ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಇವರ ಸುಮಾರು 40 ಪುಸ್ತಕಗಳು ನಾಲ್ಕು ಭಾಷೆಗಳಲ್ಲಿ ಪ್ರಕಟಗೊಂಡಿವೆ. 

* ಸ್ವಾತಂತ್ರ್ಯ ಸಮಯದಲ್ಲಿ

ಮಹಾಯುದ್ಧಗಳ ಸಮಯದಲ್ಲಿ ಮುದ್ರಣವಾಗಿದ್ದ ತಮ್ಮದೇ ಪದ್ಯಗಳನ್ನು ಈಜಿಪ್ಟ್‌ನಲ್ಲಿದ್ದ ಕನ್ನಡ ನಾಡಿನ ಸೈನಿಕರಿಗಾಗಿಯೇ 500 ಪ್ರತಿಗಳನ್ನು ತಲುಪಿಸಿದ್ದರು. ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಸುಧಾಕರ ಚತುರ್ವೇದಿ ಅವರು ಗಾಂಧೀಜಿ ಜೊತೆ ಬಂಗಾಳದಲ್ಲಿದ್ದರು. ಹಿಂದು-ಮುಸಲ್ಮಾನರ ಗಲಭೆಗಳು ಹೆಚ್ಚು ನಡೆಯುತ್ತಿದ್ದ ಜಾಗ. ಅದೇ ಸಮಯದಲ್ಲಿ ಒಬ್ಬ ಮುಸಲ್ಮಾನ ವೃದ್ಧ ಇವರನ್ನು ಆರು ತಿಂಗಳು ಜೋಪಾನ ಮಾಡಿದ್ದರು.

ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಸುಮಾರು ಹದಿಮೂರು ಬಾರಿ ಕರಾಚಿಯಿಂದ ಹಿಡಿದು ದೇಶದ ಬಹುತೇಕ ಕಡೆ ಸೆರೆಮನೆ ವಾಸ ಅನುಭವಿಸಿದ್ದರು.

* ಗಾಂಧೀಜಿ ಜೊತೆ ಸತ್ಯಾಗ್ರಹದ ಸಂದರ್ಭ

(ಸುಧಾಕರ ಅವರು ವಿವರಿಸಿದ್ದಂತೆ): ಆಗ ಉಪವಾಸದ ಬಗೆಗೆ ಚರ್ಚೆಗಳಾಗುತ್ತಿತ್ತು. ನನ್ನ ಪ್ರಕಾರ, ಬೇರೆಯವರಿಗೆ ಹಿಂಸೆಕೊಡುವುದು ಹೇಗೆ ತಪ್ಪೋ ಹಾಗೆಯೇ ತಮಗೆ ತಾವೇ ಹಿಂಸೆ ಮಾಡಿಕೊಳ್ಳುವುದೂ ತಪ್ಪು ಎಂದೆ. ಆಗ ಗಾಂಧೀಜಿ, ನೀನು ವೇದ ಸ್ಪೆಶಲಿಸ್ಟ್, ನಾನು ಉಪವಾಸದ ಸ್ಪೆಶಲಿಸ್ಟ್ ಎಂದರು. ಆದರೆ ಅವರನ್ನು ರೇಗಿಸಲು ನಾನು ಯಾವಾಗಲೂ ಅವರ ಎದುರಿಗೇ ಊಟ ಮಾಡುತ್ತಿದ್ದೆ. ನಾನು ಉಪವಾಸ ಇರುತ್ತಿರಲಿಲ್ಲ. ಗಾಂಧೀಜಿಯವರೆ ಹೇಳಿದ ಹಾಗೆ ಅವರ ಒಂದು ಹೊತ್ತಿನ ಊಟಕ್ಕೆ 1 ರೂಪಾಯಿ 75 ಪೈಸೆ ಖರ್ಚಾಗುತ್ತಿತ್ತು. ಆದರೆ, ನನ್ನ ಊಟಕ್ಕೆ ಕೇವಲ ಆರು ಆಣೆಯಾಗುತ್ತಿತ್ತು. ಇದನ್ನು ಮುಂದಿಟ್ಟು ಗಾಂಧೀಜಿಯವರಿಗೆ, ಇಷ್ಟೊಂದು ತಿನ್ನೋದು ಯಾಕೆಂದು ಕಿಚಾಯಿಸುತ್ತಿದ್ದೆ. ನಾವು ಬಹುತೇಕ ಸಮಯ ಜೊತೆಯಲ್ಲೇ ಇರುತ್ತಿದ್ದೆವು. ಆದರೆ, ನಾನು ಸೆರೆಮನೆ ಒಳಗಿದ್ದಾಗ ಅವರು ಹೊರಗೆ, ನಾನು ಹೊರಗಿದ್ದಾಗ ಅವರು ಒಳಗಿರುತ್ತಿದ್ದರು. ಅವರ ಜೊತೆಗೆ ಚರ್ಚೆಗೆ ಬರುವವರಲ್ಲಿ ಮಾತನಾಡಲು ಹೆಚ್ಚಿನ ಸಲ ನನಗೆ ಸೂಚಿಸುತ್ತಿದ್ದರು. 

ಗಾಂಧೀಜಿ ಹತ್ಯೆ ದಿನ ಬೆಳಗ್ಗಿನಿಂದ ಜೊತೆಯಲ್ಲೇ ಇದ್ದ ಸುಧಾಕರ ಚತುರ್ವೇದಿ ಸಂಜೆ ಐದು ಗಂಟೆಗೆ ತಲೆನೋವೆಂದು ಹೇಳಿ, ಬಿರ್ಲಾ ಹೌಸ್‌ನ ಹಿಂದೆಯೇ ಇದ್ದ ಸಮಾಜಕ್ಕೆ ತೆರಳಿ ಒಳಗೆ ಕಾಲಿಡುತ್ತಿದ್ದಂತೆ ಫೋನಿನ ಸದ್ದು ಕೇಳಿತು. ಆಗ ತಾನೆ ಮಾತನಾಡಿಸಿ ಬಂದಿದ್ದ ಬಾಪು ಇನ್ನಿಲ್ಲ ಎಂಬುದು ಇವರಿಗೆ ನಂಬಲಾಗಲಿಲ್ಲ. 

'ಬಾಬಾ ಜಹಾ ಬೈಟೆ, ವಹಾ ಗದ್ಧಿ ಹೇ' ಆದ್ದರಿಂದ, ಹೆಚ್ಚು ಹೆಚ್ಚು ವಿದ್ಯಾವಂತನಾದಷ್ಟು, ಅಷ್ಟೇ ವಿನಯವಂತನಾಗಬೇಕು ಅನ್ನುವುದು ಸುಧಾಕರ ಚತುರ್ವೇದಿಯವರ ಅನುಭವದ ಮಾತು. 

* ಜಲಿಯನ್‌ ವಾಲಾಬಾಗ್ ನೆನಪು

1919ರ ಏಪ್ರಿಲ್‌ 13, ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಬ್ರಿಟಿಷ್ ಅಧಿಕಾರಿ ನೀಡಿದ ಆದೇಶದಂತೆ ಗುಂಡಿನ ಮೊರೆತ. ಸರ್ಕಾರ ಪ್ರಕಾರ, ಆ ದುರ್ಘಟನೆಯಲ್ಲಿ ಸತ್ತವರು 670 ಮಂದಿ. ಆದರೆ, ಸುಧಾಕರ ಅವರು ನೆನಪಿಸಿಕೊಂಡಿದ್ದಂತೆ ಅಂತಿಮ ಕಾರ್ಯ ನೆರವೇರಿಸಿದಾಗ ಇದ್ದ ಶವಗಳ ಸಂಖ್ಯೆ ಸಾವಿರಕ್ಕೂ ಅಧಿಕ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು