ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ರಂಜನ್ ಗೊಗೊಯಿ ನೇಮಕ ಕಪ್ಪು ಚುಕ್ಕೆ: ಎಸ್.ಆರ್. ಹಿರೇಮಠ

Last Updated 20 ಮಾರ್ಚ್ 2020, 12:14 IST
ಅಕ್ಷರ ಗಾತ್ರ

ಧಾರವಾಡ: ‘ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ರಾಜ್ಯಸಭೆಗೆ ನೇಮಕ ಮಾಡಿರುವುದು ದೇಶದ ಇತಿಹಾಸದಲ್ಲೇಕಪ್ಪು ಚುಕ್ಕೆಯಾಗಲಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.

‘ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಬಹುತೇಕರು ರಂಜನ್‌ ಗೊಗೊಯಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದನ್ನು ವಿರೋಧಿಸುತ್ತಿದ್ದಾರೆ. ರಾಮ ಮಂದಿರ, ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕೊಟ್ಟಿರುವ ತೀರ್ಪುಗಳನ್ನು ವಿಶ್ಲೇಷಿಸಿದರೆ ಅವರ ವಿಚಾರಗಳು ಆಡಳಿತ ಪಕ್ಷವನ್ನು ಸಂತೋಷಪಡಿಸುವ ತೀರ್ಪುಗಳಂತಿವೆ. ಆ ಉದ್ದೇಶದಿಂದ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನೇಮಕ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ಜನಸಂಗ್ರಾಮ ಪರಿಷತ್, ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತು ಜನಾಂದೋಲನಗಳ ಮಹಾಮೈತ್ರಿ ಬಲವಾಗಿ ಖಂಡಿಸುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಕೂಡಲೇ ಗೊಗೊಯಿ ಅವರು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳಿಗೆ ಆಕ್ಷೇಪಣಾ ಮನವಿಯನ್ನು ಸಲ್ಲಿಸುವುದಾಗಿ’ ಹೇಳಿದರು.

‘ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಂಡ್ಯ ಜಿಲ್ಲೆಯ ರಂಗನತಿಟ್ಟು ಬಳಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.ಈ ರಸ್ತೆ ನಿರ್ಮಾಣ ಕೆಲಸವನ್ನು ಸ್ಥಗಿತಗೊಳಿಸಿ ಪರ್ಯಾಯ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರ ಗ್ರಾಮದಿಂದ ಅಪ್ಪೇರಗಹಳ್ಳಿ, ಬಲಮುರಿ, ಬೀಚನಕುಪ್ಪೆ, ಕೆಂಪಲಿಂಗಪುರ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ ಗ್ರಾಮಗಳ ಮೂಲಕ ಮಡಿಕೇರಿ ಹೆದ್ದಾರಿ (275)ಯನ್ನು ನೇರವಾಗಿ ಸಂಪರ್ಕಿಸುವ ಉದ್ದೇಶಿತ ರಸ್ತೆಗೆ ಭೂಸ್ವಾಧೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.ಭೂ ಸ್ವಾಧೀನಕ್ಕೆ ಗುರುತಿಸಿರುವ ಕರಿಮಂಟಿ ಮತ್ತು ಕೆಂಪಲಿಂಗಪುರ ಗ್ರಾಮಗಳು ಜಗದ್ವಿಖ್ಯಾತ ರಂಗನತಿಟ್ಟು ಪಕ್ಷಿಧಾಮದ ಭಾಗಗಳಾಗಿವೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸುವುದರಿಂದ ಪಕ್ಷಿಗಳ ಚಲನವಲನಕ್ಕೆ ಧಕ್ಕೆಯಾಗಲಿದೆ’ ಎಂದರು.

‘ಈ ರಸ್ತೆಗೆ ಫಲವತ್ತಾದ ಕೃಷಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಉತ್ತಮ ಕೃಷಿ ಭೂಮಿ ಕಳೆದಕೊಂಡಂತಾಗಲಿದೆ. ಅಲ್ಲದೇ ಈ ರಸ್ತೆಯ ಇಕ್ಕೆಲಗಳಲ್ಲಿ ಜನವಸತಿ ಹೆಚ್ಚುವುದರಿಂದ ಕಲುಷಿತ ನೀರು ಕಾವೇರಿ ನದಿಗೆ ಸೇರಿ ಕಲ್ಮಷವಾಗಲು ಕಾರಣವಾಗಲಿದೆ. ಈ ಕಾರಣದಿಂದ ಅನೇಕ ಸಂಘಟನೆಗಳು ಮತ್ತು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT