ಗೋಕರ್ಣ ದೇಗುಲ ಮಠಕ್ಕೆ ಹಸ್ತಾಂತರಿಸಲಿ; ಅಖಿಲ ಹವ್ಯಕ ಮಹಾಸಭಾ ಒತ್ತಾಯ

7

ಗೋಕರ್ಣ ದೇಗುಲ ಮಠಕ್ಕೆ ಹಸ್ತಾಂತರಿಸಲಿ; ಅಖಿಲ ಹವ್ಯಕ ಮಹಾಸಭಾ ಒತ್ತಾಯ

Published:
Updated:

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಬೇಕು’ ಎಂದು ಅಖಿಲ ಹವ್ಯಕ ಮಹಾಸಭಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ, ‘ದೇವಾಲಯದ ನಿರ್ವಹಣೆಯನ್ನು ಶ್ರೀಮಠವೇ ನಿರ್ವಹಿಸಲಿ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಇದನ್ನು ಅಪವಾಖ್ಯಾನಗೊಳಿಸಿ ಸರ್ಕಾರ ಅಕ್ರಮವಾಗಿ ವಶಕ್ಕೆ ಪಡೆದಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಸೆ.7ರಂದು ಇದ್ದ ಯಥಾಸ್ಥಿತಿಯನ್ನು ಮುಂದಿನ ಆದೇಶದವರೆಗೂ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಆದೇಶಿಸಿದೆ. ದೇವಾಲಯದ ಆಡಳಿತವು ಸೆ.19ರವರೆಗೂ ಮಠದ ನಿರ್ವಹಣೆಯಲ್ಲೇ ಇತ್ತು ಎಂಬುದು ಗಮನಾರ್ಹ. ಆದರೂ, ಕೆಲವು ವಿವೇಕಶೂನ್ಯರು ಅಪವ್ಯಾಖ್ಯಾನ ಮಾಡುತ್ತಿದ್ದಾರೆ. ಇದನ್ನು ಮಹಾಸಭಾ ಖಂಡಿಸುತ್ತದೆ’ ಎಂದು ತಿಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ಆದೇಶವನ್ನು ಯಥಾವತ್ತಾಗಿ ಪಾಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ನ್ಯಾಯಪೀಠದ ಆದೇಶಕ್ಕೆ ಅಗೌರವ ಸಲ್ಲಿಸದೇ, ಯಥೋಚಿತವಾಗಿ ಮಠಕ್ಕೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದೆ.

‘ಹೇಳಿಕೆ ಖಂಡನಾರ್ಹ’: ‘ಹಿರಿಯ ವಕೀಲ ಎಸ್.ಎಸ್‌.ನಾಗಾನಂದ ಅವರ ಹೇಳಿಕೆ ಖಂಡನೀಯ. ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಶ್ರೀಗಳ ಬಗ್ಗೆ ಅಥವಾ ಸಮಾಜದ ಬಗ್ಗೆ ಮಾತನಾಡುವಾಗ ಅವರು ಜಾಗ್ರತೆ ವಹಿಸಬೇಕು’ ಎಂದೂ ಗಿರಿಧರ ಕಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅವರ ಆಧಾರ ರಹಿತ ಹೇಳಿಕೆಗಳಿಂದ ಸಮಸ್ತ ಹವ್ಯಕ ಸಮಾಜಕ್ಕೆ ನೋವುಂಟಾಗಿದೆ. ಈ ರೀತಿಯ ಮಾತುಗಳನ್ನಾಡಿದರೆ ಅವರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !