ಗುರುವಾರ , ಜನವರಿ 21, 2021
16 °C

ವಲಸೆ ಕಾರ್ಮಿಕರ ವಿಷಯದಲ್ಲಿ ಸರ್ಕಾರದಿಂದ ಅಮಾನವೀಯ ವರ್ತನೆ: ಸಿದ್ದರಾಮಯ್ಯ ಸಿಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿದಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ಹಾಗೂ ನಮ್ಮ ರಾಜ್ಯದಿಂದ ಹೊರಗೆ ಹೋಗುವ ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕು’ ಎಂದು ಒತ್ತಾಯಿಸಿದರು.

‘ಲಾಕ್ ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಟೆಗೊಂದು, ಗಳಿಗೆಗೊಂದು ಎಂಬಂತೆ ಹೊರಡಿಸುತ್ತಿರುವ ಆದೇಶಗಳಿಂದಾಗಿ ಗೊಂದಲ ಉಂಟಾಗಿ, ಅರಾಜಕತೆ ಸೃಷ್ಟಿಯಾಗಿದೆ’ ಎಂದೂ ಅವರು ದೂರಿದರು.

‘ಬೇರೆ ಬೇರೆ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರು ಕರ್ನಾಟಕಕ್ಕೆ, ಇಲ್ಲಿರುವ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಆದರೆ, ಆ ಕಾರ್ಮಿಕರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದ ಬಳಿ ಮಾಹಿತಿಯೇ ಇಲ್ಲ. ಕಾರ್ಮಿಕರನ್ನು ಕರೆಸಿಕೊಳ್ಳಲು, ಇಲ್ಲಿಂದ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೋಮವಾರ ಮನವಿ ಸಲ್ಲಿಸಿದ್ದೇವೆ’ ಎಂದರು.

‘ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಂದ ಹೊರಟಿದ್ದ ಕಾರ್ಮಿಕರಿಗೆ ಸರ್ಕಾರ ಬಸ್ ವ್ಯವಸ್ಥೆ ಮಾಡಿ ಪ್ರಯಾಣ ದರ ನಿಗದಿ ಮಾಡಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ₹ 1 ಕೋಟಿ ಮೊತ್ತದ ಚೆಕ್ ನೀಡಲು ಮುಂದಾದಾಗ ಎಚ್ಚೆತ್ತ ಸರ್ಕಾರ ಉಚಿತ ಪ್ರಯಾಣ ಅವಕಾಶ ನೀಡಿತು’ ಎಂದರು.

‘ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡಿ ಎಂದರೆ ಪ್ರಯಾಣ ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಪಾಲು ಕೇಳುತ್ತಿದೆ. ರೈಲ್ವೆ ಇಲಾಖೆ ಕೇಂದ್ರದ ಅಧೀನದಲ್ಲಿದೆ. ಹೀಗಾಗಿ, ಆ ಸರ್ಕಾರವೇ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಬೇಕು’ ಎಂದರು.

‘ಹೊರ ದೇಶಗಳಲ್ಲಿರುವವರನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡುವ ಸರ್ಕಾರಗಳು ಕಾರ್ಮಿಕರ ವಿಚಾರದಲ್ಲಿ ಮೀನಮೇಷ ಎಣಿಸುವುದೇಕೆ. ರಾಜ್ಯದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಿಎಸ್‍ಆರ್ ನಿಧಿಯ ಮೂಲಕ ಪಿಎಂ ಕೇರ್ಸ್‌ ನಿಧಿಗೆ ₹ 1,500 ಕೋಟಿ ದೇಣಿಗೆ ನೀಡಿದ್ದಾರೆ ಆ ಹಣದಲ್ಲಿ ಕಾರ್ಮಿಕರಿಗೆ ವೆಚ್ಚ ಮಾಡಲು ಕಷ್ಟವಾದರೂ ಎಂಬ ಬಗ್ಗೆ ಸರ್ಕಾರ ಸ್ಪಷ್ಟ ಹೇಳಿಕೆ ಕೊಡಬೇಕು’ ಎಂದರು.

ಕಾರ್ಮಿಕರ ಅಲೆದಾಟ ತಪ್ಪಿಸಿ: ‘ಕಾರ್ಮಿಕರನ್ನು ರಾಜ್ಯ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಜನರು ಗಮನಿಸುತ್ತಿದ್ದಾರೆ. ಊರುಗಳಿಗೆ ಹೋಗಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್‍ನಿಂದ ಅರಮನೆ ಮೈದಾನಕ್ಕೆ ಅಲ್ಲಿಂದ ಪೀಣ್ಯಕ್ಕೆ ಅಲೆದಾಡಿಸಲಾಗುತ್ತಿದೆ. ಲಗೇಜು ಹೊತ್ತು ಮಹಿಳೆಯರು, ಮಕ್ಕಳು ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಈ ಸರ್ಕಾರಕ್ಕೆ ಹೃದಯ ಎಂಬುದು ಏನಾದರೂ ಇದೆಯೇ’ ಎಂದು ಪ್ರಶ್ನಿಸಿದರು.

‘ಅನ್ನ, ನೀರು ಇಲ್ಲದೆ, ಮಲಗಲು ಜಾಗವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ. ಕಾರ್ಮಿಕರಿಗೆ ಬಸ್ ಹತ್ತಲು ಸ್ಥಳ ನಿಗದಿ ಮಾಡಲು ಇರುವ ತೊಂದರೆಯಾದರೂ ಏನು. ವಲಸೆ ಕಾರ್ಮಿಕರ ವಿಚಾರದಲ್ಲಿ ಪರಿಸ್ಥಿತಿ ನಿಭಾಯಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಕಾರ್ಮಿಕರ ಪ್ರಯಾಣಕ್ಕೆ ₹ 3 ಕೋಟಿ ವೆಚ್ಚ ಆಗಬಹುದು. ಅದನ್ನು ಭರಿಸುವ ಶಕ್ತಿಯೂ ಇಲ್ಲವೇ. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈ‌ವರೆಗೆ ಬಂದಿರುವ ದೇಣಿಗೆ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ‘ ಎಂದು ಸಿದ್ದರಾಮಯ್ಯ ಹೇಳಿದರು.

‘ಪಿಎಂ ಕೇರ್ಸ್‌ ನಿಧಿಗೆ ಈ ವರೆಗೆ ₹ 35 ಸಾವಿರ ಕೋಟಿ ದೇಣಿಗೆ ಬಂದಿದೆ. ರೈಲಿನ ಮೂಲಕ ಕಾರ್ಮಿಕರನ್ನು ಕಳಹಿಸಲು ₹ 60 ಕೋಟಿ ವೆಚ್ಚ ಆಗಬಹುದು. ಇದು ಸರ್ಕಾರಕ್ಕೆ ದೊಡ್ಡ ಮೊತ್ತವೇನಲ್ಲ. ಇಷ್ಟಕ್ಕೂ ಇದೆಲ್ಲಾ ಜನರ ಹಣ. ಪ್ರಧಾನಿಯವರು ಇಟ್ಟುಕೊಳ್ಳಲು ಕೊಟ್ಟಿರುವುದಲ್ಲ’ ಎಂದು ವಾಗ್ದಾಳಿ ನಡೆಸಿದರು.

ಕಾರ್ಮಿಕರಿಗೆ ಜಾಬ್ ಕಾರ್ಡ್: ‘ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವವರಿಗೆ, ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಹೋಗುವವರು, ಬರುವವರಿಗೆ ಮೊದಲು ಆರೋಗ್ಯ ತಪಾಸಣೆ ಮಾಡಿಸಬೇಕು. ಅಗತ್ಯವೆನಿಸಿದರೆ ಕ್ವಾರಂಟೈನ್‍ಗೆ ಒಳಪಡಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಸ್ವಂತ ಊರುಗಳಿಗೆ ಹೋಗುವ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗದ ಕಾರ್ಡ್‍ಗಳನ್ನು ಒದಗಿಸಿ ಕೆಲಸ ಮಾಡಲು ಅವಕಾಶ ಕೊಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ಎಂಬ ನಿಯಮ ಸಡಿಲಿಸಬೇಕು. ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 45 ದಿನಗಳಿಂದ ಸಂಬಳ ಕೊಟ್ಟಿಲ್ಲ. ತಕ್ಷಣ ಅವರಿಗೆ ಭತ್ಯೆ ಬಿಡುಗಡೆ ಮಾಡಬೇಕು’ ಎಂದರು.

‘ಮೂರು ದಿನಗಳ ಹಿಂದೆ ವಿರೋಧ ಪಕ್ಷಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲು ಹಕ್ಕೊತ್ತಾಯಗಳ ಪತ್ರ ಸಿದ್ಧಪಡಿಸಿದ್ದೇವೆ. ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಪತ್ರ ಸಲ್ಲಿಸಲಾಗುವುದು. ಮುಖ್ಯಮಂತ್ರಿಯ ಸಮಯ ಕೇಳಿ ಪತ್ರ ಬರೆದಿದ್ದೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಕ್ಕೋತ್ತಾಯಗಳ ಪತ್ರ ಸಿದ್ಧಪಡಿಸಲು ನಡೆದ ಸಭೆಯಲ್ಲಿ ಜೆಡಿಎಸ್‍ನ ಎಚ್.ಡಿ. ರೇವಣ್ಣ, ಕುಪೇಂದ್ರ ರೆಡ್ಡಿ, ಸಿಪಿಐಎಂನ ಜಿ.ಎನ್. ನಾಗರಾಜ್, ಸಿಪಿಐನ ಸ್ವಾತಿ ಸುಂದರೇಶ್, ರೈತ ಸಂಘಟನೆಗಳ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಚಾಮರಸಮಾಲಿ ಪಾಟೀಲ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು