ಬುಧವಾರ, ಏಪ್ರಿಲ್ 8, 2020
19 °C

ಅಧಿವೇಶನದ ನಂತರವಷ್ಟೇ ಕೆಪಿಸಿಸಿ ಅಧ್ಯಕ್ಷರ ನೇಮಕ: ಡಿಕೆಶಿ– ಆಜಾದ್ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಶನಿವಾರ ಶಾಸಕ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ಮನೆಗೆ ತೆರಳಿ ಮಾತುಕತೆ ನಡೆಸಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತಂತೆ ಚರ್ಚಿಸಿದರು.

‘ಕರ್ನಾಟಕದಲ್ಲಿ ಎದುರಾಗಿರುವ ಪರಿಸ್ಥಿತಿ ಮಧ್ಯಪ್ರದೇಶ, ರಾಜಸ್ಥಾನ, ಅರುಣಾಚಲಪ್ರದೇಶ ಮತ್ತು ಹರಿಯಾಣಗಳಲ್ಲೂ ಉದ್ಭವಿಸಿದೆ. ಪಕ್ಷದೊಳಗಿನ ಭಿನ್ನಮತವನ್ನು ಜಾಣತನದಿಂದ ನಿವಾರಿಸಬೇಕಿದ್ದು, ಅದಕ್ಕಾಗಿ ಇನ್ನಷ್ಟು ಸಮಯ ಬೇಕು’ ಎಂದು ಗುಲಾಂ ನಬಿ ಆಜಾದ್‌ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಮಾರ್ಚ್‌ 2ರಿಂದ ವಿಧಾನಮಂಡಲ ಮತ್ತು ಸಂಸದ್‌ ಅಧಿವೇಶನ ಮತ್ತೆ ಆರಂಭವಾಗಲಿದೆ. ಹೀಗಾಗಿ ಎಲ್ಲರೂ ಕಲಾಪದಲ್ಲೇ ತೊಡಗಿಕೊಂಡಿರುತ್ತಾರೆ. ಆಗ ಬಿಕ್ಕಟ್ಟು ಬಗೆಹರಿಸುವುದು ಕಷ್ಟ. ಹೀಗಾಗಿ ಅಧಿವೇಶನಗಳು ಕೊನೆಗೊಂಡ ಬಳಿಕ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನಿಶ್ಚಿತ?: ‘ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಬಹುತೇಕ ನಿಶ್ಚಿತವಾಗಿದೆ. ಆದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣದಿಂದ ವಿರೋಧ ಇರುವುದು ಸುಳ್ಳಲ್ಲ. ಇದೇ ಪರಿಸ್ಥಿತಿ ಇತರ ನಾಲ್ಕೂ ರಾಜ್ಯಗಳಲ್ಲಿ ಇರುವುದರಿಂದ ಒಟ್ಟಿಗೇ ಬಗೆಹರಿಸಬೇಕಾಗಿದೆ’ ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ನಡೆ ನಿಗೂಢ: ಈಚೆಗೆ ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ರಾಜಕೀಯದಲ್ಲಿ ಸಂಬಂಧಗಳ ಬಗ್ಗೆ ಬಹಳ ನಾಜೂಕಾಗಿ ಮಾತನಾಡಿದ್ದರು. ಈ ಮೂಲಕ ಪಕ್ಷದ ವರಿಷ್ಠರಿಗೆ ಪ್ರಬಲ ಸಂದೇಶ ರವಾನಿಸಿದ್ದರು. ಪ್ರತಿಪಕ್ಷ ಸ್ಥಾನ ಮತ್ತು ಶಾಸಕಾಂಗ ಪಕ್ಷದ ಅಧ್ಯಕ್ಷರ ಸ್ಥಾನವನ್ನು ಬೇರೆ ಬೇರೆ ಮಾಡಬಾರದು ಎಂಬುದು ಅವರ ಒತ್ತಾಯವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮ ಆಪ್ತರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದು ಹೈಕಮಾಂಡ್‌ಗೆ ಬಿಡಿಸಲಾಗದ ಕಗ್ಗಂಟಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು