ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸಮರಕ್ಕೆ ಸಿದ್ಧ: ಅಬ್ದುಲ್‌ ಹಕೀಂ

Last Updated 1 ಜುಲೈ 2019, 16:46 IST
ಅಕ್ಷರ ಗಾತ್ರ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ ಮತ್ತು ಪಿಎಚ್‌ಡಿ ಮಾಡಲು ನಕಲಿ ಅಂಕಪಟ್ಟಿಸಲ್ಲಿಸಿರುವುದಾಗಿ ಹೇಳಿರುವ ವಿಶ್ವವಿದ್ಯಾಲಯದ ಅಧಿಕಾರಿ ವರ್ಗದ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಪತ್ರಕರ್ತ ಅಬ್ದುಲ್‌ ಹಕೀಂ ತಿಳಿಸಿದ್ದಾರೆ.

‘ಯಾವುದೇ ತಪ್ಪು ಮಾಡದಿರುವ ನನಗೆ ಶೈಕ್ಷಣಿಕ ಪದವಿಗಳಿಗಿಂತಲೂ ಘನತೆ ಮತ್ತು ಗೌರವ ಮುಖ್ಯ’ ಎಂದು ಹೇಳಿರುವ ಅವರು, ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವುದು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಪಡೆದಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪ್ರದರ್ಶಿಸಿದರು.

‘ಹಂಪಿ ವಿಶ್ವವಿದ್ಯಾಲಯದ ಎಚ್‌.ಎಂ.ಸೋಮನಾಥ ಎಂಬುವರ ಪಿತೂರಿಗೆ ಬಲಿಯಾಗಿದ್ದೇನೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಎಂ.ಎ, ಪಿಎಚ್‌ಡಿ ಮಾಡಲು ನೀಡಿದ್ದ ಶೈಕ್ಷಣಿಕ ದಾಖಲೆಗಳನ್ನು ಕಡತದಿಂದ ತೆಗೆದು ಹಾಕಿಸಿದವರು ಸೋಮನಾಥ. ಬಳಿಕ ಅವರೇ ಬುಂದೇಲ್‌ಖಂಡ ವಿಶ್ವವಿದ್ಯಾಲಯದ ನಕಲಿ ದಾಖಲೆ ಸೇರಿಸಿದ್ದಾರೆ. ನನ್ನ ಚಾರಿತ್ರ್ಯವಧೆ ಮಾಡುವ ಉದ್ದೇಶದಿಂದಲೇ ವಿಶ್ವವಿದ್ಯಾಲಯ ಕುಲಪತಿ, ಕುಲಸಚಿವರ ಮೇಲೆ ಒತ್ತಡ ತಂದು ಪದವಿ ರದ್ದು ಮಾಡಿಸಿದ್ದಾರೆ’ ಎಂದು ದೂರಿದರು.

‘ನಾನು ಸಿಂಡಿಕೇಟ್‌ ಸದಸ್ಯನಾಗಿದ್ದಾಗ ಸೋಮನಾಥ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಸಂಗ ಬಂದಿತ್ತು. ಪ್ರಕರಣದಲ್ಲಿ ಅಮಾನತ್ತಿಗೆ ಒಳಗಾಗಿ, ಜೈಲಿಗೆ ಹೋಗಬೇಕಾಯಿತು. ಆನಂತರ ನನ್ನ ವಿರುದ್ಧ ಇಲ್ಲ ಸಲ್ಲದ ದೂರುಗಳನ್ನು ನೀಡುತ್ತಾ ಬಂದಿದ್ದಾರೆ. ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರಂತರವಾಗಿ ಕುಲಪತಿಗಳು ಮತ್ತು ಕುಲಸಚಿವರ ಮೇಲೆ ಒತ್ತಡ ಹಾಕುತ್ತಾ ಬಂದಿದ್ದಾರೆ. ಆದ್ದರಿಂದ, ವಿಶ್ವವಿದ್ಯಾಲಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದೂ ಹೇಳಿದ್ದಾರೆ.

‘ಪತ್ರಕರ್ತನಾಗಿರುವ ನನಗೆ ಎಂ.ಎ ಅಥವಾ ಪಿಎಚ್‌ಡಿ ಪದವಿ ಪಡೆದು ಯಾವುದೇ ಸರ್ಕಾರಿ ನೌಕರಿ ಗಿಟ್ಟಿಸಬೇಕಾಗಿಲ್ಲ. ಅದರಿಂದ ಯಾವುದೇ ಲಾಭವೂ ಇಲ್ಲ. ಕಾನೂನು ಪದವಿ ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಡಿದ ಎಂ.ಎ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಅಸಲಿ ಎಂಬುದನ್ನು ಬೆಂಗಳೂರಿನ ಮಡಿವಾಳ ಹಿರಿಯ ಪೊಲೀಸರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ’ ಎಂದು ತಿಳಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT