ಭಾನುವಾರ, ಜನವರಿ 19, 2020
23 °C
ವಚನಾನಂದ ಸ್ವಾಮೀಜಿ ನೇತೃತ್ವದ ‘ಹರ ಜಾತ್ರೆ’ಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ

ಮೊಳಗಿದ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯದ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BSY

ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಮಂಗಳವಾರ ನಡೆದ ‘ಹರ ಜಾತ್ರೆ’ ಹಾಗೂ ‘ಬೆಳ್ಳಿ ಬೆಡಗು’ ಸಮಾರಂಭದಲ್ಲಿ ಪಂಚಮಸಾಲಿ ಸಮಾಜದವರು ಮೀಸಲಾತಿ, ರಾಜಕೀಯ ಪ್ರಾತಿನಿಧ್ಯದ ಕೂಗನ್ನು ಸರ್ಕಾರಕ್ಕೆ ತಲುಪಿಸಿದರು. ‘ಹರ ಹರ ಮಹಾದೇವ... ಜೈ ಪಂಚಮಸಾಲಿ’ ಕಹಳೆ ಮೊಳಗಿಸುವ ಮೂಲಕ ಶಕ್ತಿ ಪ್ರದರ್ಶಿಸಿದರು. 

ಹರ ಜಾತ್ರೆಯ ರೂವಾರಿಯಾದ ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ, ‘ಪಂಚಪೀಠಗಳ ಪೈಕಿ ಒಂದು ಪೀಠವನ್ನೂ ಪಂಚಮಸಾಲಿ ಪೀಠಕ್ಕೆ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೇ ಪಂಚಮಸಾಲಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಲಾಗಿದೆ. ಹೀಗಾಗಿ ಜಾತಿ ಆಧಾರದಲ್ಲಿ ಮೀಸಲಾತಿ ಕಲ್ಪಿಸುವುದಾದರೆ ಮಹಾರಾಷ್ಟ್ರ ಮಾದರಿಯಲ್ಲಿ ಪಂಚಮಸಾಲಿ ಸಮಾಜಕ್ಕೆ ಶೇ 16ರಷ್ಟು ಮೀಸಲಾತಿ ನೀಡಬೇಕು. ಇಲ್ಲವೇ ಜಾತಿ ಆಧಾರದ ಮೀಸಲಾತಿ ಕೈಬಿಟ್ಟು ಆರ್ಥಿಕ ಸ್ಥಿತಿಗತಿಯ ಆಧಾರದಲ್ಲಿ ಎಲ್ಲಾ ಸಮುದಾಯದ ಬಡವರಿಗೂ ಮೀಸಲಾತಿ ನೀಡಬೇಕು’ ಎಂದು ಪ್ರತಿಪಾದಿಸಿದರು.

‘ಪಂಚಮಸಾಲಿ, ವಾಲ್ಮೀಕಿ, ಕನಕ, ಭೋವಿ, ಮಡಿವಾಳ, ಕುಂಚಿಟಿಗ ಮಠದ ಸ್ವಾಮೀಜಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದೇವೆ. ಹರಿಹರವು ಐತಿಹಾಸಿಕ ಕ್ಷೇತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಿದ್ವಾರದಲ್ಲಿ ಗಂಗಾರತಿ ಮಾಡಿದಂತೆ, ಹರಿಹರದಲ್ಲಿ ತುಂಗಾರತಿ ಮಾಡಿಸಲು ಯಡಿಯೂರಪ್ಪ ಅವರು ಮೋದಿ ಅವರ ಮನವೊಲಿಸಬೇಕು’ ಎಂದು ಹೇಳಿದರು.

ಬೀಳಗಿ ಶಾಸಕ ಮುರುಗೇಶ ನಿರಾಣಿ, ‘ಪಂಚಮಸಾಲಿ ಸಮಾಜಕ್ಕೆ ಶೇ 16 ಮೀಸಲಾತಿ ನೀಡಬೇಕು. ನಮ್ಮ ಸಮಾಜವನ್ನು ‘2ಎ’ಗೆ ಸೇರಿಸಬೇಕು. ಪಂಚಮಸಾಲಿ ಪೀಠಕ್ಕೆ ₹ 50 ಕೋಟಿ ಅನುದಾನ ನೀಡಬೇಕು. ವೀರಶೈವ ಲಿಂಗಾಯತ ಪಂಚಮಸಾಲಿ ಪ್ರಾಧಿಕಾರ ರಚಿಸಿ ಅದಕ್ಕೆ ₹ 50 ಕೋಟಿ ಅನುದಾನ ನೀಡಬೇಕು’ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಸಂಘ ರಚಿಸಿರುವುದರ ಹಿಂದಿನ ಇತಿಹಾಸ ಮೆಲುಕುಹಾಕಿದ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರು ಅವರೂ ನಿರಾಣಿ ಅವರ ಬೇಡಿಕೆಯನ್ನೇ ಪುನರುಚ್ಚರಿಸಿದರು.

ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ, ‘ಚುನಾವಣೆ ಬಂದಾಗ ಪರಸ್ಪರ ಬಯ್ಯುವವರು ಹರ ಜಾತ್ರೆಯ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸ್ನೇಹದಿಂದ ಕುಳಿತುಕೊಂಡಿದ್ದಾರೆ. ಹರ ಜಾತ್ರೆ ಎಂದರೆ ಸತ್ಯದ ಜಾತ್ರೆ. ಹರನನ್ನು ಸ್ಥಿರಗೊಳಿಸುವುದು ಎಂದರೆ ಸತ್ಯ ಮಾರ್ಗ ಸ್ಥಿರಗೊಳಿಸುವುದಾಗಿದೆ. ವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠಾಧಿಪತಿಯಾಗಿರುವುದು ಯೋಗಾಯೋಗವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ‘ಸ್ವಾಮೀಜಿ ಎದ್ದು ನಿಂತರೆ ಅವರ ಹಿಂದೆ ಇಡೀ ಸಮಾಜ ನಿಲ್ಲುತ್ತದೆ ಎಂಬುದಕ್ಕೆ ಈ ಸಮಾವೇಶವೇ ಸಾಕ್ಷಿ. ಸಂಘಟನೆ ಬಲಪಡಿಸುವುದರ ಜೊತೆಗೆ ಸಂಸ್ಕೃತಿಗೂ ಒತ್ತು ನೀಡಬೇಕು’ ಎಂದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ. ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ಜಿ.ಪಿ. ಪಾಟೀಲ ಸ್ವಾಗತಿಸಿದರು. ದಿಂಗಾಲೇಶ್ವರ ಸ್ವಾಮೀಜಿ, ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಸ್‌.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಅರುಣಕುಮಾರ್‌, ಮಹೇಶ ಕುಮಟಳ್ಳಿ, ಅರವಿಂದ ಬೆಲ್ಲದ, ಮುಖಂಡರಾದ ಶಂಕರಗೌಡ ಪಾಟೀಲ, ಮೋಹನ ಲಿಂಬಿಕಾಯಿ, ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಅಸಹಾಯಕತೆ ತೋಡಿಕೊಂಡ ಸಿಎಂ

ವಚನಾನಂದ ಸ್ವಾಮೀಜಿ ಅವರು ಮೂರು ಸಚಿವ ಸ್ಥಾನದ ಬೇಡಿಕೆಯನ್ನು ಮುಂದಿಟ್ಟಿದ್ದರಿಂದ ಸಿಡಿಮಿಡಿಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ತಮ್ಮ ಭಾಷಣದಲ್ಲಿ ಅಸಹಾಯಕತೆಯನ್ನೂ ತೋಡಿಕೊಂಡರು.

‘ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. 17 ಶಾಸಕರ ರಾಜೀನಾಮೆಯಿಂದ ಇಂದು ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆ. ಅಧಿಕಾರಕ್ಕೆ ಬಂದಾಗ ಅತಿವೃಷ್ಟಿಯಿಂದ ಹಲವು ಗ್ರಾಮಗಳು ನಾಶವಾಗಿದ್ದು, ಸೇತುವೆಗಳು ನೆಲೆಸಮವಾಗಿವೆ. ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಮಾರ್ಚ್‌ವರೆಗೂ ನಾನು ಕಾಯಬೇಕಾಗಿದೆ. ನನಗೆ ಸ್ವಾರ್ಥ ಇಲ್ಲ. ಪಂಚಮಸಾಲಿ ಸಮಾಜ ನನ್ನ ಜೊತೆಗೆ ಇಲ್ಲದಿದ್ದರೆ ಈ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ ಎಂಬ ಅರಿವೂ ಇದೆ. ಆ ಋಣ ತೀರಿಸಬೇಕು ಎಂಬ ಕಳಕಳಿಯೂ ಇದೆ. ಎಲ್ಲಾ ಸ್ವಾಮೀಜಿಗಳನ್ನೂ ಒಂದು ಕಡೆ ಸೇರಿಸುತ್ತೇನೆ. ಪರಿಸ್ಥಿತಿಯನ್ನು ತಿಳಿದುಕೊಂಡು ಸಲಹೆ ನೀಡಿದರೆ ನಾನು ಅದಕ್ಕೆ ತಲೆ ಬಾಗುತ್ತೇನೆ. ಬಜೆಟ್‌ನಲ್ಲಿ ಪಂಚಮಸಾಲಿ ಸಮಾಜಕ್ಕೆ ನೆರವು ನೀಡುತ್ತೇನೆ’ ಎಂದು ಯಡಿಯೂರಪ್ಪ ಭಾವುಕರಾದರು.

‘ಸ್ವಾಮೀಜಿ ಅವರು ಜನರಿಂದ ಕೈ ಎತ್ತಿಸಿ ಹೇಳಬೇಕಾಗಿಲ್ಲ. ಕರೆದು ಕಿವಿಮಾತು ಹೇಳಿದರೂ ಕೇಳುತ್ತೇನೆ. 24 ಗಂಟೆ ನನ್ನ ಮನೆ ಬಾಗಿಲು ತೆರೆದಿರುತ್ತದೆ’ ಎಂದರು.

ಯಾರು ಏನೆಂದರು...?

ಕಿತ್ತೂರು ರಾಣಿ ಚನ್ನಮ್ಮ–ಸಂಗೊಳ್ಳಿ ರಾಯಣ್ಣ ನಡುವೆ ತಾಯಿ–ಮಗನ ಸಂಬಂಧವಿತ್ತು. ಅದೇ ರೀತಿ ಪಂಚಮಸಾಲಿ ಮತ್ತು ಹಾಲುಮತ ಪೀಠವೂ ಒಂದಾಗಿ ಸಾಗುತ್ತಿದೆ.

ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ

ಯಡಿಯೂರಪ್ಪ ಅವರು ಎಲ್ಲಾ ಸಮಾಜವನ್ನು ಅಪ್ಪಿಕೊಂಡು ಮುನ್ನಡೆಯುತ್ತಿದ್ದಾರೆ. ಮೀಸಲಾತಿ, ಮಠದ ಕೆಲಸವನ್ನು ಮಾಡಿಕೊಡಲು ಯತ್ನಿಸುತ್ತೇವೆ.

–ಬಸವರಾಜ ಬೊಮ್ಮಾಯಿ, ಗೃಹ ಸಚಿವ

ವಚನಾನಂದ ಸ್ವಾಮೀಜಿ ಸ್ವಧರ್ಮ ನಿಷ್ಠೆ, ಪರ ಧರ್ಮ ಸಹಿಷ್ಣುರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾಮೀಜಿ ಬೇಡಿಕೆಯನ್ನು ಮುಖ್ಯಮಂತ್ರಿ ಈಡೇರಿಸಬೇಕು.

–ಸಿ.ಸಿ. ಪಾಟೀಲ, ಸಚಿವ

ಅಂಗಾಂಗ ಪರಸ್ಪರ ಸಂಘರ್ಷಕ್ಕೆ ಇಳಿದರೆ ದೇಹ ಸರ್ವನಾಶವಾಗುತ್ತದೆ. ಕಾಶ್ಮೀರಕ್ಕೆ ನೋವಾದರೆ, ಇಡೀ ದೇಶಕ್ಕೇ ನೋವಾಗುತ್ತದೆ. ಇಂದು ಕಾಶ್ಮೀರಕ್ಕೆ ಹೊಕ್ಕಿದ ಮುಳ್ಳು ನಾಳೆ ದಾವಣಗೆರೆಗೂ ಬರಬಹುದು.

–ಸಿ.ಟಿ. ರವಿ, ಸಚಿವ

86 ಲಕ್ಷ ಜನಸಂಖ್ಯೆ ಇರುವ ಪಂಚಮಸಾಲಿ ಸಮಾಜದ ವೀರಶೈವ ಲಿಂಗಾಯತ ಸಮಾಜದ ಒಳಪಂಗಡ ಸೇರಿದರೆ 2 ಕೋಟಿ ಜಸಂಖ್ಯೆಯಾಗಲಿದೆ. ಇದು ಒಂದು ಶಕ್ತಿಯಾಗಿ ಬೆಳೆದರೆ ಯಾರನ್ನು ಬೇಕಾದರೂ ಎದುರಿಸಬಹುದು. ಇದಕ್ಕೆ ವಚನಾನಂದ ಸ್ವಾಮೀಜಿಯೇ ಮುಖ್ಯಸ್ಥರಾಗಲಿ.

–ಶಾಮನೂರು ಶಿವಶಂಕರಪ್ಪ, ವೀರೈಶ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ

ವೀರಶೈವ ಸಮಾಜ ತುಳಿತಕ್ಕೆ ಒಳಗಾಗಿದೆ. ವೀರಶೈವ ಸಮಾಜದ ಎಲ್ಲರಿಗೂ ಶೇ 16 ಮೀಸಲಾತಿ ಕಲ್ಪಿಸಬೇಕು.

–ಜಿ.ಎಂ. ಸಿದ್ದೇಶ್ವರ, ಸಂಸದ

ಯಾರು ನಮ್ಮನ್ನು ತುಳಿಯಬೇಕು ಎಂದುಕೊಂಡಿದ್ದರೋ ಅವರಿಗೆ ಪಂಚಮಸಾಲಿ ಸಮಾಜ ತಕ್ಕ ಉತ್ತರ ಕೊಟ್ಟಿದೆ. ಒಳಪಂಗಡ ಮರೆತು ಲಿಂಗಾಯತ ಸಮಾಜ ಒಂದಾಗಬೇಕು.

–ಬಿ.ಸಿ. ಪಾಟೀಲ, ಹಿರೇಕೆರೂರು ಶಾಸಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು