ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವಿಶ್ಲೇಷಣೆ | ‘ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’

ಜೆಡಿಎಸ್‌ ವರಿಷ್ಠರ ‘ಯೋಗ’ಬಲಕ್ಕೆ ನಡುಗಿದ ಕಾಂಗ್ರೆಸ್‌
Last Updated 22 ಜೂನ್ 2019, 3:14 IST
ಅಕ್ಷರ ಗಾತ್ರ

ಯೋಗ ದಿನದಂದು ತಮ್ಮ 86 ವಯಸ್ಸಿನಲ್ಲಿ ಸಾಮು ಮಾಡಿ ಪದ್ಮಾಸನ ಹಾಕಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ತಮ್ಮ ಕಳೆದ ಕಾಲದ ಆಪ್ತ ಸಖ ‘ಸಿದ್ರಾಮು’ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕಿಡಿನುಡಿಗಳ ಹಿಂದಿನ ಧ್ವನಿಯನ್ನು ಗಮನಿಸಿದರೆ ಮೈತ್ರಿ ತೊರೆದು ಹೊರನಡೆಯುವ ಅಪೇಕ್ಷೆಗಿಂತ, ತಮ್ಮ ಮಗ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಸಾಧ್ಯವಾದಷ್ಟು ಕಾಲ ಉಳಿಸಿಕೊಳ್ಳುವ ಹಂಬಲವೇ ಮುಖ್ಯವಾದಂತಿದೆ.

ರಾಜಕಾರಣದಲ್ಲಿ ಹತ್ತಾರು ಜನರನ್ನು ಬೆಳೆಸಿ, ಮಣಿಸಿರುವ ದೇವೇಗೌಡರು ಸಾಮಾನ್ಯವಾಗಿ ಬಾಯಿತಪ್ಪಿ ಮಾತನ್ನೂ ಆಡುವವರಲ್ಲ. ರಾಜಕೀಯ ಪಗಡೆಯಾಟದಲ್ಲಿ ಯಾವ ಕಾಯಿ ಉರುಳಿಸಬಹುದು, ಯಾವ ಕಾಯಿ ಮುನ್ನಡೆಸಬಹುದೆಂಬ ಎಚ್ಚರದಿಂದಲೇ ದಾಳ ಉರುಳಿಸುವುದರಲ್ಲಿ ಅವರು ನಿಷ್ಣಾತರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ಬಂದ ಬಳಿಕ ಗೌಡರ ಮಾತಿನ ವರಸೆ ಬದಲಾಗಿದೆ. ಈ ನಡೆಯನ್ನು ಅವಲೋಕಿಸಿದರೆ, ಸಿದ್ದರಾಮಯ್ಯನವರ ಸಮುದಾಯವನ್ನೇ ಪ್ರತಿನಿಧಿಸುವ, ಸದ್ಯ ಜೆಡಿಎಸ್ ಶಾಸಕರೂ ಆಗಿರುವ ಎಚ್.ವಿಶ್ವನಾಥ್‌ ಅವರ ಕುಟುಕುಗಳು ಸ್ವಯಂ ಪ್ರೇರಣೆಯಿಂದ ಬಂದದ್ದಲ್ಲ; ಅದರ ಹಿಂದೆ ಗೌಡರ ‘ಪ್ರಭಾವ’ವೂ ಇದ್ದಂತಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ವರಿಷ್ಠರು ನಂತರ ಒಂದೊಂದೇ ಷರತ್ತುಗಳನ್ನು ಒಡ್ಡುತ್ತಲೇ ಬಂದರು. ಸಚಿವ ಸ್ಥಾನ, ನಿಗಮ–ಮಂಡಳಿಗಳಲ್ಲಿ ಮೂರನೇ ಒಂದರಷ್ಟು ಜೆಡಿಎಸ್‌ಗೆ ನೀಡುವುದಾಗಿ ಮಾಡಿಕೊಂಡಿದ್ದ ಲಿಖಿತ ಒಪ್ಪಂದವನ್ನೂ ಮಿತ್ರಪಕ್ಷಗಳ ನಾಯಕರು ಮಾಡಿಕೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ಮಾತಿನ ಧಾಟಿಗಳು ಬದಲಾದವು. ಸೋಲಿಗೆ ಮೈತ್ರಿಯೇ ಕಾರಣ ಎಂಬಂತಹ ಹೇಳಿಕೆಗಳು ಹೊರಬೀಳತೊಡಗಿದವು. ಸ್ಥಾನ ಹಂಚಿಕೆ ಒಪ್ಪಂದ ಮುರಿದು, ಅವುಗಳಲ್ಲಿ ಕೆಲವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಬೇಡಿಕೆ ಮಂಡಿಸತೊಡಗಿದರು.

ಈ ಎಲ್ಲ ದೂರುಗಳನ್ನು ಗಂಟುಕಟ್ಟಿಕೊಂಡ ಗೌಡರು, ರಾಹುಲ್‌ಗಾಂಧಿ ಅವರನ್ನು ಭೇಟಿಯಾದರು. ಫಲಿತಾಂಶದಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಅಧ್ಯಕ್ಷ, ಹಿಂದೆಲ್ಲ ಗೌಡರು–ಕುಮಾರಸ್ವಾಮಿ ದೂರಿಗೆ ಕಿವಿಗೊಟ್ಟಂತೆ ಈ ಬಾರಿ ತಾಳ್ಮೆಯಿಂದ ಆಲಿಸಲಿಲ್ಲ. ಸರ್ಕಾರ ಉಳಿಸಿಕೊಳ್ಳಬೇಕಾದರೆ ಕಾಂಗ್ರೆಸ್‌ ಪ್ರತಿನಿಧಿಸುವ ಹಿರಿಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಕೊಡಬೇಕು ಎಂಬುದು ಗೌಡರ ಇರಾದೆಯಾಗಿತ್ತು. ಅದನ್ನು ಸಿದ್ದರಾಮಯ್ಯ ಒಪ್ಪಲೇ ಇಲ್ಲ. ಅದರ ಬದಲು, ಜೆಡಿಎಸ್‌ ಪಾಲಿನಲ್ಲಿ ಖಾಲಿ ಇದ್ದ ಒಂದು ಸ್ಥಾನವನ್ನು ಪಕ್ಷೇತರ ಶಾಸಕ ನಾಗೇಶ್‌(ಹಾಲಿ ಸಚಿವ),ಮತ್ತೊಂದನ್ನು ಕಾಂಗ್ರೆಸ್‌ನ ಶಾಸಕರಿಗೆ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಸಿದ್ದರಾಮಯ್ಯ ಮಂಡಿಸಿದ್ದರು. ಇದು ‘ಮೈತ್ರಿ ಧರ್ಮ’ಕ್ಕೆ ವಿರುದ್ಧವಾದುದು. ಸಿದ್ದರಾಮಯ್ಯಗೆ ಬುದ್ದಿ ಹೇಳಿ ಎಂದು ಗೌಡರು ಪಟ್ಟು ಹಿಡಿದರು. ‘ಹಿರಿಯರಾದ ನೀವೇ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಿ; ಮೈತ್ರಿಯಲ್ಲಿ ಹೊಂದಾಣಿಕೆ ಅನಿವಾರ್ಯ’ ಎಂದು ಹೇಳಿದ ರಾಹುಲ್, ಗೌಡರನ್ನು ಸಾಗ ಹಾಕಿದರು. ಇದು ಗೌಡರನ್ನು ಕೆರಳಿಸಿತು ಎಂಬುದು ಜೆಡಿಎಸ್‌ನಲ್ಲಿ ದಟ್ಟವಾಗಿ ಹರಡಿರುವ ಅಭಿಮತ.

ಇದೇ ವಾದ ಸರಣಿ ಮಂಡಿಸಿದಸಿದ್ದರಾಮಯ್ಯ, ಗೌಡರ ಬಗ್ಗೆ ದೂರಿತ್ತರು. ಆಗ 40 ನಿಮಿಷ ಆಲಿಸಿದ ರಾಹುಲ್, ತಮ್ಮ ಪಕ್ಷದ ನಾಯಕನ ಪರ ನಿಂತರು. ಇಬ್ಬರ ಮಾತುಕತೆ ಸಾರಾಂಶ ಕಿವಿಗೆ ಅಪ್ಪಳಿಸಿದ್ದೇ ತಡ, ಗೌಡರು ಯೋಗಮುದ್ರೆಯಿಂದ ಎದ್ದು ರೌದ್ರಾವತಾರಿಯಾದರು. ‘ಸಿದ್ದರಾಮಯ್ಯ ಒಡಕಿನ ಮಾತು ನಿಲ್ಲಿಸಲಿ’ ಎಂಬ ಸಲಹೆ ಇದೇ ನೆಲೆಯಿಂದ ಬಂದಿತು.

ಮತ್ತೊಂದು ಹೆಜ್ಜೆ ಮುಂದೆ ಹೋದ ಅವರು, ‘ಮಧ್ಯಂತರ ಚುನಾವಣೆ ನಿಶ್ಚಿತ’ ಎಂಬ ಮತ್ತೊಂದು ಕೈಬಾಂಬನ್ನು ಮಿತ್ರ ಪಕ್ಷದ ಶಾಸಕರ ಮೇಲೆ ಎಸೆದರು. ವರ್ಷದ ಹಿಂದೆ ನಡೆದ ಚುನಾವಣೆಗೆ ಕೋಟಿಗಟ್ಟಲೇ ದುಡ್ಡು ಸುರಿದ ಕಾಂಗ್ರೆಸ್ ಶಾಸಕರು ಚುನಾವಣೆಗೆ ಹೋಗಲು ಒಪ್ಪುವುದಿಲ್ಲ; ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕುತ್ತಾರೆ ಎಂಬುದು ಗೌಡರ ತರ್ಕ. ಪಕ್ಷದ ಹೈಕಮಾಂಡ್‌ಗೆ ‘ಚಿನ್ನದ ಮೊಟ್ಟೆಯಿಡುವ ಕೋಳಿ’ಯಂತಿರುವ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಖುದ್ದು ರಾಹುಲ್ ಒಪ್ಪುವುದಿಲ್ಲ ಎಂಬುದೂ ಗೌಡರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ನಮಗೇನೂ ಮೈತ್ರಿ ಬೇಕಿರಲಿಲ್ಲ; ಈಗಲೂ ತೊರೆಯಲು ಸಿದ್ಧ ಎಂಬ ಹೇಳಿಕೆ ಹಿಂದೆ, ಸಿದ್ದರಾಮಯ್ಯ ಹಾಗೂ ಮೈತ್ರಿ ವಿರುದ್ಧ ಪದೇ ಪದೇ ಮಾತನಾಡುತ್ತಿರುವ ‘ಕೈ’ ಶಾಸಕರ ‘ಕೈ–ಬಾಯಿ’ಗಳನ್ನು ಕಟ್ಟಿಹಾಕುವುದು ಗೌಡರ ತಂತ್ರಗಾರಿಕೆಯ ಭಾಗ ಎಂಬುದು ಕಾಂಗ್ರೆಸ್‌ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿರುವ ಮಾತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT