ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡರಕಿ: ಸಿ.ಎಂ. ಗ್ರಾಮ ವಾಸ್ತವ್ಯಕ್ಕೆ ₹ 1 ಕೋಟಿ ಖರ್ಚು

Last Updated 24 ಜೂನ್ 2019, 16:58 IST
ಅಕ್ಷರ ಗಾತ್ರ

ಕಲಬುರ್ಗಿ: ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ₹ 1 ಕೋಟಿಗೂ ಅಧಿಕ ವೆಚ್ಚವಾಗಿದ್ದು, ಮಳೆಯಿಂದಾಗಿ ರದ್ದಾದ ಕಲಬುರ್ಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದಲ್ಲಿ ₹ 50 ಲಕ್ಷ ಹಣ ನೀರು ಪಾಲಾದಂತಾಗಿದೆ.

ಮಳೆ ನಿರೋಧಕ ಶಾಮಿಯಾನವನ್ನು ಚಂಡರಕಿ ಹಾಗೂ ಹೇರೂರ (ಬಿ) ಗ್ರಾಮದಲ್ಲಿ ಒಬ್ಬರೇ ಗುತ್ತಿಗೆದಾರರು ಅಳವಡಿಸಿದ್ದರು. ಅದರ ಮೊತ್ತವೇ ತಲಾ ₹ 30ರಿಂದ ₹ 35 ಲಕ್ಷ ಆಗಿದೆ. ಚಂಡರಕಿಯಲ್ಲಿ ಸುಮಾರು 30 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದುದರಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜಿಲ್ಲಾಡಳಿತ 75 ಸಾವಿರ ನೀರಿನ ಪ್ಯಾಕೆಟ್‌ಗಳನ್ನು ತರಿಸಿತ್ತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯಲಾಗಿತ್ತು.

ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಜನತಾ ದರ್ಶನ ನಡೆಯುವ ಹಿಂದಿನ ದಿನ ರಾತ್ರಿಯಿಂದ ಮೊದಲ್ಗೊಂಡು ಕಾರ್ಯಕ್ರಮ ನಡೆದ ದಿನದ ರಾತ್ರಿಯವರೆಗೂ ಊಟದ ವ್ಯವಸ್ಥೆ ಇತ್ತು. ಅಧಿಕಾರಿಗಳು, ಗಣ್ಯರು ಹಾಗೂ ಮಾಧ್ಯಮದವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಯಾದಗಿರಿಯಿಂದ ಚಂಡರಕಿವರೆಗೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಲ್ಲಿ ಬಂದರು. ಇನ್ನು ಎರಡು ಬಸ್‌ಗಳನ್ನು ಸಾರ್ವಜನಿಕರಿಗಾಗಿ ಗುರುಮಠಕಲ್‌ನಿಂದ ಚಂಡರಕಿಯವರೆಗೆ ನಿರಂತರವಾಗಿ ಓಡಾಡಲು ನಿಯೋಜಿಸಲಾಗಿತ್ತು. ಅಲ್ಲದೇ, 15 ದಿನಗಳವರೆಗೆ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಿದ್ಧತೆಯ ಉಸ್ತುವಾರಿ ವಹಿಸಿದ್ದರು. ಅದರ ಸಾರಿಗೆ ವೆಚ್ಚ ಸೇರಿಸಿದರೆ ಅಂದಾಜು ₹ 1 ಕೋಟಿ ಆಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಷ್ಟೇ ಲೆಕ್ಕದ ಅಂದಾಜು ಮಾಡುತ್ತಿದ್ದು, ನಿಖರವಾಗಿ ಎಷ್ಟು ಖರ್ಚಾಗಿದೆ ಎಂಬುದು ಗೊತ್ತಾಗಲು ಇನ್ನೂ ಮೂರ್ನಾಲ್ಕು ದಿನ ಬೇಕಾಗುತ್ತದೆ ಎಂದು ಅವರು ಹೇಳಿದರು.

ನೀರಲ್ಲಿ ಹೋಮವಾದ ₹ 50 ಲಕ್ಷ: ಚಂಡರಕಿ ಗ್ರಾಮದಲ್ಲಿನ ಜನತಾ ದರ್ಶನಕ್ಕೆ ₹ 1 ಕೋಟಿ ಖರ್ಚು ಮಾಡಿದರೂ ಮುಖ್ಯಮಂತ್ರಿ ಅವರು ಬಂದು ಹೋದ ಸಾರ್ಥಕತೆ ಇದೆ. ಆದರೆ, ಹೇರೂರ (ಬಿ) ಗ್ರಾಮದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಶಾಮಿಯಾನ ಸಾಕಷ್ಟು ಹಾನಿಯಾಯಿತು. ನೆಲದ ಮೇಲೆ ಹಾಸಿದ್ದ 60 ಸಾವಿರ ಅಡಿ ನೆಲಹಾಸು ಮಳೆಗೆ ನೆನೆದು ಹಾಳಾಗಿದೆ. ಶಾಮಿಯಾನದ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಹಣವನ್ನು ಪಾವತಿಸಲೇಬೇಕಿದೆ. ಅಲ್ಲದೇ, ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಕ್ಕಿ, ಎಣ್ಣೆ, ರವೆ, ಅಡುಗೆ ಅನಿಲ, ತರಕಾರಿ ಎಲ್ಲವನ್ನೂ ತರಿಸಲಾಗಿತ್ತು. ಅಷ್ಟರಲ್ಲೇ ಮಳೆಯಾಗಿದ್ದರಿಂದ ಜನತಾ ದರ್ಶನ ರದ್ದಾಯಿತು.

10 ಸಾವಿರ ಜನರು ಕುಳಿತುಕೊಳ್ಳಲು ಹೇರೂರ (ಬಿ) ಗ್ರಾಮದ ಹೊರವಲಯದಲ್ಲಿರುವ ಹುಲಿಕಂಠೇಶ್ವರ ದೇವಸ್ಥಾನದ ಬಳಿ ಸುಸಜ್ಜಿತ ಶಾಮಿಯಾನ ಅಳವಡಿಸಲಾಗಿತ್ತು. ಅದರ ಪಕ್ಕದಲ್ಲೇ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು, ಟೋಕನ್‌ ನೀಡಲು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅದಕ್ಕೂ ಪ್ರತ್ಯೇಕ ಶಾಮಿಯಾನ ಹಾಕಲಾಗಿತ್ತು. ಅದಕ್ಕೂ ಮುನ್ನ ನಾಲ್ಕು ದಿನಗಳಿಂದ ಹೊಲವನ್ನು ಸಮತಟ್ಟು ಮಾಡಲಾಗಿತ್ತು. ಅದಕ್ಕಾಗಿ ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌ಗಳನ್ನು ಬಳಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಎರಡು ಕಡೆ ಊಟ ವಿತರಣೆಗೆ ಕೌಂಟರ್‌, ಶಾಮಿಯಾನ ಹಾಕಲಾಗಿತ್ತು. ಒಟ್ಟಾರೆ ಇದಕ್ಕೆ ₹ 32 ಲಕ್ಷ ವೆಚ್ಚವಾಗಲಿದೆ. ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಹೊಸದಾಗಿ ಶೌಚಾಲಯಗಳನ್ನು ₹ 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಶಾಲೆಯ ಬಳಿ ಶಾಮಿಯಾನ ಹಾಕಿಸಲಾಗಿತ್ತು. ಇದೆಲ್ಲ ಸೇರಿ ₹ 50 ಲಕ್ಷ ಮೀರಲಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

70ಕ್ಕೂ ಹೆಚ್ಚು ವಿದ್ಯುತ್‌ ಕಂಬ ಅಳವಡಿಕೆ

ರಾಯಚೂರು: ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಜೂನ್‌ 26ರಂದು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಲಿರುವ ಕಾರಣ,ಸಮರ್ಪಕ ವಿದ್ಯುತ್‌ ಪೂರೈಕೆಗೆನಾಲ್ಕು ವಿದ್ಯುತ್‌ ಪರಿವರ್ತಕ ಮತ್ತು 70ಕ್ಕೂ ಹೆಚ್ಚು ಹೊಸ ವಿದ್ಯುತ್‌ ಕಂಬ ಅಳವಡಿಸಲಾಗಿದೆ.

ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಮುಖ್ಯಮಂತ್ರಿ ವಾಸ್ತವ್ಯ ಹೂಡಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ದುರಸ್ತಿಮಾಡಿ, ಆವರಣಗೋಡೆ ನಿರ್ಮಿಸಿ ಗೇಟ್‌ ಅಳವಡಿಸಲಾಗಿದೆ. ಶಾಲೆಯಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

27ರಂದು ಹೆಲಿಕಾಪ್ಟರ್‌ನಲ್ಲಿ ಪಯಣ

ಬೀದರ್‌: ಜೂನ್‌ 27ರಂದು ಬಸವ ಕಲ್ಯಾಣ ತಾಲ್ಲೂಕು ಉಜಳಂಬಾದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮುಖ್ಯಮಂತ್ರಿ ಅವರು, ರಾಯಚೂರು ಜಿಲ್ಲೆ ಕರೇಗುಡ್ಡದಿಂದ ಬಸವ ಕಲ್ಯಾಣದವರೆಗೆ (285 ಕಿ.ಮೀ) ಹೆಲಿಕಾಪ್ಟರ್‌ನಲ್ಲಿ ಬರಲಿದ್ದಾರೆ. ಬಸವ ಕಲ್ಯಾಣದಿಂದ 22 ಕಿ.ಮೀ. ದೂರದಲ್ಲಿರುವ ಉಜಳಂಬಾಕ್ಕೆ ಬಸ್‌ ಅಥವಾ ಕಾರಿನಲ್ಲಿ ಪ್ರಯಾಣ ಬೆಳೆಸುವರು.

ಗ್ರಾಮದ ಎಲ್ಲ ಓಣಿಗಳಲ್ಲೂ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 15 ದಿನಗಳಿಂದ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿನ ಸರ್ಕಾರಿ ಕನ್ನಡ, ಮರಾಠಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ನೆಲಸಮಗೊಳಿಸಲಾಗಿದೆ. 8 ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ರೈತ ಸಂತೆಗೆ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ಮಂಜೂರು ಮಾಡಲಾಗಿದೆ.

ಯಡಿಯೂರಪ್ಪ ಏಕೆ ಅಭಿವೃದ್ಧಿ ಮುಂದುವರಿಸಲಿಲ್ಲ?

ಬೆಂಗಳೂರು: ‘ಗ್ರಾಮ ವಾಸ್ತವ್ಯದ ಬಳಿಕ ನಾನು ಆರಂಭಿಸಿದ್ದ ಅಭಿವೃದ್ಧಿ ಯೋಜನೆಗಳನ್ನು ಬಳಿಕ ಸರ್ಕಾರ ರಚಿಸಿದ ಯಡಿಯೂರಪ್ಪ ಅವರು ಮುಂದುವರಿಸಬೇಕಿತ್ತು’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ಮತ್ತೆ ಗ್ರಾಮ ವಾಸ್ತವ್ಯ ಡ್ರಾಮಾ!’ ಎಂಬ ಕಿರುಹೊತ್ತಗೆ ಬಿಡುಗಡೆಗೊಳಿಸಿ 10 ಪ್ರಶ್ನೆಗಳನ್ನು ಮುಂದಿಟ್ಟ ಯಡಿಯೂರಪ್ಪ ಅವರಿಗೆ ಕೆಲವೇ ಗಂಟೆಗಳಲ್ಲಿ ಲಿಖಿತವಾಗಿಯೇ ಉತ್ತರ ನೀಡಿದ ಅವರು, ‘ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ. ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು, ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆಗಳನ್ನು ರೂಪಿಸುವುದು ಆಗಿತ್ತು. ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದವು ಗ್ರಾಮ ವಾಸ್ತವ್ಯದ ಪರಿಣಾಮಗಳು. ಚಾಲನೆ ನೀಡಲಾಗಿದ್ದ ಅಭಿವೃದ್ಧಿ ಕಾರ್ಯಗಳನ್ನು ಬಳಿಕ ಬಂದ ಸರ್ಕಾರಗಳು ಮುಂದುರಿಸಬೇಕಿತ್ತು’ ಎಂದಿದ್ದಾರೆ.

‘ಗ್ರಾಮ ವಾಸ್ತವ್ಯ ವ್ಯರ್ಥ, ಅದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಪ್ರಚಾರದ ಗಿಮಿಕ್ ಅಲ್ಲ ಎಂದೂ ಹೇಳಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆ ಹಾಸಿಗೆ, ದಿಂಬು ಬಿಟ್ಟು ಬೇರೆ ಯಾವುದಕ್ಕೂ ಖರ್ಚು ಮಾಡುತ್ತಿಲ್ಲ. ‘ಪ್ರತಿ ಗ್ರಾಮ ವಾಸ್ತವ್ಯಕ್ಕೆ ₹ 1 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬುದಾಗಿ ಬಿ.ಎಸ್‌.ಯಡಿಯೂರಪ್ಪ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂಬ ಕಾರಣಕ್ಕಾಗಿ ಗ್ರಾಮದ ಸುತ್ತಮುತ್ತ ಅಥವಾ ಆಯಾ ಜಿಲ್ಲೆಯಲ್ಲಿ ಸರ್ಕಾರದ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಮ್ಮಿಕೊಳ್ಳುತ್ತಾರೆ. ಅದಕ್ಕಾಗಿ ಖರ್ಚು ಮಾಡಲಾಗುತ್ತದೆ. ಅಲ್ಲಿ ಮಾಡುವ ಖರ್ಚು ಗ್ರಾಮವಾಸ್ತವ್ಯದಲ್ಲ’ ಎಂದೂ ಹೇಳಿದ್ದಾರೆ.

‘ಈ ಹಿಂದೆ ಮಾಡಿದ ಗ್ರಾಮ ವಾಸ್ತವ್ಯವಾಗಲಿ, ಈಗ ಮಾಡುತ್ತಿರುವ ಗ್ರಾಮವಾಸ್ತವ್ಯದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು, ಆಡಂಬರ ಆಗಬಾರದು ಎಂಬ ಕಾರಣಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ’ ಎಂದೂ ಕುಮಾರಸ್ವಾಮಿ ತಿಳಿಸಿದ್ದಾರೆ.

‘ಬರ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮಾಡಿ ಜಿಲ್ಲೆಗಳ ಬರ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಗುರಿ ಮೀರಿದ ಸಾಧನೆ ಮಾಡಿ, ಜನರಿಗೆ ಉದ್ಯೋಗ ಒದಗಿಸಲಾಗಿದೆ. ರೈತರ ಸಾಲಮನ್ನಾದ ಪರಿಷ್ಕೃತ ಅಂದಾಜು ₹ 16 ಸಾವಿರ ಕೋಟಿ. ಈಗಾಗಲೇ 23 ಲಕ್ಷ ರೈತರ ₹ 12,830 ಕೋಟಿಯನ್ನು ರೈತರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT