ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿದ್ದುಣ್ಣೊ ಮಹರಾಯ: ಫಡಣವೀಸ್‌ ರಾಜೀನಾಮೆಗೆ ಕುಮಾರಸ್ವಾಮಿ ವ್ಯಂಗ್ಯ

Last Updated 26 ನವೆಂಬರ್ 2019, 14:01 IST
ಅಕ್ಷರ ಗಾತ್ರ

ಬೆಂಗಳೂರು:ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ಮೂರೇ ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿ ಬಂದ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಮಾಡಿದ್ದುಣ್ಣೊ ಮಹರಾಯ ಎಂಬುದು ಲೋಕ ರೂಢಿ. ಮಾಡಿದ್ದರ ಪ್ರತಿಫಲವನ್ನು ಫಡಣವೀಸ್ ಉಣ್ಣುತ್ತಿದ್ದಾರೆ. (ಬಿಎಸ್‌ವೈ ಕೂಡ ಉಣ್ಣುತ್ತಾರೆ) ಕಾಲಚಕ್ರಕ್ಕೆ ಸಿಲುಕಿ ನಲುಗಿದ್ದಾರೆ. ಅಧಿಕಾರದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಾಹಪಿ, ಸರ್ಕಾರಗಳನ್ನು ಕೆಡವುವುದು, ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ’ ಎಂದು ಉಲ್ಲೇಖಿಸಿದ್ದಾರೆ.

‘ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ನನಗೆ ಖುಷಿ ಕೊಡಬೇಕಿತ್ತು. ಯಾಕೆಂದರೆ ನನ್ನ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ? ಅನರ್ಹರಿಗೆ ಆತಿಥ್ಯ ಕೊಟ್ಟವರೂ ಅವರೇ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬುಧವಾರ ಸಂಜೆ 5.30ರ ಒಳಗೆ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಫಡಣವೀಸ್ ಸಹ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT