ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೃಷ್ಟಿಸಿದ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ: ಎಚ್‌ಡಿಕೆ

Last Updated 13 ಮೇ 2020, 15:25 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌–19 ಪಿಡುಗಿನಿಂದ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ₹ 20 ಲಕ್ಷ ಕೋಟಿಮೊತ್ತದ ಪ್ಯಾಕೇಜ್‌ ಘೋಷಿಸಿದ್ದಾರೆ.ಆದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು,ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಿಜೆಪಿಯು ರಾಜಕೀಯವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿ ಸರಣಿ ಟ್ವೀಟ್‌ಗಳನ್ನು‌ ಮಾಡಿದ್ದಾರೆ.

‘ಭಾರತ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದೂ, ದೇಶ #AtmanirbharBharat ಆಗಬೇಕು ಎಂದು ಮೋದಿ ನಿನ್ನೆಯ ಭಾಷಣದಲ್ಲಿ ಹೇಳಿದ್ದರು. ಅದರಂತೇ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿಸಿಕೊಂಡಿದೆ. #AtmanirbharBharat ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ ₹ 20 ಲಕ್ಷ ಕೋಟಿ ಪ್ಯಾಕೇಜ್ ರೂಪಿಸಿರುವುದು ನಿರ್ಮಲಾಸೀತಾರಮನ್‌ ಅವರ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಆದರೆ ಪ್ಯಾಕೇಜ್‌ನಲ್ಲಿತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ‘ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ ₹20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಅರಗಿನ ಅರಮನೆ ಕಟ್ಟಿರುವ ಕೇಂದ್ರ ಸರ್ಕಾರ ಆ ಮೂಲಕ ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಈ ಘೋಷಣೆಯ ಮೂಲಕ ಅಪಾರ ಪ್ರಮಾಣದ ಪ್ರಚಾರ ಪಡೆದಿರುವ ಬಿಜೆಪಿ, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿರುವುದು ಸ್ಪಷ್ಟ’ ಎಂದು ಕಿಡಿಕಾರಿದ್ದಾರೆ.

‘ಕೊರೊನಾವೈರಸ್‌ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ, ತನಿಗಿಷ್ಟ ಬಂದ ಘೋಷಣೆಗಳನ್ನು ಕೂಗಿ ₹ 20 ಲಕ್ಷ ಕೋಟಿ ಕೊಟ್ಟೆವೆಂದು ಕೇಂದ್ರ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ’ ಎಂದಿದ್ದಾರೆ.

‘₹ 20 ಲಕ್ಷ ಕೋಟಿ ಪ್ಯಾಕೇಜ್ ಎಂಬುದು ಲಿಕ್ವಿಡಿಟಿ(ನಗದು) ಆಧಾರಿತವಲ್ಲ. ಇದರಿಂದ ಜನರಿಗೆ ಕನಿಷ್ಠ ಸಹಾಯವೂ ಆಗದು. ಇದು ಕಾಲ್ಪನಿಕ ಘೋಷಣೆಗಳು ಮಾತ್ರ. ಇದರಲ್ಲಿರುವುದು ಉದ್ಯಮ, ಉದ್ಯಮಿಗಳಷ್ಟೇ. ‘‘#AtmanirbharBharat ಎಂಬುದು ನಿಮಗೆ ನೀವೇ ಆಗಬೇಕು. ನಮ್ಮಿಂದ ನಿಮಗೆ ಚಿಕ್ಕಾಸೂ ದೊರಕದು’’ ಎಂದು ಜನರಿಗೆ ಕೇಂದ್ರ ನೀಡಿದ ಸ್ಪಷ್ಟನೆ’ ಎಂದೂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT