ಶನಿವಾರ, ಜುಲೈ 31, 2021
27 °C
ಸಮುದ್ರದ ಉಬ್ಬರ ಹೆಚ್ಚಳ

ದಿಕ್ಕು ಬದಲಿಸಿದ ‘ನಿಸರ್ಗ’: ಕಾರವಾರ, ಕೊಡಗಿನಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಕಾರವಾರ, ಕೊಡಗು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಕೆಲವಡೆ ಹದವಾದ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಜೋರು ಮಳೆಯಾಗಿದೆ.

‘ನಿಸರ್ಗ’ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಚಂಡಮಾರುತವು ಸಮುದ್ರದಲ್ಲಿ ಉತ್ತರಕ್ಕೆ ಚಲಿಸಿದ್ದು, ಜಿಲ್ಲೆಯಲ್ಲಿ ಭಾರಿ ಮಳೆ ಅಥವಾ ಗಾಳಿಯಿಂದ ಹಾನಿ ಸಂಭವಿಸಿಲ್ಲ.

ಕಾರವಾರದಲ್ಲಿ ಬುಧವಾರ ಬೆಳಿಗ್ಗೆ 9ಕ್ಕೆ ಧಾರಾಕಾರ ಮಳೆ ಆರಂಭವಾಗಿ ಸುಮಾರು ಮೂರು ತಾಸು ಎಡೆಬಿಡದೇ ಸುರಿಯಿತು. ‘ನಿಸರ್ಗ’ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಮೀನುಗಾರರ ರಕ್ಷಣೆ: ಗೋವಾದ ವಾಸ್ಕೊ ಬಳಿ ಚಂಡಮಾರುತಕ್ಕೆ ಸಿಲುಕಿ ಮುಳುಗುವ ಹಂತದಲ್ಲಿದ್ದ ದೋಣಿಯಿಂದ ಏಳು ಮಂದಿಯನ್ನು ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ಮಂಗಳವಾರ ರಕ್ಷಿಸಿದ್ದಾರೆ.

ಉಡುಪಿ ಜಿಲ್ಲೆ ಮಲ್ಪೆಯ ವಡಭಾಂಡೇಶ್ವರದ ದೀಪಿಕಾ ಎಂಬುವರಿಗೆ ಸೇರಿದ ‘ಶ್ರೀದುರ್ಗಾ ಹನುಮ’ ಹೆಸರಿನ ದೋಣಿ ಇದಾಗಿದೆ.

ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಮಳೆ ಆಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು ಹಾಗೂ ತಲಕಾವೇರಿಯಲ್ಲಿ ಗಾಳಿಸಹಿತ ಬಿರುಸಿನ ಮಳೆಯಾಗಿದೆ. ಅಪಾಯಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಪ್ರದೇಶಗಳ ಜನರಿಗೆ ನಗರಸಭೆ ನೋಟಿಸ್‌ ನೀಡಲು ಮುಂದಾಗಿದ್ದು, ನೋಟಿಸ್‌ ತಲುಪುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಕೆಲವರು ಬೇರೆಡೆಗೆ ತೆರಳಲು ತೀರ್ಮಾನಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ಆನಂದಪುರದಲ್ಲಿ ಜೋರು ಮಳೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಉತ್ತಮ ಮಳೆ ಸುರಿಯಿತು.

ಮನೆ ಹಸ್ತಾಂತರ ಇಂದು
ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾಗಿದ್ದವರಿಗೆ ಎರಡು ವರ್ಷಗಳ ನಂತರ ಸೂರು ಸಿಗುತ್ತಿದೆ.  ಜೂನ್‌ 4ರಂದು 463 ಮನೆಗಳನ್ನು ಹಸ್ತಾಂತರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು