ಬುಧವಾರ, ಮಾರ್ಚ್ 3, 2021
22 °C
ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬದುಕು

ಕೊಡಗಿನಲ್ಲಿ ಭೂ ಕುಸಿತ: ಏಳು ಮಂದಿ ಸಾವು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ವರ್ಷದ ಹಿಂದಷ್ಟೇ ಮಹಾಮಳೆ, ಭೂಕುಸಿತ ಹಾಗೂ ಪ್ರವಾಹದ ಸಂಕಷ್ಟಕ್ಕೀಡಾಗಿದ್ದ ಕೊಡಗು ಜಿಲ್ಲೆಯ ಜನರ ಬದುಕು, ಮತ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ. ಎಲ್ಲಿ ನೋಡಿದರೂ ನೀರೋ ನೀರು. ಕಾವೇರಿ ನಾಡಿನ ಜನರು ಮತ್ತೆ ಅತಿವೃಷ್ಟಿ ಹೊಡೆತಕ್ಕೆ ಕಂಗಾಲಾಗಿದ್ದಾರೆ.

ಕಾವೇರಿ, ಲಕ್ಷ್ಮಣತೀರ್ಥ, ರಾಮತೀರ್ಥ, ಕೀರೆಹೊಳೆಯ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿ ಹೋಗುತ್ತಿವೆ. ನಾಲ್ಕೈದು ದಿನಗಳ ಹಿಂದೆ ಮುಳುಗಡೆಯಾಗಿದ್ದ ಮನೆಗಳೂ ಈಗ ಕಾಣಿಸುತ್ತಿಲ್ಲ.

ಭಾಗಮಂಡಲ, ಬಲಮುರಿ, ನಾಪೋಕ್ಲು, ಮೂರ್ನಾಡು, ಬೇತ್ರಿಯಲ್ಲಿ  ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ತನ್ನ ವ್ಯಾಪ್ತಿಯನ್ನು ಕಾವೇರಿ ನದಿ ಹಿಗ್ಗಿಸಿಕೊಂಡಿದೆ. ಕಾಫಿ ತೋಟ, ಗದ್ದೆ, ನದಿ, ಗ್ರಾಮಗಳ ಗುರುತೇ ಸಿಗುತ್ತಿಲ್ಲ. ಪ್ರವಾಹಪೀಡಿತ ಗ್ರಾಮಗಳ ಸಂಖ್ಯೆ ಏರಿಕೆ ಆಗುತ್ತಿದೆ. 58 ಗ್ರಾಮಗಳು, ನಾಲ್ಕು ಪಟ್ಟಣಗಳು ನೀರಿನಲ್ಲಿ ಮುಳುಗಿವೆ. ಜಾನುವಾರು, ಸಾಕು ಪ್ರಾಣಿಗಳ ನೋವು ಹೇಳದಾಗಿದೆ. ಕುಸಿದ ಮನೆಗಳ ಸಂಖ್ಯೆಗೆ ಸದ್ಯಕ್ಕೆ ಲೆಕ್ಕವಿಲ್ಲ.

ಹೆಚ್ಚುವರಿ ರಕ್ಷಣಾ ಪಡೆ: ನದಿಗಳ ಆರ್ಭಟಕ್ಕೆ ಒಂದು ಬದಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಗೆ ಹೆಚ್ಚುವರಿಯಾಗಿ ಎರಡು ಎನ್‌ಡಿಆರ್‌ಎಫ್‌ ತುಕಡಿಗಳು ಬಂದಿವೆ. ಪ್ರವಾಹದಿಂದ ತಪ್ಪಿಸಿಕೊಳ್ಳಲು ಗ್ರಾಮ ತೊರೆದ ಜನರು ಬೆಟ್ಟವನ್ನೇರಿದ್ದಾರೆ. ವಿದ್ಯುತ್‌, ನೆಟ್‌ವರ್ಕ್‌ ಇಲ್ಲದೆ ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ರಕ್ಷಣಾ ಸಿಬ್ಬಂದಿಯೇ ನದಿಯನ್ನು ದಾಟಿ ಬೆಟ್ಟದಲ್ಲಿ ಹುಡುಕಿ ಅವರನ್ನು ಪರಿಹಾರ ಕೇಂದ್ರಕ್ಕೆ ಕರೆ ತರುತ್ತಿದ್ದಾರೆ. ಹೆಲಿಕಾಪ್ಟರ್‌ ಕಾರ್ಯಾಚರಣೆಗೆ ಹವಾಮಾನ ಸೂಕ್ತವಾಗಿಲ್ಲ. 50ಕ್ಕೂ ಹೆಚ್ಚು ಅತ್ಯಾಧುನಿಕ ರ್‍ಯಾಫ್ಟರ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಬ್ರಹ್ಮಗಿರಿ, ಕಲ್ಲಿನಿಂದ ಆವೃತವಾದ ಬೆಟ್ಟ ಪ್ರದೇಶ. ಅಲ್ಲಿ ಅಪಾಯವಿಲ್ಲ ಎಂದು ಭಾವಿಸಲಾಗಿತ್ತು. ಮಳೆಯ ರಭಸಕ್ಕೆ ಆ ಬೆಟ್ಟಗಳೂ ಕುಸಿಯುತ್ತಿವೆ. ಇದೇ ಬೆಟ್ಟದ ವ್ಯಾಪ್ತಿಯ ಕೋರಂಗಾಲದಲ್ಲಿ ಶುಕ್ರವಾರ ನಾಲ್ವರು ಮೃತಪಟ್ಟಿದ್ದಾರೆ.

2018ರ ಆಗಸ್ಟ್‌ನ ಪರಿಸ್ಥಿತಿಯೇ ಮತ್ತೆ ಮರುಕಳಿಸಿದೆ. ಅಂದು ಉತ್ತರ ಕೊಡಗು ಭೂಕುಸಿತಕ್ಕೆ ಸಿಲುಕಿದ್ದರೆ, ಇಂದು ದಕ್ಷಿಣ ಕೊಡಗು ಪ್ರವಾಹದಿಂದ ತತ್ತರಿಸಿದೆ. ಕುಶಾಲನಗರದ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಕಾಫಿ ಬೆಳೆಗಾರರು, ಕಾರ್ಮಿಕರು ಒಂದಾಗಿ ಪರಿಹಾರ ಕೇಂದ್ರ ಸೇರಿದ್ದಾರೆ. 25 ಪರಿಹಾರ ಕೇಂದ್ರಗಳಲ್ಲಿ 2,136 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಅದರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ದ್ವೀಪವಾದ ಮಡಿಕೇರಿ
ಪ್ರವಾಹದಿಂದ ಮಡಿಕೇರಿಯ ಪ್ರಮುಖ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಮಡಿಕೇರಿ–ಕುಶಾಲನಗರ, ಕುಶಾಲನಗರ– ಅರಕಲಗೂಡು ವಾಹನ ಸಂಚಾರ ಬಂದ್‌ ಆಗಿದೆ. ಮಡಿಕೇರಿಗೆ ವಾಹನಗಳು ಪರ್ಯಾಯ ಮಾರ್ಗದಲ್ಲಿ ಬರುತ್ತಿವೆ. ಬೇತ್ರಿ, ಕದನೂರು ಸೇರಿ ಹಲವು ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿವೆ. 

ಇಂದೂ ರಜೆ
ಕೊಡಗು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಶನಿವಾರವೂ ರಜೆ ನೀಡಲಾಗಿದೆ.

ರಕ್ಷಣೆಗೆ ಹೋದವರೇ ಶವವಾದರು
ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತದಿಂದ ಮೃತಪಟ್ಟವರ ಪೈಕಿ, ಮೂವರು ರಕ್ಷಣೆಗೆ ಧಾವಿಸಿದವರು.

ಮನೆಯ ಮಾಲೀಕ ಯಶವಂತ್‌, ರಕ್ಷಣೆಗೆ ತೆರಳಿದ್ದ ಬಾಲಕೃಷ್ಣ, ಯಮುನಾ, ಉದಯ್‌ ಮೃತಪಟ್ಟವರು. ಮನೆಯಲ್ಲಿದ್ದ ದಿಗಂತ್‌, ಶಶಿಕಲಾ ಪಾರಾಗಿದ್ದಾರೆ.

ಮನೆಯವರನ್ನು, ಸುರಕ್ಷಿತ ಪ್ರದೇಶಕ್ಕೆ ಬರುವಂತೆ ಮನವೊಲಿಸಲು ತೆರಳಿದಾಗಲೇ ಭೂಕುಸಿತ ಸಂಭವಿಸಿದೆ. ರಕ್ಷಣೆಗೆ ತೆರಳಿದ್ದವರಲ್ಲಿ ಮತ್ತೊಬ್ಬರು ಕಣ್ಮರೆಯಾಗಿದ್ದಾರೆ.

ದೇವರಿಗೂ ಜಲ ದಿಗ್ಬಂಧನ
ಹಲವು ವರ್ಷಗಳ ಬಳಿಕ ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರನಿಗೂ ಪ್ರವಾಹದ ಬಿಸಿ ತಟ್ಟಿದೆ. ಪ್ರವಾಹದ ನೀರು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದೆ.

ಗೋಡೆ ಕುಸಿದು ವ್ಯಕ್ತಿ ಸಾವು

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ವೀರನಹೊಸಹಳ್ಳಿ ಹಾಡಿಯಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಎಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲ್ಲೂಕುಗಳು ಭಾಗಶಃ ಮುಳುಗಿವೆ. ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿದೆ. ನಂಜನಗೂಡಿನ ಮಲ್ಲನಮೂಲೆ ಮಠ, ಪರಶುರಾಮ ದೇವಸ್ಥಾನ ಸೇರಿದಂತೆ ಅನೇಕ ದೇಗುಲಗಳು ನೀರಿನಲ್ಲಿ ಮುಳುಗಿವೆ. 12 ಗ್ರಾಮಗಳು, 16 ಸೇತುವೆಗಳು ಜಲಾವೃತಗೊಂಡಿವೆ. 432 ಮನೆಗಳು ಕುಸಿದಿವೆ. 8 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 480 ಮಂದಿಗೆ ಆಶ್ರಯ ನೀಡಲಾಗಿದೆ. 201 ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಕಾಡಂಚಿನ ಕೆರೆಗಳು ಕೋಡಿ ಬಿದ್ದಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.