ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿದ ನದಿ, ಸಂಕಷ್ಟದಲ್ಲಿ ಜನ–ಜಾನುವಾರು

ಹೆಲಿಕಾಪ್ಟರ್‌ನಿಂದ ಆರು ಜನರ ರಕ್ಷಣೆ l 41 ಹಸುಗಳು ಸಾವು
Last Updated 10 ಆಗಸ್ಟ್ 2019, 19:48 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ರೌದ್ರಾವತಾರ ತಾಳಿದ್ದು, ಬಂಟ್ವಾಳ ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತಗೊಂಡಿವೆ. ಕುಮಾರಧಾರಾ, ಫಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.

ಪ್ರವಾಹದಿಂದಾಗಿ ಬಂಟ್ವಾಳ ಕ್ರಾಸ್‌ನ ಮನೆಯಲ್ಲಿ ಸಿಲುಕಿದ್ದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹಾಗೂ ಅವರ ಕುಟುಂಬದವರನ್ನು ಬೋಟ್‌ ಮೂಲಕ ಸ್ಥಳಾಂತರ ಮಾಡಲಾಯಿತು.

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಗರ್ಭಿಣಿಯರು, ಇಬ್ಬರು ಮಕ್ಕಳು ಸೇರಿದಂತೆ 85 ಜನರನ್ನು ಎನ್‌ಡಿಆರ್‌ಎಫ್‌ ತಂಡ ರಕ್ಷಿಸಿದೆ. ಈ ಪೈಕಿ ಒಬ್ಬ ಗರ್ಭಿಣಿಗೆ ಭಾನುವಾರ ಹೆರಿಗೆ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಫಲ್ಗುಣಿ ನದಿಯಲ್ಲೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ತೀರದ ಎಲ್ಲ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಫಲ್ಗುಣಿ ನದಿಯಲ್ಲಿನ ಪ್ರವಾಹದಿಂದಾಗಿ ಗುರುಪುರ, ಉಳಾಯಿಬೆಟ್ಟು, ದೋಣಿಂಜೆ, ಬೈಲುಪೇಟೆ, ಅದ್ಯಪಾಡಿ ಕುದ್ರು, ನೂಯಿ ಕೆಳಗಿನಕೆರೆ, ಅಡ್ಡೂರು, ಪೊಳಲಿ, ಮಳಲಿ, ಪೆರ್ಮಂಕಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಕುಮಾರಧಾರಾ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುಳ್ಯ ತಾಲ್ಲೂಕಿನ ಹಲವು ಗ್ರಾಮಗಳು ಶನಿವಾರವೂ ಜಲಾವೃತಗೊಂಡಿದ್ದವು. ಪ್ರವಾಹಕ್ಕೆ ಸಿಲುಕಿದ್ದ ಬಂಟ್ವಾಳ ತಾಲ್ಲೂಕಿನ 200 ಹಾಗೂ ಬೆಳ್ತಂಗಡಿ ತಾಲ್ಲೂಕಿನ 300 ಜನರು ಸೇರಿದಂತೆ ಒಟ್ಟು 1,100 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಳಚ್ಚಿಲ್ ಮಸೀದಿ ಹತ್ತಿರ ನೀರಿನಿಂದ ತುಂಬಿದ್ದ ತೋಡಿಗೆ ಬಿದ್ದು ರಝಾಕ್ (34 ) ಮೃತಪಟ್ಟಿದ್ದಾರೆ.

ಶಿವಮೊಗ್ಗ ನಗರಕ್ಕೂ ನುಗ್ಗಿದ ನೀರು; 2,150 ಜನ ಅತಂತ್ರ: ತುಂಗಾ ಜಲಾಶಯದಿಂದ 1.15 ಲಕ್ಷ ಕ್ಯುಸೆಕ್‌ ನದಿಗೆ ಬಿಟ್ಟ ಪರಿಣಾಮ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಜಲಾವೃತವಾಗಿವೆ.

ಕುಂಬಾರಗುಂಡಿ, ಬಿ.ಬಿ. ರಸ್ತೆ, ಮಂಜುನಾಥ ಟಾಕೀಸ್ ರಸ್ತೆ, ಮಹಾಕವಿ ಕಾಳಿದಾಸ ರಸ್ತೆ, ವಿದ್ಯಾನಗರ, ಚಿಕ್ಕಲ್, ಗುರುಪುರ ಬಡಾವಣೆಗಳಿಗೆ ನೀರು ನುಗ್ಗಿದೆ. ತುಂಗಾ ನಾಲೆ ನೀರು ನುಗ್ಗಿ ಅಶ್ವತ್ಥ ನಗರ, ಎಲ್‌ಬಿಎಸ್ ನಗರಗಳು ಜಲಾವೃತಗೊಂಡಿವೆ. 7 ಬಡಾವಣೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ 14 ನೆರೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 2,150 ಜನರಿಗೆ ಆಶ್ರಯ ನೀಡಲಾಗಿದೆ.

ಪತ್ರಿಕಾ ವಿತರಕ ನೀರು ಪಾಲು: ಕುಂಸಿ–ಚೋರಡಿ ಮಧ್ಯೆ ಇರುವ ಕುಮುದ್ವತಿ ಸೇತುವೆ ಮೇಲೆ ಜೀಪ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನದಿಗೆ ಬಿದ್ದಿದ್ದಾರೆ. ನಾಗರಾಜ್ ಎಂಬುವವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪತ್ರಿಕಾ ವಿತರಕ ಅಮರನಾಥ್ (56) ಎಂಬುವವರ ಪತ್ತೆಗೆ ಹುಡುಕಾಟ ನಡೆದಿದೆ. ಇಬ್ಬರೂ ಕುಂಸಿಯಿಂದ ನದಿ ಪ್ರವಾಹ ನೋಡಲು ಬೈಕ್‌ನಲ್ಲಿ ತೆರಳಿದ್ದರು.

41 ಹಸು ಸಾವು: ತೀರ್ಥಹಳ್ಳಿ ತಾಲ್ಲೂಕಿನಲ್ಲಿ 22 ಹಾಗೂ ಶಿವಮೊಗ್ಗ ತಾಲ್ಲೂಕಿನಲ್ಲಿ 19 ಸೇರಿ ಒಟ್ಟು 41 ಹಸುಗಳು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿವೆ. ಭದ್ರಾವತಿ ತಾಲ್ಲೂಕಿನಲ್ಲಿ 3,000 ಕೋಳಿಮರಿಗಳು ನೀರು ಪಾಲಾಗಿವೆ.

ಜರುಗಿದ ಗುಡ್ಡ: ತೀರ್ಥಹಳ್ಳಿ ಸಮೀಪದ ಸಿಂಗನಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಲಗತ್ತಿಯ ಬಳಿ ಒಂದು ಕಿ.ಮೀ. ನಷ್ಟು ಗುಡ್ಡ ಕುಸಿದ ಪರಿಣಾಮ 30 ಎಕರೆ ಪ್ರದೇಶದ ಅಡಿಕೆ, ಭತ್ತದ ಬೆಳೆ ನಾಶವಾಗಿದೆ. ಮಳೆ ಕಾರಣ ರೈತರು ಹೊಲಗದ್ದೆಗಳಿಗೆ ತೆರಳಿರಲಿಲ್ಲ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಂಚಾರ ಬಂದ್: ಭಾರಿ ಪ್ರಮಾಣದ ನೀರು, ಸೇತುವೆ ಕುಸಿತದ ಕಾರಣ ಆಯನೂರು–ಬೆಜ್ಜುವಳ್ಳಿ, ಶಿವಮೊಗ್ಗ–ತೀರ್ಥಹಳ್ಳಿ, ಹಿರೇಬೈಲು–ಕನ್ನಂಗಿ, ಹೊಳೆಹೊನ್ನೂರು–ಚನ್ನಗಿರಿ ರಸ್ತೆ, ಶಿಕಾರಿಪುರ–ಶಿರಾಳಕೊಪ್ಪ ರಸ್ತೆಗಳು ಬಂದ್‌ ಆಗಿವೆ.

ನೀರಿಗೆ ಹಾಹಾಕಾರ: ಶಿವಮೊಗ್ಗ ಪಂಪ್‌ ಹೌಸ್‌ ಸೇರಿ ಹಲವೆಡೆ ಕುಡಿಯುವ ನೀರಿನ ಪೂರೈಕೆ ಕೇಂದ್ರಗಳಿಗೆ ನೀರು ನುಗ್ಗಿದೆ. ಇದರಿಂದ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ನೆಲ್ಲಿಕೊಪ್ಪ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲ್ಲೂಕಿನ ನದಿ ಪಾತ್ರದ 30ಕ್ಕೂ ಹೆಚ್ಚು ಗ್ರಾಮಗಳ ಮೇಲೆ ಭಾಗಶಃ ಪರಿಣಾಮ ಬೀರಿದೆ. ಭದ್ರಾ ಜಲಾಶಯದಿಂದ ನೀರು ಹೊರಗೆ ಬಿಡುತ್ತಿರುವುದರಿಂದ ಜಿಲ್ಲೆಯ ನದಿ ಪಾತ್ರದ ಮತ್ತುಷ್ಟು ಹಳ್ಳಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ಹೆಲಿಕಾಪ್ಟರ್‌ನಿಂದ ಆರು ಜನರ ರಕ್ಷಣೆ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಕಲಕಲಗಡ್ಡೆಯಲ್ಲಿ ಸಿಲುಕಿದ್ದ ಎರಡು ಕುಟುಂಬಗಳ ಆರು ಜನರನ್ನು ಸೇನಾ ಹಾಲಿಕಾಪ್ಟರ್‌ ಮೂಲಕ ಶನಿವಾರ ರಕ್ಷಿಸಲಾಯಿತು.

ಈ ಪೈಕಿ ಹನುಮಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಕವಿತಾ ಅವರು ಏಳು ತಿಂಗಳ ಗರ್ಭಿಣಿ. ಒಟ್ಟು 14 ಜನರಿದ್ದ ನಡುಗಡ್ಡೆಯಿಂದ ಮುನ್ನಚ್ಚರಿಕೆ ಕ್ರಮವಾಗಿ ಕೆಲವರನ್ನು ಈ ಮೊದಲೇ ಬೋಟ್‌ ಮೂಲಕ ಸ್ಥಳಾಂತರಿಸಲಾಗಿತ್ತು. ಈ ಆರು ಜನರು ಹೊರಬರುವುದಕ್ಕೆ ನಿರಾಕರಿಸಿ ಉಳಿದುಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ಕಳಸ ಬಳಿಯ ಇಡಕಣಿ ಬಳಿ ಗುಡ್ಡಕುಸಿದು 30ಕ್ಕೂ ಹೆಚ್ಚು ಮಂದಿ ಮಲ್ಲೇಶನಗುಡ್ಡದ ಶೆಡ್‌ನಲ್ಲಿ ಸಿಲುಕಿದ್ದಾರೆ.

ಕಳಸ ಭಾಗದ ದೇವರಗುಡ್ಡ ಬಳಿ ಒಂದು ಕಿ.ಮೀ.ಗೂ ಹೆಚ್ಚು ದೂರ ಧರೆ ಕುಸಿದಿದೆ. ದೇವರಗುಡ್ಡದ 15 ಕುಟುಂಬಗಳನ್ನು ಕಳಸಕ್ಕೆ ಕರೆತರಲಾಗಿದೆ. ಕಳಸ– ಹೊರನಾಡು ರಸ್ತೆ ಪೂರ್ಣ ಹಾಳಾಗಿದೆ. ಬಾಳೆಹೊನ್ನೂರು ಭಾಗ ಜಲಾವೃತವಾಗಿದೆ.

ಮೂಡಿಗೆರೆ ತಾಲ್ಲೂಕಿನ ಸುಂದರಬೈಲು ಗ್ರಾಮದ ಮಹಾಮನೆ ಎಸ್ಟೇಟ್‌ ಭಾಗದಲ್ಲಿ ಗುಡ್ಡ ಕುಸಿದು 12 ಕುಟುಂಬಗಳನ್ನು ಕೊಟ್ಟಿಗೆಹಾರ ಪರಿಹಾರ ಕೇಂದ್ರಕ್ಕೆ ಕಳುಹಿಸಲಾಗಿದೆ. ವಾಟೆಖಾನ್‌ ಸಮೀಪ ಹೊಸಕೆರೆ
ಯಲ್ಲಿ ನಾಲ್ಕು ಮನೆಗಳು ಕುಸಿದಿವೆ.

ಪರಿಹಾರ ಕೇಂದ್ರದಲ್ಲಿ ಅವ್ಯವಸ್ಥೆ: ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂಬುದು ಸಂಕಷ್ಟದಲ್ಲಿರುವವರು ಅಳಲು ತೋಡಿಕೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಮಲೆಮನೆ, ಮೇಗೂರು, ಸಂಕಸಾಲೆ, ದುರ್ಗದಳ್ಳಿ, ಬಲಿಗೆ, ಜಾವಳಿ, ಎಸ್ಟೇಟ್‌, ತತ್ಕೋಳ, ಇಡಕಣಿ, ಹಿರೇಬೈಲು, ಮಲ್ಲೇಶನ ಗುಡ್ಡ ಮೊದಲಾದ ಕಡೆಗಳಲ್ಲಿ ಗುಡ್ಡಕುಸಿದು, ಜಲಾವೃತವಾಗಿ ರಸ್ತೆ ಸಂಚಾರ ಬಂದ್‌ ಆಗಿದೆ. 200ಕ್ಕೂ ಹೆಚ್ಚು ಮಂದಿ ಈ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿಕೊಂಡ ರಕ್ಷಣಾ ತಂಡ

ರಾಯಚೂರು/ಯಾದಗಿರಿ: ನಾರಾಯಣಪುರ ಜಲಾಶಯದಿಂದ ದಾಖಲೆಯ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಕೃಷ್ಣಾ ನದಿಯು ಭೋರ್ಗರೆಯುತ್ತಿದೆ.

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆಯ ಜನರ ನೆರವಿಗೆ ತೆರಳಿದ್ದ ಎನ್‌ಡಿಆರ್‌ಎಫ್‌, ಸೇನಾ ಪಡೆಯ ಯೋಧರು ಹಾಗೂ ಅಧಿಕಾರಿಗಳು ಇರುವ ರಕ್ಷಣಾ ತಂಡ, ಕೃಷ್ಣಾ ನದಿ ಪ್ರವಾಹ ಏಕಾಏಕಿ ಹೆಚ್ಚಿದ್ದರಿಂದ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಇಲ್ಲಿ ಕೃಷ್ಣಾ ನದಿ ಎರಡು ಕವಲುಗಳಾಗಿ ಹರಿದಿದ್ದು, ಜಲದುರ್ಗ ಕಡೆ ಸೇತುವೆ ನಿರ್ಮಿಸಲಾಗಿದೆ. 50 ವರ್ಷಗಳಷ್ಟು ಹಳೆಯದಾದ ಈ ಸೇತುವೆಯ ಮೇಲೆ ಇದೇ ಮೊದಲಬಾರಿಗೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತವಾಗಿದೆ.

‘ಐದು ದಿನಗಳಿಗೆ ಸಾಲುವಷ್ಟು ಆಹಾರಧಾನ್ಯ ಸಂಗ್ರಹವಿದ್ದು, ಆ ನಂತರ ತೊಂದರೆ ಎದುರಾಗಬಹುದು. ನಾರಾಯಣಪುರ ಜಲಾಶಯದ ಹೊರ ಹರಿವು ತಗ್ಗಿದರೆ ಸಂಪರ್ಕ ಸಾಧ್ಯವಾಗಲಿದೆ. ಇಲ್ಲದಿದ್ದರೆ ಹೆಲಿಕಾಪ್ಟರ್‌ ಮೂಲಕ ಈ ರಕ್ಷಣಾ ತಂಡ ಹಾಗೂ ನಡುಗಡ್ಡೆಯಲ್ಲಿಯ ಜನರನ್ನು ರಕ್ಷಿಸಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.

ಭೀಮಾ ನದಿಯ ಪ್ರವಾಹವೂ ಸೇರಿದ್ದರಿಂದ ರಾಯಚೂರು ತಾಲ್ಲೂಕಿನಲ್ಲಿ ಕೃಷ್ಣಾ ನದಿಯಲ್ಲಿ 7.5 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿಯುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು ತಾಲ್ಲೂಕಿನ ಗುರ್ಜಾಪುರ, ಕರೆಕಲ್‌, ಲಿಂಗಸುಗೂರು ತಾಲ್ಲೂಕಿನ ಮಾದರಗಡ್ಡೆ, ದೇವದುರ್ಗ ತಾಲ್ಲೂಕಿನ ರೇರಾಯ ಕುಂಟಿ, ಮದಗುಂಟು, ಪರ್ತಾಪುರ, ಕರ್ಕಿಹಳ್ಳಿ ಅಂಜಳ, ಮ್ಯಾದರಗೋಳ, ಗೂಗಲ್ ಹಾಗೂ ಕೊಪ್ಪರ ಗ್ರಾಮದ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಯಾದಗಿರಿ ಜಿಲ್ಲೆಯ ನೀಲಕಂಠರಾಯನಗಡ್ಡಿಗೆ ನಿರ್ಮಿಸಿರುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದ ಹೊಲದಲ್ಲಿ ವಾಸಿಸುತ್ತಿದ್ದ ಎರಡು ಕುಟುಂಬಗಳ 10 ಜನರನ್ನು ರಕ್ಷಿಸಲಾಗಿದ್ದು, ರಕ್ಷಣಾ ಪಡೆಗಳೊಂದಿಗೆ ಶಾಸಕ ರಾಜುಗೌಡ ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭೀಮಾ ನದಿ ಪ್ರವಾಹದಿಂದಾಗಿ ಜೋಳದಡಗಿ ಸೇತುವೆ ಮುಳುಗಿದ್ದು, ಯಾದಗಿರಿಯಿಂದ ತೆಲಂಗಾಣ ಸಂಪರ್ಕ ಕಡಿತಗೊಂಡಿದೆ.

ಭೀಮಾ ನದಿಯ ಪ್ರವಾಹ ಹೆಚ್ಚಿದ್ದು, ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಂಚಿನವರೆಗೂ ನೀರು ನುಗ್ಗಿದೆ. ಭೀಮಾ– ಅಮರ್ಜಾ ಸಂಗಮ ಕ್ಷೇತ್ರದಲ್ಲಿರುವ ಅಷ್ಟತೀರ್ಥ, ಭಕ್ತಿಸ್ಥಾನ, ಕರ್ಮಸ್ಥಾನ, ಮುಕ್ತಿಸ್ಥಾನಗಳು ಹಾಗೂ ನದಿ ದಡದಲ್ಲಿರುವ ದತ್ತಾತ್ರೇಯರ ‘ಔದುಂಬರ ವೃಕ್ಷ ಕಟ್ಟೆ’ ಸಂಪೂರ್ಣ ಮುಳುಗಡೆಯಾಗಿವೆ. ಪಕ್ಕದ 10 ಮಠ– ಮಂದಿರಗಳಿಗೂ ನೀರು ನುಗ್ಗಿದೆ.

ಕೆಆರ್‌ಎಸ್‌: 50 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

ಮಂಡ್ಯ: ಕೊಡಗಿನ ಕುಂಭದ್ರೋಣ ಮಳೆ ಮಂಡ್ಯ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಕೆಆರ್‌ಎಸ್‌ ಜಲಾಶಯಕ್ಕೆ 1.30 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಜಲಾಶಯದ ಸುರಕ್ಷತೆಗಾಗಿ ಶನಿವಾರ ಮಧ್ಯಾಹ್ನದಿಂದ ನದಿಗೆ 50 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ.

ಗುರುವಾರವಷ್ಟೇ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತಗೊಳಿಸಲಾಗಿತ್ತು. ಜು.19ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ 15 ಟಿಎಂಸಿ ಅಡಿ ನೀರಿ ಹರಿದು ಹೋಗಿದೆ. ಪ್ರವಾಹದ ಕಾರಣದಿಂದಾಗಿ ಈಗ ಮತ್ತೆ ನದಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ಕೆಆರ್‌ಎಸ್‌ಗೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣ ಭರ್ತಿ (ಗರಿಷ್ಠ 124.80 ಅಡಿ) ಯಾಗುವ ಮೊದಲೇ ನೀರು ಹರಿಸಲಾಗುತ್ತಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ಜಲಾಶಯದ ನೀರಿನ ಮಟ್ಟ 112 ಅಡಿಯ ಗಡಿ ತಲುಪಿತ್ತು. ಪ್ಲಸ್‌ 103ರ ಮಟ್ಟದ 30 ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ರಾತ್ರಿಯ ವೇಳೆಗೆ ಹೊರಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಳುಗಡೆ ಭೀತಿ ಎದುರಿಸುತ್ತಿರುವ ಶ್ರೀರಂಗಪಟ್ಟಣ ತಾಲ್ಲೂಕಿನ 19 ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಸೂಕ್ತ ಎಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸೇರಿ ಕಾವೇರಿ ನದಿ ಹರಿಯುವ ಎಲ್ಲಾ ತಾಲ್ಲೂಕುಗಳಲ್ಲಿ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪರಿಸ್ಥಿತಿ ನಿಭಾಯಿಸುವಂತೆ ಸೂಚನೆ ನೀಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.

‘ಶನಿವಾರ ಸಂಜೆಯ ವೇಳೆಗೆ ಒಂದು ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಹರಿಸಲಾಗುವುದು. 1.5 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಸಿದರೂ ನದಿ ತಟದ ಹಳ್ಳಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ನದಿ ಪಾತ್ರದ ಹೊಲ, ಗದ್ದೆಗಳು ಮಾತ್ರ ಮುಳುಗುತ್ತವೆ. ಜನವಸತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಜನರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.

ಮೈದುಂಬಿಕೊಂಡ ಗಗನಚುಕ್ಕಿ: ಕಬಿನಿ ಜಲಾಶಯದಿಂದಲೂ ಹೊರಕ್ಕೆ ನೀರು ಬಿಡುತ್ತಿರುವ ಕಾರಣ ಮಳವಳ್ಳಿ ತಾಲ್ಲೂಕು, ಶಿವನಸಮುದ್ರ (ಬ್ಲಫ್‌) ಸಮೀಪದ ಗಗನಚುಕ್ಕಿ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದೆ. ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಜಲಪಾತದ ಸಮೀಪ ರಕ್ಷಣಾ ವ್ಯವಸ್ಥೆ ಇಲ್ಲ, ವೀಕ್ಷಣಾ ಗೋಪುರ ಹಳೆಯದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಪ್ರವಾಸಿಗರು ಆರೋಪಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT