ಹೆಬ್ರಿ, ಹೊಸಪೇಟೆಯಲ್ಲಿ ಬಿರುಗಾಳಿ ಮಳೆ

ಶನಿವಾರ, ಏಪ್ರಿಲ್ 20, 2019
29 °C

ಹೆಬ್ರಿ, ಹೊಸಪೇಟೆಯಲ್ಲಿ ಬಿರುಗಾಳಿ ಮಳೆ

Published:
Updated:
Prajavani

ಬೆಂಗಳೂರು: ಉಡುಪಿ, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಶಿವಮೊಗ್ಗ ಹಾಗೂ ಬೀದರ್‌ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ.

ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ವ್ಯಾಪ್ತಿಯ ಮುನಿಯಾಲು, ಶಿವಪುರ, ಎಳ್ಳಾರೆ, ಪಡುಕುಡೂರು ಪರಿಸರದಲ್ಲಿ ಸಂಜೆ ಗಾಳಿ ಸಹಿತ ಮಳೆಯಾಗಿದೆ.

ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು. ಸಂಜೆ 4 ಗಂಟೆಗೆ ಗಾಳಿಯೊಂದಿಗೆ ಮಳೆ ಸುರಿಯಿತು.

ಚಿತ್ರದುರ್ಗ ನಗರ, ಭರಮಸಾಗರ ಹಾಗೂ ಚಿಕ್ಕಜಾಜೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಜೆ ಗುಡುಗು, ಬಿರುಗಾಳಿ ಸಹಿತ ತುಂತುರು ಮಳೆ ಸುರಿಯಿತು. ಬೇಸಿಗೆ ಬಿಸಿಲಿಗೆ ಹೆಚ್ಚಾಗಿದ್ದ ಧಗೆ ಕೊಂಚ ಕಡಿಮೆಯಾಯಿತು. ಮಧ್ಯಾಹ್ನದಿಂದಲೂ ಮೋಡ ಮುಸುಕಿದ ವಾತಾವರಣ ಜಿಲ್ಲೆಯಲ್ಲಿತ್ತು. ಸಂಜೆಯ ವೇಳೆಗೆ ಮೋಡಗಳು ಹನಿಗಳಾಗಿ ಧರೆಗೆ ಇಳಿದವು. ಜೋಗಿಮಟ್ಟಿ ವನ್ಯಧಾಮದಲ್ಲಿ ಮಳೆ ಕೊಂಚ ಬಿರುಸಾಗಿ ಸುರಿಯಿತು.

ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಮರಿಯಮ್ಮನಹಳ್ಳಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಗುರುವಾರ ಸಂಜೆ ಸ್ವಲ್ಪ ಹೊತ್ತು ಮಳೆಯಾಗಿದೆ.

ಹೊಸಪೇಟೆ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿರುಗಾಳಿ ಸಹಿತ 20 ನಿಮಿಷ ಬಿರುಸಿನ ಮಳೆಯಾಗಿದೆ. ಕೆಲವು ದಿನಗಳಿಂದ ತಾಪಮಾನ 40ರಿಂದ 41 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದು, ಕೆಂಡದಂತಹ ಬಿಸಿಲಿನಿಂದ ಜನ ಕಂಗೆಟ್ಟಿದ್ದರು. ವರ್ಷದ ಮೊದಲ ಮಳೆಯ ಸಿಂಚನದಿಂದ ಜನ ಸ್ವಲ್ಪ ನಿರಾಳರಾದರು.

ತಾಲ್ಲೂಕಿನ ಕಮಲಾಪುರ, ಹೊಸೂರು, ಕೊಂಡನಾಯಕನಹಳ್ಳಿ, ಮಲಪನಗುಡಿ, ಹೊಸಮಲಪನಗುಡಿ, ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ಇತರೆ ಕಡೆಗಳಲ್ಲಿಯೂ ಮಳೆಯಾಗಿದೆ. ಮರಿಯಮ್ಮನಹಳ್ಳಿಯ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಕೆಲ ಕಾಲ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿದಿದೆ.

ಕಮಲನಗರ (ಬೀದರ್‌ ಜಿಲ್ಲೆ): ಪಟ್ಟಣದ ಸುತ್ತಮುತ್ತಲಿನ ಗ್ರಾಮದಲ್ಲಿ ಗುಡುಗು ಮಿಂಚು ಸಹಿತ ಬಿರುಗಾಳಿಯೊಂದಿಗೆ ಸಂಜೆ ಕೆಲ ಸಮಯ ಮಳೆ ಸುರಿಯಿತು.

ಬಿರುಗಾಳಿಯಿಂದಾಗಿ ಗಿಡ–ಮರದ ಟೊಂಗೆಗಳು ನೆಲಕ್ಕೊರಗಿವೆ. ಕೆಲವೆಡೆ ಮನೆಯ ಛಾವಣಿ ಹಾರಿ ಹೋಗಿವೆ.

ಅಕಾಲಿಕವಾಗಿ ಸುರಿದ ಮಳೆಯು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಬರಗಾಲದಲ್ಲಿ ಅಲ್ಪ ಸ್ವಲ್ಪ ಅಂತರ್ಜಲ ಇದ್ದ ಕಡೆ ಬೆಳೆದಿದ್ದ ಜೋಳ, ಮಾವು, ಟೊಮೆಟೊ ಇತರೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಮಳೆಯ ಸಿಂಚನವಾಯಿತು.

ತಾಲ್ಲೂಕಿನ ಆಗುಂಬೆ, ಬಿದರಗೋಡು ಸೇರಿ ವಿವಿಧೆಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಕೋಣಂದೂರಿನಲ್ಲಿ ಸಾಧಾರಣ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ವಾರಾಹಿ ಜಲಾನಯನ ಪ್ರದೇಶ ಯಡೂರು, ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !