ಬುಧವಾರ, ಮಾರ್ಚ್ 3, 2021
30 °C
‘ಹಸಿದವರತ್ತ ನಮ್ಮ ಚಿತ್ತ’ ಅಭಯಾನ ಮೂಲಕ ನೆರವು

ಬೆಳಗಾವಿ | ಕನ್ನಡ ಸೇನಾನಿಗಳಿಂದ ‘ಸಹಾಯ ಹಸ್ತ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕನ್ನಡ ನಾಡು–ನುಡಿ, ನೆಲ–ಜಲ ಹಾಗೂ ಸಂಸ್ಕೃತಿಗೆ ಧಕ್ಕೆ ಬಂದಾಗ ಸಿಡಿದೇಳುವ ಮತ್ತು ನಾಡದ್ರೋಹಿ ಶಕ್ತಿಗಳು ತಗಾದೆ ತೆಗೆದಾಗ ಸಮರ್ಥ ಪ್ರತ್ಯುತ್ತರ ನೀಡುವ ಕಾಯಕವನ್ನು ದಶಕಗಳಿಂದಲೂ ಮಾಡುತ್ತಿರುವ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸೇನಾನಿಗಳು ಸಂಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೂ ಸೈ ಎಂದು ನಿರೂಪಿಸಿದ್ದಾರೆ.

ಕೋವಿಡ್–19 ಲಾಕ್‌ಡೌನ್‌ ಪರಿಣಾಮ ಕೆಲಸವಿಲ್ಲದೆ, ಗಳಿಕೆ ಇಲ್ಲದೆ ಕಂಗಾಲಾಗಿರುವ ಕುಟುಂಬಗಳಿಗೆ ದವಸಧಾನ್ಯ ಹಾಗೂ ಆಹಾರ ಪದಾರ್ಥಗಳನ್ನು ನೀಡಿ ನೆರವಾಗುತ್ತಿದ್ದಾರೆ. ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನದ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಅಭಿಯಾನ ಕೆಲವೇ ದಿನಗಳಲ್ಲಿ ಬರೋಬ್ಬರಿ 2 ತಿಂಗಳು ತಲುಪಲಿದೆ.

ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಸಡಿಲಿಕೆ ನೀಡಿದ ನಂತರವೂ ಮುಂದುವರಿದಿದೆ. ಇತರ ದಾನಿಗಳು ತಲುಪದ ಸ್ಥಳಗಳಿಗೆ ತಲುಪಿ, ನಿಜವಾಗಿಯೂ ತೊಂದರೆಯಲ್ಲಿರುವವರಿಗೆ ಈ ತಂಡದವರು ಅಡುಗೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಟ್ಟು, ಹಸಿದ ಹೊಟ್ಟೆಗಳಿಗೆ ದಾಸೋಹ ಮಾಡಿದ್ದಾರೆ. ಮಾರಕ ಕೊರೊನಾ ಭೀತಿಯಲ್ಲೂ ತಮ್ಮ ಸಮಯ ಹಾಗೂ ಶ್ರಮವನ್ನು ಸಮಾಜಕ್ಕೋಸ್ಕರ ದಾನ ಮಾಡುತ್ತಿದ್ದಾರೆ.

ಮಾರ್ಚ್‌ 23ರಿಂದ: ಮಾರ್ಚ್ 23ರಿಂದ ಆರಂಭವಾದ ಅಭಿಯಾನದಲ್ಲಿ ಪ್ರತಿ ನಿತ್ಯವೂ ಒಂದಿಲ್ಲ ಒಂದು ಕಡೆಯ ಜನರಿಗೆ ಅವರು ನೆರವಾಗಿದ್ದಾರೆ. ಈವರೆಗೆ 1,200ಕ್ಕೂ ಹೆಚ್ಚಿನ ಕುಟುಂಬಗಳಿಗೆ, ವೃದ್ಧಾಶ್ರಮ, ಅನಾಥಾಲಯಗಳು, ಎಚ್‌ಐವಿ ಚಿಕಿತ್ಸಾ ಕೇಂದ್ರ ಹೀಗೆ... ಹಲವರಿಗೆ ಇವರಿಂದ ಸಹಾಯ ಸಿಕ್ಕಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಸಂಘಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಕೂಡ ಬಡವರಿಗೆ ನೆರವಾಗಿವೆ. ಆದರೆ, ಕನ್ನಡ ಹೋರಾಟಗಾರರು ಸತತವಾಗಿ ಈ ಕಾರ್ಯ ನಡೆಸಿರುವುದು ವಿಶೇಷವಾಗಿದೆ.

ವಲಸೆ ಕಾರ್ಮಿಕರು, ರಸ್ತೆಬದಿಯ ವಾಸಿಗಳು, ಕೊಳೆಗೇರಿಗಳ ನಿವಾಸಿಗಳು, ಕೆಲಸವಿಲ್ಲದೆ ಕಂಗಾಲಾಗಿರುವ ವಿವಿಧ ವೃತ್ತಿಗಳವರತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಲ್ಲದೇ, ಎಲ್ಲ ಭಾಷಿಕರು, ಧರ್ಮದವರಿಗೆ ಇವರು ಕಿಟ್‌ಗಳನ್ನು ತಲುಪಿಸಿದ್ದಾರೆ. ಅಕ್ಕಿ, ಗೋಧಿ ಹಿಟ್ಟು, ತೊಗರಿ ಬೇಳೆ, ಉಪ್ಪು, ಎಣ್ಣೆ ನೀಡಿ ಅವರ ಮನೆಗಳಲ್ಲಿ ಒಂದಷ್ಟು ದಿನಗಳು ಒಲೆ ಉರಿಯಲು ಕಾರಣವಾಗಿದ್ದಾರೆ. ಹಲವು ದಾನಿಗಳು ಇವರ ಮೂಲಕ ತಮ್ಮ ‘ಸೇವೆ’ ಸಲ್ಲಿಸಿದ್ದಾರೆ. ಮೇವು ಸಿಗದೆ ಬಳಲಿದ್ದ ದನ–ಕರುಗಳಿಗೂ ದವಸಧಾನ್ಯ ನೀಡಿ ಮಾನವೀಯತೆ ಮೆರೆದ ಉದಾಹರಣೆಗಳಿವೆ.

ಕೆಲಸ ಸಿಗುವ ತನಕ: ‘ಜನಜೀವನ ಸಹಜ ಸ್ಥಿತಿಗೆ ಮರಳಿ, ಕೈಗಳಿಗೆ ಕೆಲಸ ಸಿಗುವವರೆಗೆ ಅಭಿಯಾನ ನಿಲ್ಲುವುದಿಲ್ಲ. ದಾನಿಗಳು ಕರೆ ಮಾಡಿ ಆಹಾರ ಧಾನ್ಯ ಒಯ್ಯುವಂತೆ ತಿಳಿಸಿದ್ದಾರೆ. ನಮಗೂ ಪುಣ್ಯ ಬರಲಿ, ನಿಮಗಷ್ಟೇ ಏಕೆ ಎಂದು ಫೋನ್ ಮಾಡಿ ಕೇಳಿದವರೂ ಇದ್ದಾರೆ. ಇದು ದಾನವೂ ಹೌದು. ಮಾನವೀಯತೆಯ ಕೆಲಸವೂ ಹೌದು. ಈವರೆಗೆ ಸಮಿತಿಗೆ ಆಹಾರ ಧಾನ್ಯ ಒದಗಿಸಿದವರಲ್ಲಿ ನನ್ನೊಂದಿಗೆ ಹತ್ತಾರು ವರ್ಷಗಳಿಂದ ಸಂಪರ್ಕದಲ್ಲಿದ್ದವರೆ ಆಗಿದ್ದಾರೆ. ಈ ಕಾರ್ಯಕ್ಕೆ ನನ್ನ ವ್ಯಾನ್‌ ಬಳಸುತ್ತಿದ್ದೇವೆ. ಹಲವು ಕೈಗಳು ಸೇರಿದ್ದರಿಂದ ಅಭಿಯಾನ ಸರಾಗವಾಗಿ ನಡೆಯುತ್ತಿದೆ’ ಎಂದು ಚಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೇ 19ರಂದು 25 ಮಂದಿ ಸಂಗೀತ ಕಲಾವಿದರಿಗೆ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಆಹಾರ ಕಿಟ್‌ ವಿತರಿಸಲಾಗುವುದು. ಸಾಹಿತಿ ಬಿ.ಎಸ್. ಗವಿಮಠ, ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಮುಖ್ಯ ಅತಿಥಿಳಗಾಗಿ ಭಾಗವಹಿಸಲಿದ್ದಾರೆ.

ಹೋದ ವರ್ಷ ಅತಿವೃಷ್ಟಿ, ನೆರೆ ಸಂದರ್ಭದಲ್ಲೂ ಈ ತಂಡ ಸೇವಾ ಕಾರ್ಯದಲ್ಲಿ ತೊಡಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು