ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕ್ವಾರಂಟೈನ್ ವಾಚ್' ಆ್ಯಪ್ ಬಗ್ಗೆ ನಿಮಗಿದು ತಿಳಿದಿರಲಿ

Last Updated 3 ಏಪ್ರಿಲ್ 2020, 5:23 IST
ಅಕ್ಷರ ಗಾತ್ರ

ಕಡ್ಡಾಯ 14 ದಿನಗಳ ಕ್ವಾರೆಂಟೈನ್‌ಗೆ ಸೂಚಿಸಿದ್ದರೂ, ಕೆಲವರು ವಿವೇಕ ಶೂನ್ಯವಾಗಿ ವರ್ತಿಸಿ ಊರೆಲ್ಲಾ ಓಡಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇಂಥವರ ಚಲನವಲನಕ್ಕೆ ಕಡಿವಾಣ ಹಾಕಲೆಂದೇ ಕರ್ನಾಟಕ ಸರ್ಕಾರವು ಈಗ ತಂತ್ರಜ್ಞರ ನೆರವು ಪಡೆದು ಮೂರನೇ ಕಣ್ಣನ್ನು ಸೃಷ್ಟಿಸಿದೆ. ಅದುವೇಕ್ವಾರಂಟೈನ್ವಾಚ್ ಎಂಬ ಆ್ಯಪ್. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮೂಲಕ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮತ್ತು ತಂಡವು ಈ ಆ್ಯಪ್ ಸಿದ್ಧಪಡಿಸಿದೆ. ಸೆಲ್ಫೀ ಆಧಾರಿತ ಮುಖ ಗುರುತಿಸುವಿಕೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಜಿಯೋ ಲೊಕೇಶನ್ ಟ್ರ್ಯಾಕಿಂಗ್ ತಂತ್ರಜ್ಞಾನಗಳ ಸಮಾಗಮವಿದು.

14 ದಿನಗಳಹೋಂಕ್ವಾರಂಟೈನ್‌ಗಾಗಿ ಕೈಗೆ ಮುದ್ರೆ (ಸ್ಟ್ಯಾಂಪ್) ಹಾಕಿಸಿಕೊಂಡವರು ಕಡ್ಡಾಯವಾಗಿ ಈ ಆ್ಯಪ್ ಬಳಸಬೇಕಾಗುತ್ತದೆ. ಪ್ರತೀ ಗಂಟೆಗೊಮ್ಮೆ ತಾವೆಲ್ಲಿದ್ದೇವೋ ಅಲ್ಲಿಂದ ತಮ್ಮ ಫೋಟೋ (ಸೆಲ್ಫೀ) ತೆಗೆದು ಕಳುಹಿಸಬೇಕಾಗುತ್ತದೆ. ಅವರು ಮನೆಯಲ್ಲೇ ಇರಬೇಕು, ಹೊರಗೆ ಓಡಾಡಬಾರದು ಎಂಬುದಷ್ಟೇ ಇದರ ಉದ್ದೇಶ. ಅವರು ಕಳುಹಿಸುವ ಫೋಟೋದಲ್ಲಿಯೇ ಜಿಪಿಎಸ್ ಆಧಾರಿತ ಲೊಕೇಶನ್ ಮತ್ತು ಸಮಯವೂ ಅಡಕವಾಗಿರುತ್ತದೆ.

ಈ ಫೋಟೋಗಳನ್ನು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಪ್ರತ್ಯೇಕ ತಂಡವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಈ ತಂತ್ರಜ್ಞಾನದ ನೆರವಿನಿಂದ ಪರಿಶೀಲಿಸುತ್ತಿರುತ್ತದೆ. ಇದರ ಜೊತೆಗೆ, ಕೊರೊನಾ ಸೋಂಕಿನ ಶಂಕಿತರು ಮನೆ ಬಿಟ್ಟು ಎಲ್ಲೋ ಬೇರೆ ಕಡೆಯಿಂದ ಸೆಲ್ಫೀ ತೆಗೆದು ಕಳುಹಿಸಿದರೆ ಅಥವಾ ಮನೆಯಲ್ಲೇ ತೆಗೆದಿದ್ದ ಬೇರೆ ಫೋಟೋವನ್ನು ಬೇರೆಯೇ ಸ್ಥಳದಿಂದ ಅಪ್‌ಲೋಡ್ ಮಾಡಿದರೆ, ಇದರಲ್ಲಿ ಅಡಕವಾಗಿರುವ ತಂತ್ರಾಂಶವು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ತಕ್ಷಣ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಕಾರ್ಯಪ್ರವೃತ್ತವಾಗುವ ಈ ತಂಡವು, ಪೊಲೀಸರಿಗೆ ಮಾಹಿತಿ ನೀಡಿ,ಕ್ವಾರಂಟೈನ್ಅವಧಿ ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಸುತ್ತದೆ.

ಹೋಂಕ್ವಾರಂಟೈನ್‌ಗಾಗಿ ಶಿಫಾರಸು ಮಾಡಲಾದ, ಕೈಗೆ ಮುದ್ರೆ ಹಾಕಿಸಿಕೊಂಡವರಿಗಷ್ಟೇ ಈ ಆ್ಯಪ್ ಬಳಸುವುದು ಸಾಧ್ಯವಾಗುತ್ತದೆ. ಸೋಂಕು ಶಂಕಿತರ ಮೊಬೈಲ್ ಫೋನ್ ನಂಬರ್ ಮೂಲಕ ಇದಕ್ಕೆ ಲಾಗಿನ್ ಆಗಬೇಕಾಗುತ್ತದೆ. ಈ ಫೋನ್ ನಂಬರನ್ನು ಸರ್ಕಾರಿ ಇಲಾಖೆಯೇ ಮೊದಲೇ ಡೇಟಾಬೇಸ್‌ಗೆ ಸೇರಿಸಿರುತ್ತದೆ. ನೋಂದಣಿ ಮಾಡಿದ ಬಳಿಕ ಪೊಲೀಸ್ ದೃಢೀಕರಣವೂ ನಡೆಯುತ್ತದೆ. ಅದರ ಬಳಿಕ, ಶಂಕಿತರು, ಸೋಂಕು ಪೀಡಿತರು ಲಾಗಿನ್ ಆಗಬಹುದು. ಅವರು ಕಳುಹಿಸುವ ಸೆಲ್ಫೀ ಫೋಟೋಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಗುರುತಿಸಿ, ಸ್ಥಳ ಹಾಗೂ ಮುಖ ಚಹರೆಯು ಹೋಲಿಕೆಯಾಗದಿದ್ದಲ್ಲಿ ಅಧಿಕಾರಿಗಳನ್ನು ಎಚ್ಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT