ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ನೆರೆ ಸಂತ್ರಸ್ತರಿಗೆ ಮನೆ: ಎಚ್‌ಡಿಕೆ ಟ್ವೀಟ್‌ ಬಗ್ಗೆ ಚರ್ಚೆ, ವಾಸ್ತವ ಏನು?

Last Updated 17 ಮೇ 2020, 10:17 IST
ಅಕ್ಷರ ಗಾತ್ರ
ADVERTISEMENT
""
""

ಮಡಿಕೇರಿ: ಕೊಡಗು ನೆರೆ ಸಂತ್ರಸ್ತರ 463 ಮನೆ ನಿರ್ಮಾಣ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್‌ ಹಾಗೂ ಫೇಸ್‌ಬುಕ್‌ ಬರಹವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮದೆ ಹಾಗೂ ಜಂಬೂರಿನಲ್ಲಿ ಮನೆಗಳ ನಿರ್ಮಾಣಕ್ಕೆ ನಾನು ಸಿಎಂ ಆಗಿದ್ದಾಗ ಚಾಲನೆ ನೀಡಿ, ಹಣ ಒದಗಿಸಿದ್ದೆ. ಇಂದು 463 ಮನೆಗಳು ಪೂರ್ಣವಾಗಿದ್ದು ಸಂತ್ರಸ್ತರಿಗೆ ಸೂರು ಸಿಗುತ್ತಿದೆ. ಅಂದು ಸಂತ್ರಸ್ತರ ನೋವನ್ನು ಸ್ವತಃ ನಾನೂ ಉಂಡಿದ್ದೆ. ಇಂದಿನ ಅವರ ಖುಷಿ ನನ್ನದೂ ಕೂಡ. ನಮ್ಮ ಕೆಲಸಗಳು ಮಾತಾಡಬೇಕು. ಮಾತಾಡುತ್ತಿವೆ’ ಎಂದು ಕುಮಾರಸ್ವಾಮಿ ಅವರು ಗುರುವಾರ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ವಿಚಾರವಾಗಿ ಹಲವರು ಕುಮಾರಸ್ವಾಮಿ ಪರ ಹಾಗೂ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಕುಮಾರಸ್ವಾಮಿ ಅವರ ಬರಹಕ್ಕೆ, ಮಲ್ಲರಾಜೇ ಅರಸು ಎಂಬುವರು, ‘ನುಡಿದಂತೆ ನಡೆದು, ಸೂರು ಕಳೆದುಕೊಂಡವರಿಗೆ ಸೂರು ಕಲ್ಪಿಸಿಕೊಟ್ಟಿದ್ದು ನಿಮ್ಮ ನಾಯಕತ್ವದ ಹಿರಿಮೆ. ಅವರ ಹೃದಯಾಂತರಳದಲ್ಲಿ ನಿಮ್ಮ ನೆನಪು ಸದಾ ಹಚ್ಚ ಹಸಿರಾಗಿರುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅದೇ ಮಹಿ ಮಹೇಶ್‌ ಎಂಬುವವರು, ‘ಸುಧಾಮೂರ್ತಿ ಅವರ ಕೊಡುಗೆ, ನಿಮ್ಮ ಕೆಲಸ ಶೂನ್ಯ’ ಎಂದಿದ್ದಾರೆ. ಸುಚೇಂದ್ರ ಅವರು, ‘ಸುಧಾಮೂರ್ತಿ ಅವರ ಕೊಡುಗೆಗೆ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ. ಇರ್ಫಾನ್‌ ಅಲಿ ಅವರು, ‘ನಿಮ್ಮ ಉತ್ತಮ ಕಾರ್ಯಗಳಲ್ಲಿ ಇದು ಸಹ ಸೇರ್ಪಡೆ ಆಗಿರುವುದು ಅಣ್ಣಾ’ ಎಂದು ಪ್ರತಿಕ್ರಿಯಿಸಿದ್ದಾರೆ.

ಎಚ್‌.ಡಿ.ಮಹಾದೇವಪ್ಪ ಅವರು, ‘ಆಗಿನ ಪರಿಸ್ಥಿತಿಯಲ್ಲಿ ನಿಮ್ಮ ಸ್ಥಾನದಲ್ಲಿ ಬೇರೆ ಯಾರಿದ್ದರೂ ಆ ಕೆಲಸವನ್ನು ಮಾಡಲೇಬೇಕಿತ್ತು. ನೀವು ಹಾಗೆ ಮಾಡಿದ್ದೀರಿ. ಇದು ಖಂಡಿತಾ ನಿಮ್ಮ ಕೊಡುಗೆ ಅಲ್ಲ. ಸುಧಾಮೂರ್ತಿ ಅಮ್ಮನವರ ಕೊಡುಗೆ’ ಎಂದು ಬರೆದಿದ್ದಾರೆ.
ಇನ್ನು ಸಂಸದರೊಬ್ಬರ ಫಾನ್ಸ್ ಕ್ಲಬ್‌ ಸದಸ್ಯರು, ‘ಹಣ ಇನ್ಫೊಸಿಸ್‌ದ್ದು, ಪುಕ್ಸಟ್ಟೆ ಬಿಲ್ಡಪ್‌ ಕುಮಾರಸ್ವಾಮಿದ್ದು. ರೀ ಕುಮಾರಸ್ವಾಮಿ ಸ್ವಂತ ಹಣದಲ್ಲಿ ಕಟ್ಟಿಸಿದ ಹಾಗೆ ಆಡ್ತಿದ್ದೀರಲ್ಲಾ. ಅದು ಸುಧಾಮೂರ್ತಿ ಅಮ್ಮನವರ ಕೃಪೆ ಎಂದಿದ್ದಾರೆ’ ಎಂದು ಹೀಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ...ಮಡಿಕೇರಿ: 463 ನೆರೆ ಸಂತ್ರಸ್ತರಿಗೆ ಸೂರಿನ ಭಾಗ್ಯ

ವಾಸ್ತವ ಏನು?:ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್‌ನಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಹಲವು ಮಂದಿ ನೆಲೆ ಕಳೆದುಕೊಂಡಿದ್ದರು. ಅವರಿಗೆ ಜಿಲ್ಲೆಯ ಜಂಬೂರು, ಕರ್ಣಂಗೇರಿ, ಮದೆನಾಡು, ಕೆ.ನಿಡುಗಣೆ, ಗಾಳಿಬೀಡು ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರವೇ, ರಾಜೀವ್‌ ಗಾಂಧಿ ವಸತಿ ನಿಗಮದಿಂದ ಕರ್ಣಂಗೇರಿಯಲ್ಲಿ ನಿರ್ಮಿಸಿದ್ದ 35 ಮನೆಗಳನ್ನು ಮೊದಲ ಹಂತದಲ್ಲಿ ಕಳೆದ ವರ್ಷ ಹಸ್ತಾಂತರ ಮಾಡಲಾಗಿತ್ತು. ಇದೀಗ ರಾಜೀವ್‌ ಗಾಂಧಿ ನಿಗಮದಿಂದಲೇ ನಿರ್ಮಿಸಿ ಪೂರ್ಣಗೊಂಡಿರುವ 463 ಮನೆಗಳನ್ನು ಮದೆನಾಡು ಹಾಗೂ ಜಂಬೂರಿನಲ್ಲಿ ಹಸ್ತಾಂತರಕ್ಕೆ ಸಿದ್ಧತೆ ನಡೆಸಲಾಗಿದೆ.

‘ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿದ್ದ ಅನುದಾನವನ್ನೂ ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ನಿಗಮದಿಂದ ಉಳಿದ 250 ಮನೆಗಳು ನಿರ್ಮಾಣ ಹಂತದಲ್ಲಿವೆ. ಹಸ್ತಾಂತರಕ್ಕೆ ಸಿದ್ಧವಾಗಿರುವ 463 ಮನೆಗಳಿಗೂ, ಇನ್ಫೊಸಿಸ್‌ ಪ್ರತಿಷ್ಠಾನದಿಂದ ನಿರ್ಮಾಣ ಮಾಡುತ್ತಿರುವ ಮನೆಗಳಿಗೂ ಸಂಬಂಧ ಇಲ್ಲ. ಡಬಲ್‌ ಬೆಡ್‌ರೂಂ ಮನೆಗೆ ನಿಗಮವು ಪ್ರತಿ ಮನೆಗೆ ₹ 9.85 ಲಕ್ಷ ಖರ್ಚು ಮಾಡಿದೆ’ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇನ್ಫೊಸಿಸ್‌ ಪ್ರತಿಷ್ಠಾನದಿಂದ ನಿರ್ಮಾಣ ಮಾಡುತ್ತಿರುವ ಮನೆ ಕೆಲಸಗಳು ಪ್ರಗತಿ ಹಂತದಲ್ಲಿವೆ.

‘ಇನ್ಫೊಸಿಸ್‌ ಪ್ರತಿಷ್ಠಾನದವರು ಜಾಗ ನೀಡಿದರೆ ನಾವೇ ಮನೆ ನಿರ್ಮಿಸಿಕೊಡುತ್ತೇವೆ ಎಂದು 2018ರಲ್ಲಿ ಮುಂದೆ ಬಂದಿದ್ದರು. ಅವರಿಗೆ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲೇ ಸ್ಥಳ ಕಲ್ಪಿಸಲಾಗಿತ್ತು. ಅವರಿಗೆ 200 ಮನೆ ನಿರ್ಮಿಸಲು ಸ್ಥಳ ನೀಡಲಾಗಿದೆ. ಅಂದಾಜು 20ಕ್ಕೂ ಹೆಚ್ಚು ಮನೆಗಳು ಆರ್‌ಸಿಸಿ ಹಂತದಲ್ಲಿವೆ. ಉಳಿದ ಮನೆಗಳು ಅಡಿಪಾಯ ಹಂತದಲ್ಲಿದ್ದು ಕೆಲಸ ಪ್ರಗತಿಯಲ್ಲಿದೆ’ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಸಂತ್ರಸ್ತರಿಗೆ ತಾರತಮ್ಯ ಎನಿಸಬಾರದು ಎಂಬ ಕಾರಣಕ್ಕೆ ನಿಗಮವು ನಿರ್ಮಿಸಿರುವ ಮಾದರಿಯಲ್ಲೇ ಇನ್ಫೊಸಿಸ್‌ನಿಂದ ಮನೆ ನಿರ್ಮಿಸಲು ಹೇಳಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಇನ್ಫೊಸಿಸ್‌ನವರ ಕೋರಿಕೆ ಮೇರೆಗೆ ಜಂಬೂರಿನಲ್ಲಿ ಸ್ಥಳ ನೀಡಲಾಗಿದೆ. ಆ ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಎಲ್ಲ ಸಹಕಾರವಿದೆ. ಅವರದ್ದೇ ಎಂಜಿನಿಯರ್ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಮೇ 29ರಂದು ಹಸ್ತಾಂತರ ಮಾಡುತ್ತಿರುವ 463 ಮನೆಗಳು, ಸರ್ಕಾರವು ರಾಜೀವ್‌ ಗಾಂಧಿ ವಸತಿ ನಿಗಮದ ಅಡಿಯಲ್ಲಿ ನಿರ್ಮಿಸಿದ್ದ ಮನೆಗಳು’ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇನ್ಫೊಸಿಸ್‌ ಪ್ರತಿಷ್ಠಾನದಿಂದ ನಿರ್ಮಾಣ ಮಾಡುತ್ತಿರುವ ಮನೆ ಕೆಲಸಗಳು ಪ್ರಗತಿ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT