ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ತಿಂಗಳಿಂದ ಪೂರ್ಣಾವಧಿ ಕುಲಪತಿ ಇಲ್ಲ

ತೋಟಗಾರಿಕೆ ವಿಜ್ಞಾನಗಳ ವಿ.ವಿ; ರಿಜಿಸ್ಟ್ರಾರ್, ನಿರ್ದೇಶಕರು, ಡೀನ್‌ ಎಲ್ಲರೂ ‘ಪ್ರಭಾರಿ’ಗಳು!
Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್,ಸಂಶೋಧನೆ ಮತ್ತು ವಿಸ್ತರಣಾ ವಿಭಾಗಗಳ ನಿರ್ದೇಶಕರು ಹಾಗೂ ವಿ.ವಿ ವ್ಯಾಪ್ತಿಯ ಎಂಟು ಕಾಲೇಜುಗಳ ಡೀನ್‌ಗಳು ಎಲ್ಲರೂ ‘ಪ್ರಭಾರಿ’ಗಳೇ ಇದ್ದಾರೆ.

ಇದು ವಿಶ್ವವಿದ್ಯಾಲಯದ ದೈನಂದಿನ ಕಾರ್ಯಚಟುವಟಿಕೆಯ ಮೇಲೂ ಪರಿಣಾಮ ಬೀರಿದೆ. ಹಿಂದಿನ ಕುಲಪತಿ ಪ್ರೊ.ಡಿ.ಎಲ್.ಮಹೇಶ್ವರ್ 2018ರ ಜೂನ್ 27ರಂದು ನಿವೃತ್ತರಾಗಿದ್ದಾರೆ. ಆಗಿನಿಂದಲೂ ಪೂರ್ಣಾವಧಿ ಕುಲಪತಿ ನೇಮಕ ಆಗಿಲ್ಲ. ಇನ್ನು ರಿಜಿಸ್ಟ್ರಾರ್, ನಿರ್ದೇಶಕರು ಹಾಗೂ ಡೀನ್‌ ಹುದ್ದೆಗಳಲ್ಲಿ2016ರ ಜೂನ್‌ನಿಂದಲೂ ಪ್ರಭಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.

ತಿಂಗಳಿಗೊಮ್ಮೆ ನವೀಕರಣ: ಪ್ರೊ.ಡಿ.ಎಲ್.ಮಹೇಶ್ವರ್ ನಿವೃತ್ತಿ ನಂತರ ಪ್ರೊ.ಎಚ್.ಬಿ.ಲಿಂಗಯ್ಯ ಒಂದು ತಿಂಗಳ ಅವಧಿಗೆ ನೇಮಕಗೊಂಡಿದ್ದರು. ಅವರ ನಂತರ ಡಾ.ಕೆ.ಎಂ.ಇಂದಿರೇಶ ಹಂಗಾಮಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿರೇಶ ಮೊದಲ ಆರು ತಿಂಗಳ ಅವಧಿಗೆ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿದ್ದರು. ನಂತರ ತಿಂಗಳಿಗೊಮ್ಮೆಅವರ ಅಧಿಕಾರಾವಧಿ ರಾಜ್ಯಪಾಲರ ಕಚೇರಿಯಿಂದ ನವೀಕರಣಗೊಳ್ಳುತ್ತಿದೆ.

ನನೆಗುದಿಗೆ ಬಿದ್ದ ನೇಮಕಾತಿ ಪ್ರಕ್ರಿಯೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ 2018ರ ಮೇ 22ರಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಉಮೇಶ್ ನೇತೃತ್ವದಲ್ಲಿ ಸರ್ಕಾರ ನಾಲ್ಕು ಜನರ ಸಮಿತಿ ರಚಿಸಿತ್ತು. ಹಂಗಾಮಿ ಕುಲಪತಿ ಡಾ.ಕೆ.ಎಂ.ಇಂದಿರೇಶ, ಭಾರತೀಯ ಕೃಷಿ ಅನುಸಂಧಾನ ಮಂಡಳಿ (ಐಸಿಎಆರ್‌) ಸಹಾಯಕ ಮಹಾನಿರ್ದೇಶಕ ಡಾ.ಜಾನಕಿರಾಮ್ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಡಾ.ಎಂ.ವೈ.ಕಮತರ ಹೆಸರನ್ನು ಸಮಿತಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಆ ಪಟ್ಟಿ ತಿರಸ್ಕೃತಗೊಂಡಿದೆ. ಈ ಮಧ್ಯೆ ಡಾ.ಕಮತರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

***

ಪೂರ್ಣಾವಧಿ ಕುಲಪತಿ ಇಲ್ಲದಿರುವುದು ವಿಶ್ವವಿದ್ಯಾಲಯದ ಚಲನೆಯನ್ನು ಹಿಮ್ಮುಖಗೊಳಿಸಿದೆ. ಸರ್ಕಾರ ಆದಷ್ಟು ಬೇಗ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಿ.

-ಡಾ.ಎಂ.ಪಿ.ಬಸವರಾಜಪ್ಪ, ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಕರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT