ಭಾನುವಾರ, ಮೇ 31, 2020
27 °C
ಅನಾರೋಗ್ಯ ಹಿನ್ನೆಲೆ; ಕುರಬೂರು ಶಾಂತಕುಮಾರ್‌ ವಾಪಸ್‌

ಕಬ್ಬಿನ ಬಾಕಿ ಬಿಲ್‌ ಪಾವತಿಗೆ ಒತ್ತಾಯ: ರೈತರಿಂದ ಆಮರಣ ಉಪವಾಸ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಕಬ್ಬಿನ ಬಾಕಿ ಬಿಲ್‌ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದ್ದ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಅವರು ಮಂಗಳವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ಕೃಷಿಕ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಅವರು ಪಾಲ್ಗೊಂಡಿದ್ದಾರೆ.

‘ಇಷ್ಟು ದಿನಗಳವರೆಗೆ ಶಾಂತ ರೀತಿಯಿಂದ ಧರಣಿ ನಡೆಸಿದೇವು. ಆದರೆ, ಸರ್ಕಾರ ಇತ್ತ ನೋಡಲಿಲ್ಲ. ಅದಕ್ಕಾಗಿ ಆಮರಣ ಉಪವಾಸ ಆರಂಭಿಸಿದ್ದೇನೆ. ಸದ್ಯದಲ್ಲಿಯೇ ಪಾದಯಾತ್ರೆಯ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದೇನೆ’ ಎಂದು ಸಿದಗೌಡ ಮೋದಗಿ ಹೇಳಿದರು.

ಕುರಬೂರು ಶಾಂತಕುಮಾರ್‌ ವಾಪಸ್‌: ಸಿದಗೌಡ ಮೋದಗಿ ಅವರಿಗೆ ಕಳೆದ ಎರಡು ದಿನಗಳಿಂದ ಬೆಂಬಲ ನೀಡಿ, ಧರಣಿಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್‌, ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಇದಕ್ಕಿಂತ ಮುಂಚೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವೈದ್ಯರು ಹಾಗೂ ರೈತ ಮುಖಂಡರ ಸಲಹೆ ಮೇರೆಗೆ ವಾಪಸ್‌ ಹೋಗುತ್ತಿದ್ದೇನೆ. ನಾನು ಹೋದರೂ, ಇಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿಯುತ್ತದೆ. ಬೇಡಿಕೆ ಈಡೇರುವವರೆಗೆ ನಡೆಯಲಿದೆ’ ಎಂದು ಹೇಳಿದರು.

ವಕೀಲರ ಬೆಂಬಲ: ರೈತರ ಹೋರಾಟಕ್ಕೆ ಬೆಂಬಲ ನೀಡಲು ಬೆಳಗಾವಿ ವಕೀಲರ ಸಂಘ ನಿರ್ಧರಿಸಿದ್ದು, ಬುಧವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿಯಲು ತೀರ್ಮಾನಿಸಿದೆ.

‘ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸ್ಪಂದನೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಈ ತೀರ್ಮಾನ ಕೈಗೊಂಡಿದ್ದೇವೆ. ಕಲಾಪದಿಂದ ಹೊರಗುಳಿಯುವಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಘಟಕಗಳ ಪದಾಧಿಕಾರಿಗಳಿಗೆ, ಸದಸ್ಯರಿಗೆ ಸೂಚಿಸಲಾಗಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌. ಕಿವಡಸಣ್ಣವರ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು