ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಮತ್ತೆ ಮರಳಲಿ: ಸಿಎಂಗೆ ಟ್ವೀಟ್‌ ಮೂಲಕ ಒತ್ತಾಯ

ಅಕ್ಷರ ಗಾತ್ರ

ಬೆಂಗಳೂರು: ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್‌ ಅಧಿಕಾರಿ ಕ್ಯಾಪ್ಟನ್‌ ಪಿ.ಮಣಿವಣ್ಣನ್‌ ಅವರನ್ನು ಎತ್ತಂಗಡಿ ಮಾಡಿದ್ದು, ಅವರನ್ನು ಮತ್ತೆ ಇಲಾಖೆಗೆ ಕರೆಸಿಕೊಳ್ಳುವಂತೆ ಟ್ವಿಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಮಂಗಳವಾರ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಬ್ರಿಂಗ್‌ ಬ್ಯಾಕ್‌ ಕ್ಯಾಪ್ಟನ್‌ (#BringBackCaptain) ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

'ಕೋವಿಡ್‌–19 ಸಂದರ್ಭದಲ್ಲಿ ಕಾರ್ಮಿಕರಿಗೆ ಅನುವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಆಹಾರ ಹಂಚಿಕೆ, ಸ್ವಯಂ ಸೇವಕರನ್ನು ಸಂಘಟಿಸುವುದನ್ನು ಪರಿಣಾಮಕಾರಿಯಾಗಿ ನಡೆಸಿದ್ದು, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (ಡಿಐಪಿಆರ್) ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಜೊತೆಯಾಗಿ ಕಾರ್ಯನಿರ್ವಹಿಸಲು ಮಣಿವಣ್ಣನ್‌ ಅವರ ನೇತೃತ್ವ ಪ್ರಮುಖಪಾತ್ರ ವಹಿಸಿದೆ. ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಯನ್ನುಏಕಾಏಕಿ ಎತ್ತಂಗಡಿ ಮಾಡುವುದು ಸರಿಯಲ್ಲ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅವರ ಸೇವೆ ಅತ್ಯಗತ್ಯವಾಗಿದೆ.' ಎಂದು ಹಲವು ಟ್ವೀಟಿಗರು ಬರೆದುಕೊಂಡಿದ್ದಾರೆ.

ಕ್ಯಾಪ್ಟನ್‌ ಮಣಿವಣ್ಣನ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿ ಟ್ವೀಟ್‌ ಮಾಡುವ ಜೊತೆಗೆ ಅರ್ಜಿಗೆ ಡಿಜಿಟಲ್‌ ಸಹಿ ಸಂಗ್ರಹಿಸಲಾಗುತ್ತಿದೆ.

ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಕಾರ್ಮಿಕ ಇಲಾಖೆ ಮತ್ತು ಡಿಐಪಿಆರ್‌ ಎರಡೂ ಇಲಾಖೆಗಳ ಜವಾಬ್ದಾರಿ ಹಸ್ತಾಂತರಿಸಿರುವುದಾಗಿ ಇಂದು ಬೆಳಿಗ್ಗೆ ಮಣಿವಣ್ಣನ್‌ ಟ್ವೀಟ್‌ ಮಾಡಿದ್ದಾರೆ.

'ನಿಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಕಾರಕ್ಕೆ ಧನ್ಯವಾದಗಳು. ನನ್ನ ನಂತರದವರೆಗೂ ಅದನ್ನು ಮುಂದುವರಿಸಿ. ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ. ಟೆಲಿಗ್ರಾಂ ಮೂಲಕ ನನ್ನನ್ನು ಸಂಪರ್ಕಿಸಬಹುದು' ಎಂದಿದ್ದಾರೆ.

'ನಾನು ಕಂಡ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿ ಅವರು. ಕಾರ್ಮಿಕರ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಸಾರ್ವಜನಿಕರಿಗೆ ಯಾವಗಲೂ ಲಭ್ಯವಿರುತ್ತಿದ್ದರು' ಎಂಬುವವರು ಪವನ ಎಂಬುವವರು ಟ್ವೀಟಿಸಿದ್ದಾರೆ.

'ಕಾರ್ಮಿಕರು ಹಾಗೂ ನೌಕರರ ಪರವಾಗಿ ನಿಂತಿದ್ದಕ್ಕೆ ದೊಡ್ಡ ಬೆಲೆ ತೆರೆಬೇಕೆ? ಆದರೆ, ಏಕೆ?' ಎಂದು ಅಭಿ ಎಂಬ ಟ್ವೀಟಿಗರ ಬರೆದುಕೊಂಡಿದ್ದಾರೆ.

ವರ್ಗಾವಣೆ ಏನು ಕಾರಣ?

ಕೋವಿಡ್‌–19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಶ್ರಮಿಕ ಸಮುದಾಯದ ಸಮಸ್ಯೆ ನಿಭಾಯಿಸುವಲ್ಲಿ ಆದ ಎಡವಟ್ಟುಗಳು, ಆಹಾರ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಂದ ದೂರುಗಳೇ ಎತ್ತಂಗಡಿಗೆ ಕಾರಣ ಎಂದು ಮೂಲಗಳು ಹೇಳಿವೆ.

ಆಹಾರ ಕಿಟ್‌ಗಳ ವಿತರಣೆ ಮತ್ತು ಪಾಸ್‌ ವಿತರಣೆಗೆ ಸಂಬಂಧಿಸಿದಂತೆ ಮಣಿವಣ್ಣನ್‌ ವಿರುದ್ಧ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲದೆ, ಶಾಸಕರು ಕೇಳಿದಷ್ಟು ಆಹಾರ ಧಾನ್ಯಗಳನ್ನು ಕೊಡಲಿಲ್ಲ ಮತ್ತು ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದೇ ಅವರ ವಿರುದ್ಧ ದೂರುಗಳು ಮುಖ್ಯಮಂತ್ರಿಗೆ ತಲುಪಲು ಕಾರಣ ಎಂದೂ ಹೇಳಲಾಗುತ್ತಿದೆ.

ಕಾರ್ಮಿಕರ ದುಡಿಮೆ ಅವಧಿಯನ್ನು ಎಂಟು ಗಂಟೆಗಳ ಬದಲಿಗೆ 12 ಗಂಟೆಗಳಿಗೆ ಹೆಚ್ಚಿಸಲು ಕ್ರಮ ವಹಿಸುವುದಾಗಿ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಭರವಸೆ ಕೊಟ್ಟಿದ್ದಕ್ಕೆ, ಕಾರ್ಮಿಕ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಗಿತ್ತು.

ಎತ್ತಂಗಡಿ ಆಗಿರುವ ಮಣಿವಣ್ಣನ್‌ಗೆ ಯಾವುದೇ ಹುದ್ದೆಯನ್ನೂ ತೋರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT